ಮಡಿಕೇರಿ, ಜೂ. 10: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾ ಪಂಚಾಯಿತಿ ಕಚೇರಿವರೆಗೆ ಮೆರವಣಿಗೆ ಸಾಗಿದ ಪ್ರತಿಭಟನಾಕಾರರು, ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿರದು. ಕೊಡಗು ಜಿಲ್ಲೆಯಲ್ಲಿ 104 ಗ್ರಾ.ಪಂ.ನಲ್ಲಿ ದುಡಿಯುತ್ತಿರುವ ನೌಕರರಿಗೆ ಸರಕಾರ ನಿಗದಿಪಡಿಸಿದ ವೇತನವನ್ನು ಈವರೆಗೆ ನೀಡಿಲ್ಲ. ಅಲ್ಲದೆ, ಬಾಕಿ ಇರುವ ವೇತನವನ್ನು ಇನ್ನೂ ನೀಡಿಲ್ಲ. ಕೂಡಲೇ ಸರಕಾರ ನಿಗದಿಪಡಿಸಿದ ವೇತನವನ್ನು ನೀಡುವದರೊಂದಿಗೆ ಬಾಕಿ ಇರುವ ವೇತನವನ್ನು ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಗ್ರಾ.ಪಂ. ನೌಕರರಿಗೆ ಮಾಸಿಕ ವೇತನ ರೂ. 18 ಸಾವಿರ ವೇತನ ನೀಡಬೇಕು. ಬಿಲ್ ಕಲೆಕ್ಟರ್‍ಗಳಿಂದ ಕಾರ್ಯದರ್ಶಿ ಹುದ್ದೆಗೆ ಶೇ. 100 ರಷ್ಟು ಅವಕಾಶ ಕಲ್ಪಿಸಬೇಕು, ಲೆಕ್ಕ ಸಹಾಯಕರ ಹುದ್ದೆಗೆ ಶೇ. 50 ರಷ್ಟು ಪಂಚಾಯಿತಿ ನೌಕರರಿಗೆ ಮೀಸಲಿಡಬೇಕು, ಸರಕಾರದ ಆದೇಶಗಳನ್ನು ಜಿಲ್ಲೆಯಲ್ಲಿ ಜಾರಿಗೊಳಿಸಬೇಕು, ಹೊರಗುತ್ತಿಗೆಯನ್ನು ಕೈಬಿಟ್ಟು, ಎಲ್ಲಾ ನೌಕರರನ್ನು ಖಾಯಂಗೊಳಿಸಬೇಕು ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಸಂಘದ ಅಧ್ಯಕ್ಷ ಭರತ್ ಎಚ್ಚರಿಸಿದ್ದಾರೆ.