ಭಾಗಮಂಡಲ, ನ. 24: ಜಿಲ್ಲೆಯಲ್ಲಿ ಇತ್ತೀಚೆಗೆ ಕೇಳಿ ಬರುತ್ತಿರುವ ಮಕ್ಕಳ ಅಪಹರಣ ಯತ್ನ ಪ್ರಕರಣಗಳ ಬಗ್ಗೆ ಬಿರುಸಿನ ತನಿಖೆ ನಡೆಯುತ್ತಿದೆ. ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ “ಶಕ್ತಿ”ಗೆ ತಿಳಿಸಿದರು. ಭಾಗಮಂಡಲ ವಿಭಾಗದಲ್ಲಿ ಮಕ್ಕಳ ಅಪಹರಣ ಯತ್ನದ ಬಗ್ಗೆ ಇಂದು “ಶಕ್ತಿ”ಯಲ್ಲಿ ಪ್ರಕಟಗೊಂಡ ವರದಿಗೆ ಪೊಲೀಸ್ ಇಲಾಖೆ ತಕ್ಷಣ ಸ್ಪಂದಿಸಿದೆ. ಅಲ್ಲದೆ, ಭಾಗಮಂಡಲ ವಿಭಾಗದಲ್ಲಿ ನಕ್ಸಲ್ ಚಟುವಟಿಕೆ ಮರುಕಳಿಸಿದೆಯೇ ಎಂಬ ಕುರಿತು ಖಾತರಿ ಪಡಿಸಿ ಕೊಳ್ಳಲು ಪೊಲೀಸ್ ಇಂಟೆಲಿಜೆನ್ಸ್ ತಂಡವನ್ನು ಕಳುಹಿಸಲಾಗಿದೆ. ಈ ಬಗ್ಗೆ ಖಾತರಿಯಾದರೆ ಜಿಲ್ಲಾ ನಕ್ಸಲ್ ನಿಗ್ರಹ ಪಡೆಯಿಂದ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗುವದು ಎಂದು ಎಸ್.ಪಿ. ವಿವರಿಸಿದರು.

ಇಂದು ಭಾಗಮಂಡಲ, ಚೆಟ್ಟಿಮಾನಿಗಳಲ್ಲಿ ಪೊಲೀಸ್ ತಂಡ ತೀವ್ರ ತಪಾಸಣೆ ನಡೆಸಿತು. ತಾವೂರುವಿನ ಮನೆಯೊಂದರಲ್ಲಿ ಆಗಂತುಕರು ಬೀಡು ಬಿಟ್ಟಿದ್ದಾರೆ ಎನ್ನುವ ಸಂಶಯ ಮೂಡಿದ್ದು ಈ ಕುರಿತೂ ತಪಾಸಣೆ ನಡೆಸಲಾಯಿತು.

ಮಕ್ಕಳ ಅಪಹರಣ ಯತ್ನ ಘಟನೆ ಸಿದ್ದಾಪುರ ವಿಭಾಗದಲ್ಲಿಯೂ ಇತ್ತೀಚೆಗೆ ನಡೆದಿತ್ತು. ಆ ಬಳಿಕ ಜಿಲ್ಲೆಯ 150 ಶಾಲಾ ಮುಖ್ಯೋಪಾ ಧ್ಯಾಯರುಗಳನ್ನು ಕರೆದು ಸಭೆ ನಡೆಸಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುನ್ಸೂಚನೆ ನೀಡಲಾಗಿದೆ ಎಂದು ಎಸ್.ಪಿ., ಮಾಹಿತಿಯಿತ್ತರು. ಮುಖ್ಯೋಪಾಧ್ಯಾ ಯರುಗಳು ತಮ್ಮ ಶಾಲೆಗಳಲ್ಲಿ ಪಾಲಿಸಬೇಕಾದ ಅಂಶಗಳು ಈ ಕೆಳಗಿನಂತಿವೆ.

ಎಲ್ಲಾ ಶಾಲೆಗಳಿಗೆ ಸಿಸಿಟಿವಿ ಅಳವಡಿಸುವದು, ಭದ್ರತೆಯ ಬಗ್ಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸಿ ಕೊಳ್ಳುವದು,

(ಮೊದಲ ಪುಟದಿಂದ) ಶಾಲಾ ಬಸ್, ಟೆಂಪೊ, ಆಟೋಗಳ ಚಾಲಕರ ಸಂಪೂರ್ಣ ವಿಳಾಸ, ವಿವರಗಳನ್ನು ಮುಂಚಿತವಾಗಿ ಪಡೆದಿಟ್ಟುಕೊಳ್ಳುವದು, ಶಾಲಾ ಮುಖ್ಯಸ್ಥರು ಶಾಲಾ ವಾಹನಗಳ ಚಾಲಕರಿಗೆ ಮಕ್ಕಳ ಅಪಹರಣ ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವದು, ಶಾಲಾ ವಿದ್ಯಾರ್ಥಿಗಳು ಒಬ್ಬಂಟಿಯಾಗಿ ತಿರುಗಾಡದಂತೆ ತಿಳುವಳಿಕೆ ನೀಡುವದು, ಶಾಲಾ ವಿದ್ಯಾರ್ಥಿಗಳು ಅಪರಿಚಿತರು ನೀಡುವ ಯಾವದೇ ಆಮಿಷ, ಸಿಹಿ ತಿಂಡಿ ಹಾಗೂ ಇತರ ವಸ್ತುಗಳನ್ನು ಸ್ವೀಕರಿಸದಂತೆ ಹಾಗೂ ಅಪರಿಚಿತರೊಂದಿಗೆ ಹೋಗದಂತೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುವದು, ಅಪರಿಚಿತ ವ್ಯಕ್ತಿಗಳು ಶಾಲಾ ಆವರಣದಲ್ಲಿ, ನಿರ್ಜನ ಪ್ರದೇಶದಲ್ಲಿ ಕಂಡುಬಂದಲ್ಲಿ ಅವರ ಚಹರೆ, ವಾಹನ ನೋಂದಣಿ ಸಂಖ್ಯೆಯನ್ನು ಗಮನಿಸಿದ ಕೂಡÀಲೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಅಥವ ನಿಸ್ತಂತು ಘಟಕದ ದೂರವಾಣಿ ಸಂಖ್ಯೆ 082722282330 ಅಥವಾ 100 ಕ್ಕೆ ಕರೆ ಮಾಡಿ ಮಾಹಿತಿ ನೀಡುವದು, ಶಾಲೆಯಲ್ಲಿ ದಿನಂಪ್ರತಿ ಶಿಕ್ಷಕರು ಹಾಜರಾತಿ ತೆಗೆದುಕೊಳ್ಳುವ ವೇಳೆ ಮಾಹಿತಿಯಿಲ್ಲದೇ ಗೈರು ಹಾಜರಾದ ವಿದ್ಯಾರ್ಥಿಗಳ ಬಗ್ಗೆ ನಿಗಾ ವಹಿಸುವದು ಹಾಗೂ ಗೈರು ಹಾಜರಾತಿ ಬಗ್ಗೆ ಪೋಷಕರಿಗೆ ಮಾಹಿತಿ ನೀಡುವದು, ಶಾಲಾ ಶಿಕ್ಷಕರು ಪೋಷಕರ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡುವದು.