· ಅನ್ನದಾತನ ಮುಖದಲ್ಲಿ ಮಂದಹಾಸ.

· ಶುಂಠಿ ಬಿತ್ತನೆ ಸುಗಮ

· ಭತ್ತದ ಗದ್ದೆಗಳ ಉಳುಮೆ ಪ್ರಗತಿಯಲ್ಲಿ.

· ಕಾಫಿ ತೋಟಗಳಲ್ಲಿ ನೆರಳು ಸವರುವಿಕೆ.

· ಕಾಳು ಮೆಣಸು ಬಳ್ಳಿಗಳಿಗೆ ಸಿಂಪಡಣೆ.

· ನೀರು ತುಂಬಲು ರೈತರ ಕಾತರ

· ಕಾಫಿ–ಮರಗೆಣಸು ನಾಟಿ ಕಾರ್ಯ.

ಏಪ್ರಿಲ್ ಕೊನೆಯವಾರದಿಂದ ಆರಂಭವಾದ ಪೂರ್ವ ಮುಂಗಾರು ಮಳೆ ಜಿಲ್ಲೆಯ ಕೆಲವೆಡೆ ತನ್ನ ಸಿಂಚನವನ್ನು ಹರಡಿದೆ. ಮಳೆ ಸುಮಾರು ಎರಡು ತಿಂಗಳಿಗಿಂತ ತಡವಾಗಿ ಆರಂಭವಾದ ಕಾರಣ ಜಿಲ್ಲೆಯ ಕೃಷಿಕರು ಆತಂಕಕ್ಕೊಳಗಾಗಿದ್ದರು.

ಕಳೆದ ಕೆಲ ವಾರಗಳಿಂದ ಜಿಲ್ಲೆಯ ಬಹುತೇಕ ಕಡೆ ಬಿದ್ದ ಪೂರ್ವ ಮುಂಗಾರು ಮಳೆ ಕೃಷಿಕನಲ್ಲಿ ಆಶಾ ಭಾವನೆ ಮೂಡಿಸಿದೆ. ತಡವಾಗಿ ಬಂದ ಮಳೆಯಿಂದ ಪ್ರೇರಿತರಾದ ಜಿಲ್ಲೆಯ ಕೃಷಿಕ ಸಮುದಾಯ ತನ್ನ ಸಾಂಪ್ರಾದಾಯಿಕ ಕಾಯಕಕ್ಕೆ ಕೈ ಹಚ್ಚಿಕೊಂಡಿದ್ದಾರೆ.

ನಿರಂತರ ಬಿಸಿಲ ಝಳದಿಂದಾಗಿ ಕಂಗೆಟ್ಟ ಜಿಲ್ಲೆಯ ರೈತಾಪಿ ವರ್ಗದವರಿಗೆ ಏಪ್ರಿಲ್‍ನಲ್ಲಿ ಬಂದ ಮಳೆ ನಿಟ್ಟುಸಿರು ಬಿಡುವಂತೆ ಮಾಡಿತ್ತು. ಸತತ ಬಿಸಿಲಿನಿಂದಾಗಿ ಭತ್ತದ ಗದ್ದೆಗಳಿಗೆ ಕಾಲಿಡಲೂ ಸಾಧ್ಯವಾದಷ್ಟು ಗಟ್ಟಿಯಾಗಿತ್ತು. ಆದರೆ, ಆಗಾಗ ಮಳೆ ಬೀಳುತ್ತಿರುವ ಪರಿಣಾಮ ಕೃಷಿ ಚಟುವಟಿಕೆಯು ಏಕಾಏಕಿ ಚುರುಕು ಪಡೆದುಕೊಂಡಿತು. ಬಹುತೇಕ ಗದ್ದೆಗಳಲ್ಲಿ ಟ್ರ್ಯಾಕ್ಟರ್ ಸದ್ದು ಕೇಳಲಾರಂಭವಾಯಿತು. ತಾಮುಂದು-ನಾ ಮುಂದು ಎಂಬಂತೆ ಎಲ್ಲಾ ಕೃಷಿಕರೂ ಬಾಡಿಗೆ ಟ್ರ್ಯಾಕ್ಟರ್‍ಗಾಗಿ ಅಲ್ಲಿ-ಇಲ್ಲಿ ಓಡಾಡಿ ತಮ್ಮ ಭತ್ತದ ಗದ್ದೆಗಳನ್ನು ತರಾತುರಿಯಲ್ಲಿ ಉಳುಮೆ ಮಾಡಿಸುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ. ಭತ್ತದ ಗದ್ದೆಗಳ ಅಂಚಿನಲ್ಲಿ ಬೆಳೆದ ಕಾಡು ಸವರಿ, ತೋಡುಗಳನ್ನು ಸ್ವಚ್ಛ ಗೊಳಿಸುತ್ತಿರುವದು ಕಂಡುಬಂದಿದೆ.

