ಗೋಣಿಕೊಪ್ಪಲು, ಅ. 30: ಪಂಚಾಯಿತಿ ಪೌರಕಾರ್ಮಿಕರಿಗೆ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಶೀಘ್ರವಾಗಿ ತಾತ್ಕಾಲಿಕ ಮನೆ ನಿರ್ಮಾಣ ಮಾಡಬೇಕು ಎಂದು ಗೋಣಿಕೊಪ್ಪಲು ಗ್ರಾ.ಪಂ.ನಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೆಲ್ವಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಗ್ರಾ.ಪಂ ಸದಸ್ಯ ಮುರುಗ ಈ ಬಗ್ಗೆ ಪ್ರಶ್ನಿಸಿ, ಪೌರ ಕಾರ್ಮಿಕರನ್ನು ಪಂಚಾಯಿತಿ ಮೂಲೆಗುಂಪು ಮಾಡುತ್ತಿದ್ದು ಅವರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪಂಚಾಯಿತಿ ವೈಫಲ್ಯ ಕಂಡಿದೆ ಎಂದು ಆರೋಪಿಸಿದರು. ಅಧ್ಯಕ್ಷರು ಬರೀ ಭರವಸೆ ನೀಡುತ್ತಿದ್ದು ಕಾರ್ಯಗತಕ್ಕೆ ಬರುತ್ತಿಲ್ಲ ಎಂದು ಸಭೆಯ ಮುಂದಿಟ್ಟರು.

ಇದಕ್ಕೆ ಪಿಡಿಓ ಚಂದ್ರಮೌಳಿ ಪ್ರತಿಕ್ರಿಯಿಸಿ ಈ ಬಗ್ಗೆ ಕ್ರಿಯಾ ಯೋಜನೆ ರೂಪಿಸಿದ್ದೇವೆ ಆದರೇ ರೂ. 30 ಲಕ್ಷ ವೆಚ್ಚ ತಗುಲಲಿದ್ದು ಪಂಚಾಯಿತಿಯಲ್ಲಿ ಇಷ್ಟು ಹಣವಿಲ್ಲ ಎಂದರು. ಇದಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಇರುವ ಹಣದಲ್ಲಿ ತಾತ್ಕಲಿಕ ಮನೆ ನಿರ್ಮಾಣ ಮಾಡಿ ಎಂದರು ಇದಕ್ಕೆ ಸಭೆ ಒಪ್ಪಿಗೆ ಸೂಚಿಸಿತು.

ಸದಸ್ಯ ಪ್ರಮೋದ್ ಗಣಪತಿ ಮಾತನಾಡಿ, ಇಲ್ಲಿ ಗ್ರಾ.ಪಂ. ಸದಸ್ಯರ ಕಡೆಗಣನೆಯಾಗುತ್ತಿದೆ ಕಳೆದ ಸಭೆಯಲ್ಲಿ ಕೇÉಳಿದ ಪ್ರಶ್ನೆಗಳು ನಡಾವಳಿಯಲ್ಲಿ ಇಲ್ಲ ಎಂದು ಆರೋಪಿಸಿದರು.

ತಿಂಗಳಿಗೊಮ್ಮೆ ಸಭೆ ನಡೆಸಿ ಇದರಿಂದ ಜನರ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಬಿ.ಎನ್ ಪ್ರಕಾಶ್ ಸಭೆಯ ಗಮನಕ್ಕೆ ತಂದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಜಮಾಬಂದಿ, ವಾರ್ಡ್‍ಸಭೆ, ಗ್ರಾಮ ಸಭೆಗಳು ತಡವಾಗಲು ಕಾರಣವೇನೂ ಪಂಚಾಯಿತಿ ಅಧಿಕಾರಕ್ಕೆ ಬಂದು ಹಲವು ತಿಂಗಳೂ ಕಳೆದರು ಇನ್ನೂ ಏಕೆ ಗ್ರಾಮಸಭೆಯಾಗಿಲ್ಲ ಎಂದು ಸದಸ್ಯ ಜೆ.ಕೆ ಸೋಮಣ್ಣ ಪ್ರಶ್ನಿಸಿದರು.

