ಗೋಣಿಕೊಪ್ಪಲು, ಆ. 28 : ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ಕೊಡಗು ಫ್ಲೋರ್ ಬಾಲ್ ಅಸೋಸಿಯೇಷನ್ ವತಿಯಿಂದ ನಡೆದ ಎರಡನೇ ವರ್ಷದ ರಾಜ್ಯಮಟ್ಟದ ಫ್ಲೋರ್‍ಬಾಲ್ ಲೀಗ್ ಪಂದ್ಯಾಟದ ಪುರುಷರ ವಿಭಾಗದಲ್ಲಿ ಕೊಡಗು ತಂಡ ಚಾಂಪಿಯನ್, ಬೆಂಗಳೂರು ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.

ಕೊಡಗು ತಂಡವು 3-2 ಗೋಲುಗಳ ಅಂತರದಲ್ಲಿ ಬೆಂಗಳೂರು ತಂಡವನ್ನು ಮಣಿಸಿತು. ಕೊಡಗು ತಂಡದ ಪರ ಅವಿನಾಶ್ 2 ಗೋಲು ಬಾರಿಸುವ ಮೂಲಕ ಗೆಲುವಿನ ರೂವಾರಿಯಾದರು. ಬೆಂಗಳೂರು ತಂಡದ ಪರ ನಿಖಿಲ್ ಹಾಗೂ ರೇವಂತ್ ತಲಾ 1 ಗೋಲು ಬಾರಿಸಿದರು. ಬೆಂಗಳೂರು ತಂಡದ ಆಟಗಾರ ಬಾರಿಸಿದ ಸೆಲ್ಫ್ ಗೋಲುಗಳ ಸಹಾಯದಿಂದ ಕೊಡಗು ತಂಡ ಗೆಲ್ಲಲು ಸಹಕಾರಿ ಆಯಿತು.

ರೋಚಕತೆಯಿಂದ ಕೂಡಿದ್ದ ಮಹಿಳೆಯರ ಅಂತಿಮ ಪಂದ್ಯದಲ್ಲಿ ಬೆಂಗಳೂರು ತಂಡವು ಕೊಡಗು ತಂಡವನ್ನು ಟೈಬ್ರೇಕರ್‍ನಲ್ಲಿ 4-3 ಗೋಲುಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಉಭಯ ತಂಡಗಳು ಪಂದ್ಯದ ಅವಧಿಯಲ್ಲಿ 2 ಗೋಲುಗಳ ಸಮಬಲ ಸಾಧಿಸಿತು. ಟೇಬ್ರೇಕರ್‍ನಲ್ಲಿ ಬೆಂಗಳೂರು 2, ಕೊಡಗು 1 ಗೋಲು ಬಾರಿಸಿತು. ಬೆಂಗಳೂರು ಪರ ಸ್ವಾತಿ, ಶಿಲ್ಪ ಗೋಲು ಹೊಡೆದರು. ಕೊಡಗು ತಂಡದ ಪರ ಪ್ರಿಯಾ 2. ಮೋನಿಶಾ 1 ಗೋಲು ಹೊಡೆದರು.

ಪುರುಷರ ಮೂರನೇ ತಂಡವಾಗಿ ಕೊಡಗು ಸಿ, ಮಹಿಳೆಯರ ಮೂರನೇ ತಂಡವಾಗಿ ಕೊಡಗು ‘ಬಿ' ತಂಡ ಪಡೆದುಕೊಂಡರು.

ಮಹಿಳೆ ಹಾಗೂ ಪುರುಷ ತಂಡಗಳಲ್ಲಿ ಉತ್ತಮ 8 ಆಟಗಾರರಿಗೆ ಉತ್ತಮ ಆಟಗಾರ ಪ್ರಶಸ್ತಿ ನೀಡಲಾಯಿತು. ಪುರುಷರಲ್ಲಿ ಕೊಡಗು ‘ಎ' ತಂಡದ ಪೂವಯ್ಯ, ಬೆಂಗಳೂರು ‘ಎ' ತಂಡದ ರೆಡ್ಡಿ ಶೇಖರ್, ಬೆಂಗಳೂರು ತಂಡದ ರಾಘವೇಂಧ್ರ, ತುಮಕೂರು ತಂಡದ ಮದನ್ ಪಡೆದುಕೊಂಡರು.