ಜಿಲ್ಲೆಯ ಬಹುತೇಕ ಕಡೆ ಕೃಷಿಕರು ಮಳೆಯಿಂದ ಪ್ರೇರÀಣೆ ಪಡೆದು ಈಗಾಗಲೇ ಉತ್ತು ಸಿದ್ಧ ಮಾಡಿಕೊಂಡಿದ್ದ ಜಮೀನುಗಳಲ್ಲಿ ಶುಂಠಿ ಬಿತ್ತನೆ ಆರಂಭಿಸಿರುವರು. ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಟ್ಯಾಕ್ಟರ್‍ಗಳಲ್ಲಿ ಉಳುಮೆ ಮಾಡಿ ಶುಂಠಿ ಬಿತ್ತನೆ ಮಾಡಲು ಆಕಾಶದತ್ತ ದೃಷ್ಟಿ ಹರಿಸಿದ್ದ ರೈತರನ್ನು ವರುಣ ಮಾತ್ರ ಕೊಡಗಿನ “ಶಬರಿ”ಯಂತೆ ಕಾಯಿಸಿದ್ದ. ಇದೀಗ ಕೊಂಚ ತಡವಾಗಿಯಾದರೂ, ವರುಣ ಕೊಡಗಿನ ಜನತೆಯತ್ತ ಕೃಪೆ ತೋರಿಸಿದ್ದಾನೆ.

ಜಿಲ್ಲೆಯ ಹಲವಾರು ಕಡೆ ಗಳಲ್ಲಿ ಕೃಷಿಕರು ಈ ವರ್ಷವೂ ಶುಂಠಿ ಕೃಷಿಯಲ್ಲಿ ತೊಡಗಿರುವದು ಕಂಡು ಬಂದಿದೆ. ಪೂರ್ವ ಮುಂಗಾರು ಮಳೆಗೂ ಮೊದಲೇ ಗದ್ದೆಗಳನ್ನು ಉತ್ತು, ಚರಂಡಿಗಳನ್ನು ತೆಗೆದು ಶುಂಠಿ ನೆಡಲು ಮಡಿಗಳನ್ನು ಸಿದ್ಧ ಪಡಿಸಿದ್ದರು. ಸಕಾಲಿಕವಾಗಿ ಮಳೆ ಬಾರದ್ದರಿಂದ ಶುಂಠಿ ಈ ವರ್ಷ ಕೊಂಚ ವಿಳಂಬವಾಗಿರುವದು ಕಂಡು ಬಂದಿದೆ. ನೀರಿನಾಶ್ರಯ ವಿರುವ ಬೆಳೆಗಾರರು ಮಳೆಯನ್ನು ನಂಬದೇ ತುಂತುರು ನೀರು ಹನಿಸಿ, ಅಲ್ಲಲ್ಲಿ ಶುಂಠಿಯನ್ನು ವಾಡಿಕೆಯಂತೆ ಫೆಬ್ರವರಿ ತಿಂಗಳಿಗೂ ಮುನ್ನ ಬಿತ್ತನೆ ಮಾಡಿದ್ದರು. ಕಾಲಕಾಲಕ್ಕೆ ಅದಕ್ಕೆ ತುಂತುರು ನೀರಾವರಿ ಹನಿಸಿದ್ದರ ಪರಿಣಾಮ ಇದೀಗ ಶುಂಠಿಯು ಮೊಳಕೆಯೊಡೆದು ಪ್ರಥಮ ಹಂತದ ಕಳೆ ತೆಗೆಯಲು ಸಿದ್ಧವಾಗಿದೆ. ಅಲ್ಲಲ್ಲಿ ಶುಂಠಿಯ ಕಳೆ ಕೀಳುವ ಕಾರ್ಯವು ಭರದಿಂದ ಸಾಗುತ್ತಿರುವದು ಗೋಚರವಾಗಿದೆ. ನೀರಿನಾಶ್ರಯ ವಿಲ್ಲದ ಶುಂಠಿ ಕೃಷಿಕರು ಕಳೆದ ಕೆಲವಾರಗಳಿಂದ ಶುಂಠಿ ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ಜಿಲ್ಲೆಯ ಕಾಫಿ ತೋಟಗಳ ಕೆಳ ಹಂತದಲ್ಲಿರುವ ಹಾಲುವಾಣ, ಗ್ಲಿರಿಸೀಡಿಯಾದಂತಹ ತಾತ್ಕಾಲಿಕ ನೆರಳು ಮರಗಳ ಸವರುವಿಕೆಯು ಭರದಿಂದ ಸಾಗಿದೆ. ಜೊತೆಗೆ ಈ ಮರಗಳ ಸೊಪ್ಪನ್ನು ಕಾಂಪೋಸ್ಟ್ ಗೊಬ್ಬರಕ್ಕಾಗಿ ಗುಂಡಿಗಳಲ್ಲಿ ಶೇಖರಿಸುತ್ತಿದ್ದಾರೆ. ಕೊಡಗಿನ ಬಹುತೇಕ ಎಲ್ಲಾ ಕಡೆ ಧಾರಾಳವಾಗಿ ಕಂಡುಬರುವ ಹಸಿರು ಬೇಲಿಗಳ ಸವರುವಿಕೆಯೂ ಅತ್ಯಂತ ವೇಗವಾಗಿ ನಡೆಯುತ್ತಿದೆ. ಸಾಕಷ್ಟು ಮಳೆಯಾಗಿರುವ ನಾಪೋಕ್ಲು, ಹೊದ್ದೂರು ವ್ಯಾಪ್ತಿಯಲ್ಲಿ ಕಾಫಿ ಗಿಡಗಳಿಗೆ ರಾಸಾಯನಿಕ ಗೊಬ್ಬರ ಹಾಕಲು ಗಿಡಗಳ ಬುಡದಲ್ಲಿರುವ ಒಣ ಎಲೆ-ಕಸ ಕಡ್ಡಿಗಳನ್ನು ಸರಿಸುವ ಕೆಲಸ ಭರದಿಂದ ಸಾಗಿದೆ. ಕೆಲ ಉತ್ಸಾಹಿ ಕಾಫಿ ಬೆಳೆಗಾರರು ಮೊದಲ ಹಂತದ ರಾಸಾಯನಿಕ ಗೊಬ್ಬರ ಹಾಕುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ತಮ್ಮ ಗ್ರಾಮಗಳ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಿಗಬಹುದಾದ ಬಡ್ಡಿ ರಹಿತ ಸಾಲದಿಂದ ರಾಸಾಯನಿಕ ಗೊಬ್ಬರ ಖರೀದಿಸಿ, ಕಾಫಿ, ಕಿತ್ತಳೆ, ಕಾಳುಮೆಣಸು, ಏಲಕ್ಕಿ ಮುಂತಾದ ತೋಟಗಾರಿಕಾ ಬೆಳೆಗಳಿಗೆ ಹಾಕುತ್ತಿದ್ದಾರೆ.