ಪಂಚಾಯಿತಿ ತಾಲೂಕು ಕಾರ್ಯ ನಿರ್ವಾಹಣಾಧಿಕಾರಿ ಸುಪರ್ಧಿ ಯಲ್ಲಿದ್ದು, ಇಲ್ಲಿನ ಕೆಲಸಕ್ಕೆ ಅವರು ಮೂಗು ತೂರಿಸುತ್ತಿದ್ದಾರೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಪಿಡಿಓ ಅವರು ಸದಸ್ಯರಿಗೆ ಸೂಕ್ತ ಬೆಂಬಲ ನೀಡುತ್ತಿಲ್ಲ ಇದರಿಂದಾಗಿ ಅಭಿವೃದ್ಧಿಗೆ ತೊಡಕಾಗಿದೆ ಎಂದು ಧ್ಯಾನ್ ಸುಬ್ಬಯ್ಯ ಹೇಳಿದರು.

3ನೇ ವಾರ್ಡ್‍ನ ಗುಡಿಸಲು ವಾಸಿಗಳಿಗೆ ವಿದ್ಯುತ್ ಅಳವಡಿಸಲಾ ಗಿದ್ದು ಇದು ಪಂಚಾಯಿತಿ ಗಮನಕ್ಕೆ ಬಾರದೇ ಕೆಲಸ ಮಾಡಿದ್ದಾರೆ. ಪಂಚಾಯಿತಿ ನಿರಪೇಕ್ಷಣಾ ಪತ್ರವಿಲ್ಲದೇ ಕಾಮಾಗಾರಿಯಾಗಿದೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು, ಪೌರ ಕಾರ್ಮಿಕರ ದೇವಸ್ಥಾನದ ಬಳಿ ಹೊಟೇಲ್ ತ್ಯಾಜ್ಯ ಬರುತ್ತಿದ್ದು ಈ ಬಗ್ಗೆ ನೋಟಿಸ್ ನೀಡಬೇಕು ಇದು ಮುಂದುವರೆದರೆ ಪರವಾನಿಗೆ ರದ್ದು ಮಾಡಬೇಕು ಎಂದು ಸದಸ್ಯ ಮುರುಗ ಹೇಳಿದರು.

1,3 ಮತ್ತು 5 ನೇ ವಾರ್ಡ್ ನಿವಾಸಿಗಳಿಗೆ ಹಕ್ಕುಪತ್ರಕ್ಕಾಗಿ ಸರ್ಕಾರ ಗಮನ ಸೆಳೆಯಬೇಕಿದೆ. ಸದಸ್ಯರು ನಿಯೋಗ ತೆರಳಿ ಚರ್ಚೆ ಮಾಡಬೇಕಾಗಿದೆ ಕೆಲವು ಕಾನೂನು ತೊಡಕುಗಳು ಕೂಡ ನಿವಾರಣೆ ಮಾಡಬೇಕು ಎಂದು ಸದಸ್ಯ ಪ್ರಕಾಶ್ ಹೇಳಿದರು. ಇದಕ್ಕೆ ಸಭೆ ಒಪ್ಪಿಗೆ ಸೂಚಿಸಿತು.

ಪಟ್ಟಣಲ್ಲಿರುವ ಖಾಸಗಿ ಮಾಂಸ ಮಳಿಗಳು ನಿಯಮವನ್ನು ಉಲಂಘನೆ ಮಾಡುತ್ತಿದ್ದು ಈ ಬಗ್ಗೆ ಅವರಿಗೆ ನೋಟಿಸ್ ನೀಡಬೇಕು, ಬಸ್ ತಂಗುದಾಣ ಸೂಕ್ತ ಸ್ಥಳದಲ್ಲಿ ಆಗಬೇಕು, ಯಾವದೇ ಕಾಮಗಾರಿ ನಡೆದರೂ ಸದಸ್ಯರ ಗಮನಕ್ಕೆ ತನ್ನಿ ಎಂದು ಸದಸ್ಯರು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಉಪಾಧ್ಯಕೆ ಕಾವ್ಯ, ಕಾರ್ಯದರ್ಶಿ ರಾಜೇಶ್, ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು.