ಶನಿವಾರಸಂತೆ, ಜೂ. 27: ನಾಪತ್ತೆಯಾಗಿದ್ದ ಯುವತಿಯೋರ್ವಳು ಪ್ರಿಯಕರನೊಂದಿಗೆ ಪತ್ತೆಯಾದ ಘಟನೆ ನಡೆದಿದೆ.

ಶನಿವಾರಸಂತೆಯ ಸಮೀಪದ ಶಿರಹ ಗ್ರಾಮದ ಎಸ್.ಡಿ. ಸಣ್ಣಯ್ಯ-ಜಯಮ್ಮ ಅವರ ಮಗಳು ಎಸ್.ಎಸ್. ಸಂಗೀತ (19) ಎಂಬಾಕೆ ತಾ. 22 ರಂದು ಮನೆಯಿಂದ ಕಾಣೆಯಾಗಿದ್ದಳು. ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿದ ಹೆಡ್‍ಕಾನ್ಸ್ ಟೇಬಲ್ ಶಿವಪ್ಪ ಅವರು ತನಿಖೆ ಕೈಗೊಂಡಾಗ ಸಂಗೀತ ಹಾಗೂ ಜೊತೆಯಲಿದ್ದ ತ್ಯಾಗರಾಜ ಕಾಲೋನಿಯ ಈರಯ್ಯ ಎಂಬವರ ಮಗ ಚಂದ್ರಶೇಖರ (21) ಇಬ್ಬರೂ ಒಟ್ಟಿಗೆ ಪತ್ತೆಯಾಗಿದ್ದಾರೆ.

ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ, ಸಂಗೀತ, ತಾವಿಬ್ಬರು ಸುಮಾರು 4 ವರ್ಷದಿಂದ ಪ್ರೀತಿಸುತ್ತಿದ್ದು, ತನ್ನ ಮನೆಯವರ ವಿರೋಧವಿದ್ದುದರಿಂದ ನಾನೇ ನನ್ನ ಪ್ರಿಯಕರನೊಂದಿಗೆ ಮನೆಬಿಟ್ಟು ಹೋಗಿದ್ದೆ. ನಾನು ಚಂದ್ರಶೇಖರ್‍ನನ್ನೆ ಮದುವೆಯಾಗುವದಾಗಿ ಹೇಳಿದ್ದಾಳೆ. ಈ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ ಯುವತಿ, ಯುವಕ ಹಾಗೂ ಎರಡು ಮನೆಯವರ ಕಡೆಯಿಂದ ಪೊಲೀಸರು ಲಿಖಿತ ಹೇಳಿಕೆ ಪಡೆದಿದ್ದರಾದರೂ ಬಳಿಕ ಸಂಗೀತ ತನ್ನ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಪ್ರಿಯಕರನ ಕೈಹಿಡಿದು ಮಾವ, ಅತ್ತೆ ಹಾಗೂ ಸ್ನೇಹಿತರೊಂದಿಗೆ ತೆರಳಿದಳು.

-ನರೇಶ್