ಕಾಳುಮೆಣಸು ಸ್ಪೆಶಲ್ ಸಿಂಪಡಣೆ

ಕಾಳುಮೆಣಸಿನ ಬಳ್ಳಿಗಳ ಬೆಳವಣಿಗೆಗೆ ಮತ್ತು ಇಳುವರಿ ಹೆಚ್ಚಿಸಲು ನೆರವಾಗಬಲ್ಲಂತಹ ಪೋಷಕಾಂಶ ಸಿಂಪಡಣೆಯ ಕಾರ್ಯವೂ ಭರದಿಂದ ಸಾಗಿದೆ. ಕಾಳುಮೆಣಸು ಬಳ್ಳಿಗಳನ್ನು ಕಾಡುವ (ಜಂತು ಹುಳಗಳ ಕಾಟ) ನಿಧಾನ ಸೊರಗು ಕಾಟ ದಿಂದ ಬಳ್ಳಿಗಳನ್ನು ನಿಯಂತ್ರಿಸಿ, ಸಂರಕ್ಷಿಸಲು ಬೇವಿನ ಹಿಂಡಿ ಮತ್ತು ಪೊರೈಟ್ ಹರಳುಗಳನ್ನು ಬಳ್ಳಿಗಳ ಬುಡಕ್ಕೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ಬಳ್ಳಿಗಳ ಚಿಗುರುವಿಕೆ ಮತ್ತು ಹೂ ಬರಲು ಸಹಕಾರಿಯಾಗಬಲ್ಲ ನಿಟ್ಟಿನಲ್ಲಿ ಮರಗಳ ನೆರಳು ಸವರುವಿಕೆಯು ಮುಕ್ತಾಯ ಹಂತದಲ್ಲಿರುವದು ಸಹಾ ಕಂಡುಬಂದಿದೆ.

ಭತ್ತಕ್ಕೆ ಬೆಳೆಗಾರರಿಗೆ ನಿರೀಕ್ಷೆಗೆ ತಕ್ಕಂತೆ ಬೆಲೆ ಸಿಗದ ಹಿನ್ನೆಲೆಯಲ್ಲಿ ಬಹುತೇಕ ಕಡೆ ಭತ್ತದ ಗದ್ದೆಗಳು ಕಾಫಿ ತೋಟಗಳಾಗಿವೆ. ಇಂತಹ ತೋಟಗಳು ಬೇಸಿಗೆಯ ಸುಡು ಬಿಸಿಲಿಗೆ ಬಾಡಿ ಕರಕಲಾಗುವದು ಸಾಮಾನ್ಯ. ಇದನ್ನು ಸಾಧ್ಯವಾದಷ್ಟು ನಿಯಂತ್ರಿಸಲು ಇಂತಹ ತೋಟಗಳನ್ನು ಕಾಫಿ ಕೊಯ್ಲಿಗೆ ಮುನ್ನಾ ಧೂಳಗತೆ ಮಾಡಿಸಿರುವದಿಲ್ಲ. ಇಂತಹ ತೋಟಗಳಲ್ಲಿ ಮಳೆ ಬಂದಾಕ್ಷಣ ಭಾರೀ ಪ್ರಮಾಣದ ಹುಲ್ಲು ಕಾಣಿಸಿಕೊಳ್ಳುತ್ತದೆ. ಇದನ್ನು ನಿಯಂತ್ರಿಸಲು ಬೆಳೆಗಾರರು ಈ ಸಮಯದಲ್ಲಿ ಧೂಳಗತೆ ಮಾಡಿಸುತ್ತಿದ್ದಾರೆ. ಇದೇ ರೀತಿ ಗದ್ದೆಗಳಲ್ಲಿ ಮಾಡಿದ ಅಡಿಕೆ ತೋಟಗಳಲ್ಲಿಯೂ ಸಹಾ ಹಲವಾರು ಕಡೆ ಧೂಳಗತೆಯೂ ಪ್ರಗತಿಯಲ್ಲಿದೆ.

