*ಸಿದ್ದಾಪುರ, ಡಿ. 27: ಗ್ರಾಮ ಪಂಚಾಯಿತಿ ಅಧ್ಯಕ್ಷರು ಆರ್ಥಿಕವಾಗಿ ಉತ್ತಮ್ಮ ಸ್ಥಿತಿಯಲ್ಲಿದ್ದು 14 ಎಕರೆ ಕಾಫಿ ತೋಟ ಹೊಂದಿದ್ದರೂ ಕಡುಬಡವರಿಗೆ ನೀಡಲಾಗುವ ಅಂತ್ಯೋದಯ ಪಡಿತರ ಚೀಟಿಯನ್ನು ಅಕ್ರಮವಾಗಿ ಹೊಂದಿಕೊಂಡಿದ್ದಾರೆ ಎಂದು ಮಂಗಳವಾರದಂದು ನಡೆದ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಗ್ರಾಮಸ್ಥರಾದ ಬಸಪ್ಪ ಆರೋಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಧ್ಯಕ್ಷರ ಪಡಿತರ ಚೀಟಿಯ ನಕಲಿ ಪ್ರತಿಯನ್ನು ಪ್ರದರ್ಶಿಸಿದ ಗ್ರಾಮಸ್ಥರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧ್ಯಕ್ಷರು ಹೊಂದಿಕೊಂಡಿರುವ ಪಡಿತರ ಚೀಟಿಯನ್ನು ವಾಪಾಸ್ ಪಡೆಯುವಂತೆ ಒತ್ತಾಯಿಸಿದರು.
ವಾಲ್ನೂರು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ವಹಿಸಿದರು . ನೋಡಲ್ ಅಧಿಕಾರಿಯಾಗಿ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಜಯರಾಮ್ ಭಾಗವಹಿಸಿದರು. ವಾಲ್ನೂರು ಗ್ರಾಮ ವ್ಯಾಪ್ತಿಯಲ್ಲಿ ಬಹುತೇಕ ಮಂದಿ ಕೃಷಿಕರು ಕಾಡಾನೆ ಹಾವಳಿಯಿಂದ ಸಂಕಷ್ಟ ಅನುಭವಿಸುವಂತಾಗಿದೆ ಬತ್ತದ ಗದ್ದೆಗಳು ಹಾಗೂ ಕಾಫಿ ತೋಟಗಳು ಫಸಲು ಕೈ ಸೇರುವ ಮುನ್ನವೇ ಕಾಡಾನೆ ಪಾಲಾಗಿದೆ ಎಂದು ಬೆಳೆಗಾರರಾದ ಭುವನೇಂದ್ರ, ಜಯಂತ್, ನಾಗರತ್ನ ಹಾಗೂ ಹನೀಫ್ ಆರೋಪಿಸಿದರು. ಅರಣ್ಯ ಇಲಾಖೆ ಕೃಷಿಕರಿಗೆ ಪರಿಹಾರ ಒದಗಿಸಬೇಕಿದೆ ಎಂದು ಕೃಷಿಕರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ವಾಲ್ನೂರು ವ್ಯಾಪ್ತಿಯಲ್ಲಿ 2 ಪುಂಡಾನೆಗಳು ಇದ್ದು ಅವುಗಳನ್ನು ಹಿಡಿದು ಪಳಗಿಸುವ ಉದ್ದೇಶದಿಂದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ವನಪಾಲಕ ದೇವಿಪ್ರಸಾದ್ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಆಡಳಿತ ನಿಷ್ಕ್ರಿಯವಾಗಿದ್ದು ಯಾವದೇ ನೂತನ ಯೋಜನೆಗಳನ್ನು ರೂಪಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂಜುಂಡಸ್ವಾಮಿ ಮಾತನಾಡಿ ಗ್ರಾಮ ಪಂಚಾಯಿತಿಗೆ ಲಭಿಸುವ ಅನುದಾನಗಳು ವಿದ್ಯುತ್ ಬಿಲ್ ಪಾವತಿ ಹಾಗೂ ನೌಕರರ ಸಂಬಳಕ್ಕೆ ಹೆಚ್ಚಾಗಿ ವ್ಯಯವಾಗುತ್ತಿವೆ ಎಂದು ಮಾಹಿತಿ ನೀಡಿದರು. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಅನೇಕ ಮಂದಿ ನೋಂದಾಯಿಸಿಕೊಂಡಿದ್ದರೂ ಕೆಲಸ ಕೈಗೆತ್ತಿಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಗ್ರಾಮೀಣ ಮಟ್ಟದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್ ಮಾತನಾಡಿ ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ ರೂ. 35 ಲಕ್ಷ ಮಂಜೂರಾಗಿದ್ದು ಅಭ್ಯತ್ಮಂಗಲ ಹಾಗೂ ವಾಲ್ನೂರು ವಿಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಬಳಕೆ ಮಾಡುವದಾಗಿ ಬರವಸೆ ನೀಡಿದರು.
ತಾಲೂಕು ಪಂಚಾಯಿತಿ ಸದಸ್ಯೆ ಸುಹಧಾ ಅಶ್ರಫ್ ತಾಲೂಕು ಪಂಚಾಯಿತಿ ನಿಧಿಯಿಂದ ವಾಲ್ನೂರು ವ್ಯಾಪ್ತಿಯ ಶಾಲೆಗಳಿಗೆ ಸುಣ್ಣ ಬಣ್ಣ ಬಳಿಯಲು ಅಗತ್ಯ ನೆರವು ನೀಡುವದಾಗಿ ಒಪ್ಪಿಕೊಂಡಿರುತ್ತಾರೆ.
ಆಹಾರ ಇಲಾಖೆ, ಆರೋಗ್ಯ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳೂ ಸೇರಿದಂತೆ ಗ್ರಾಮ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಇದೇ ಸಂದರ್ಭ ವಾಲ್ನೂರು ಸರ್ಕಾರಿ ಶಾಲೆಯಲ್ಲಿ ಕುಶಾಲನಗರದ ಪದವಿ ಕಾಲೇಜಿನ ವತಿಯಿಂದ ಹಮ್ಮಿಕೊಳ್ಳುವ ಎನ್.ಎಸ್.ಎಸ್. ಶಿಬಿರವನ್ನು ಆಯೋಜಿಸುವಂತೆ ಸಭೆಯಲ್ಲಿ ಅನುಮತಿ ನೀಡಲಾಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು ಸ್ಭೆರಿದಂತೆ ಅಧಿಕಾರಿಗಳಾದ ಪಶುವೈದ್ಯಾಧಿಕಾರಿ ಡಾ.ಶಿಂಧೆ, ಸೆಸ್ಕಾಂ ಇಲಾಖೆಯ ಜಯರಾಮ್, ಗ್ರಾಮ ಲೆಕ್ಕಿಗರಾದ ಶ್ವೇತ, ಕೃಷಿ ಇಲಾಖೆಯ ಅಧಿಕಾರಿ ಪೂಣಚ್ಚ ಉಪಸ್ಥಿತರಿದ್ದರು.