ಮಹಿಳೆಯರಲ್ಲಿ ಕೊಡಗು ‘ಎ' ತಂಡದ ಧರಣಿ ಹಾಗೂ ಪ್ರಿಯಾ, ತುಮಕೂರು ತಂಡದ ದರ್ಶಿಣಿ, ಬೆಂಗಳೂರು ತಂಡದ ಪೂಜಾ ಪಡೆದುಕೊಂಡರು. ಪುರುಷರ ವಿನ್ನರ್ಸ್ ಟ್ರೋಫಿಯನ್ನು ಮೀದೇರಿರ ಬೋಪಣ್ಣ ಜ್ಞಾಪಕಾರ್ಥ, ರನ್ನರ್ಸ್ ಟ್ರೋಫಿಯನ್ನು ಬಾದುಮಂಡ ಗಣಪತಿ ಹಾಗೂ ರತ್ನಾವತಿ ಅವರು ನೀಡಿದ್ದಾರೆ. ಮಹಿಳೆಯರ ವಿನ್ನರ್ಸ್ ಟ್ರೋಫಿಯನ್ನು ಬುಟ್ಟಿಯಂಡ ಚಂಬಕ್ಕಿ ಜ್ಞಾಪಕಾರ್ಥ, ರನ್ನರ್ಸ್ ಟ್ರೋಪಿಯನ್ನು ಚಿಮ್ಮುಣೀರ ನಂಜಮ್ಮ ಜ್ಞಾಪಕಾರ್ಥ, ಎರಡು ವಿಭಾಗದ ತೃತೀಯ ಸ್ಥಾನಕ್ಕೆ ಕೊಡಗು ಫ್ಲೋರ್ ಬಾಲ್ ಅಸೋಸಿಯೇಷನ್ ಟ್ರೋಫಿ ನೀಡಲಿದೆ. 6 ವಿಭಾಗಗಳ ಬೆಸ್ಟ್ ಆಟಗಾರರಿಗೆ ಕಡೇಮಾಡ ರಾಜಪ್ಪ ಜ್ಞಾಪಕಾರ್ಥ ನೀಡಲಾಗುತ್ತಿದೆ.

ತಾಂತ್ರಿಕ ನಿರ್ದೇಶಕರುಗಳಾಗಿ ಮಿನ್ನಂಡ ಜೋಯಪ್ಪ ಹಾಗೂ ಮಲ್ಲಮಾಡ ಸಂತೋಷ್ ಕಾರ್ಯನಿರ್ವಹಿಸಿದರು. ತಾಂತ್ರಿಕ ವರ್ಗದಲ್ಲಿ ಮಹೇಶ್, ವರ್ಶಿತಾ, ಜಯಂತ್, ಅನಿರುದ್ಧ್, ರೇವತಿ, ಮಹಂತೇಶ್, ಧೀರಜ್, ರೆಫ್ರಿಗಳಾಗಿ ಜಯಂತ್, ಮಹಂತೇಶ್, ನಿಖಿಲ್, ವಿನೋದ್ ಕುಮಾರ್, ಮದನ್, ಪ್ರೀತಿ, ಧನಂಜಯ್, ಜನೀಶ್, ಧೀರಜ್, ಪೂಜಾ, ಶಶಿ ಹಾಗೂ ಗಂಗಾಧರ್ ಕಾರ್ಯನಿರ್ವಹಿಸಿದರು. ಪುರುಷರ 30 ತಂಡ, ಮಹಿಳೆಯರ 6 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಸಮಾರೋಪ : ಸಮಾರಂಭದಲ್ಲಿ ಫ್ಲೋರ್ ಬಾಲ್ ಅಸೋಸಿಯೇಷನ್ ರಾಜ್ಯಧ್ಯಕ್ಷ ಶುಭಕರ್ ಭುವನೇಶ, ಕಾರ್ಯದರ್ಶಿ ಪ್ರಜು ಜಾನಿ, ಜಿಲ್ಲಾಧ್ಯಕ್ಷ ಮಿನ್ನಂಡ ಜೋಯಪ್ಪ, ಅಂತರರಾಷ್ಟ್ರೀಯ ಮಾಜಿ ಹಾಕಿ ಆಟಗಾರ ಬುಟ್ಟಿಯಂಡ ಚೆಂಗಪ್ಪ, ಕಾವೇರಿ ಕಾಲೇಜು ಆಡಳಿತ ಮಂಡಳಿ ನಿರ್ದೇಶಕರುಗಳಾದ ಕುಲ್ಲಚಂಡ ಬೋಪಣ್ಣ, ಸಿ ಡಿ ಮಾದಪ್ಪ, ದಾನಿಗಳಾದ ಕಡೇಮಾಡ ನಂದ, ಮೀದೇರಿರ ಪದ್ಮಿನಿ ಹಾಗೂ ಕೇರಳ ವಿಭಾಗದ ಸಾಯ್ ಸಹಾಯಕ ನಿರ್ದೇಶಕ ನೆರವಂಡ ಸುರೇಶ್ ಪ್ರಶಸ್ತಿ ವಿತರಿಸಿದರು. ಡಾ. ದೇಚಮ್ಮ, ನಿರ್ಮಿತಾ ಹಾಗೂ ಪೊನ್ನಪ್ಪ ನಿರೂಪಿಸಿದರು. ಪೂವಣ್ಣ ವಂದಿಸಿದರು.