ನೀರು ತುಂಬಲು ರೈತರ ಕಾತರ

ಈ ವರ್ಷ ಸುದೀರ್ಘ ಬೇಸಿಗೆ ಇದ್ದ ಕಾರಣ ಜಿಲ್ಲೆಯ ಸಿರಿವಂತ-ಮಧ್ಯಮ ವರ್ಗದ ರೈತಾಪಿ ವರ್ಗದವರು ತಮ್ಮ ಸಣ್ಣ- ಪುಟ್ಟ ಕೆÀರೆಗಳನ್ನು ಬೃಹದಾಕಾರವಾಗಿ ವಿಸ್ತರಿಸಿದ್ದರು. ಮತ್ತೆ ಕೆಲವರು ಹೊಸದಾಗಿ ವಿಸ್ತಾರವಾದ ಕೆರೆಗಳನ್ನು ವಿವಿಧ ಆಧುನಿಕ ಯಂತ್ರಗಳನ್ನು ಬಳಸಿ ತೆಗಿಸಿದ್ದರು. ಈ ಕೆರೆಗಳಿಗೆ ಮಳೆಗಾಲದಲ್ಲಿ ಧಾರಾಳವಾಗಿ ದೊರಕುವ ಮಳೆ ನೀರನ್ನು ಸಂಗ್ರಹಿಸಲು ಬೆಳೆಗಾರರು ಕಾತರದಿಂದ ಮಳೆಯನ್ನು ಎದುರು ನೋಡುತ್ತಿದ್ದಾರೆ. ಇವುಗಳಲ್ಲಿ ಸಂಗ್ರಹವಾಗುವ ನೀರನ್ನು ಮುಂಬರುವ ಸಾಲಿನಲ್ಲಿ ಕಾಫಿ ತೋಟಗಳಿಗೆ ತುಂತುರು ನೀರಾವರಿ ಮೂಲಕ ಹನಿಸಿ, “ಬಂಪರ್” ಬೆಳೆ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ವರುಣ ಮತ್ತೆ ಅಲ್ಪ ವಿರಾಮ ಹಾಕಿದಂತೆ ಭಾಸವಾಗುತ್ತಿದೆ.

ಕಳೆದ ಕೆಲವು ವಾರಗಳಿಂದ ಉತ್ತಮವಾಗಿ ಮಳೆ ಬರುತ್ತಿ ರುವ ಹಿನ್ನೆಲೆಯಲ್ಲಿ ಕೆಲ ಕಾಫಿ ಬೆಳೆಗಾರರು ಪಾಳು ಬಿದ್ದಿದ್ದ ಗದ್ದೆಗಳಲ್ಲಿ ವಿವಿಧ ತಳಿಗಳ ಗಿಡಗಳನ್ನು ನೆಡುತ್ತಿದ್ದಾರೆ. ಕಾಕೋಟು ಪರಂಬು-ಕದನೂರು ವ್ಯಾಪ್ತಿಯಲ್ಲಿ ಈ ಕಾರ್ಯವು ಪ್ರಗತಿಯಲ್ಲಿದೆ. ಜಿಲ್ಲೆಯ ಕೆಲವೆಡೆಗಳಲ್ಲಿ ಬೆಳೆಗಾರರು ತಮ್ಮ ಜಮೀನು ಗಳಲ್ಲಿ ಮರಗೆಣಸು ಕಡ್ಡಿಗಳನ್ನು ನಾಟಿ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

? ಪ್ರಧಾನ್