ಸೋಮವಾರಪೇಟೆ,ಆ.21: ದೇಶದ ಗಡಿ ರಕ್ಷಣೆ ಸೈನಿಕರ ಜವಾಬ್ದಾರಿಯಾಗಿದ್ದರೆ ದೇಶದ ಆಂತರಿಕ ರಕ್ಷಣೆ ಪ್ರತಿಯೋರ್ವ ವ್ಯಕ್ತಿಯದ್ದಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೋರ್ವರು ದೇಶದ ಸೈನಿಕರೇ ಎಂದು ಚಿತ್ರದುರ್ಗ ಬೃಹನ್ಮಠದ ಮಠಾಧೀಶರಾದ ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಬೇಳೂರು ಮಠದ ಆವರಣದಲ್ಲಿ ಎಸ್‍ಜೆಎಂ ವಿದ್ಯಾಪೀಠ, ಅಲ್ಲಮಪ್ರಭು ಸಂಶೋಧನಾ ಕೇಂದ್ರ, ಎಸ್‍ಜೆಎಂ ಸಿಬ್ಬಂದಿ ತರಬೇತಿ ಸಂಸ್ಥೆ ಚಿತ್ರದುರ್ಗ ಇವುಗಳ ಸಂಯುಕ್ತ ಆಶ್ರಯದಲ್ಲಿ, ಶಾಲಾ-ಕಾಲೇಜು, ವಸತಿ ನಿಲಯ ಮತ್ತು ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಏರ್ಪಡಿಸಲಾಗಿದ್ದ ಆಡಳಿತಾತ್ಮಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಬದಲಾವಣೆಗೆ ಅನುಗುಣವಾಗಿ ನಮ್ಮನ್ನು ನಾವು ತೊಡಗಿಸಿಕೊಂಡಲ್ಲಿ ಮಾತ್ರ ಒಳ್ಳೆಯ ಫಲಿತಾಂಶ ಪಡೆಯಲು ಸಾಧ್ಯ ಎಂದರು.

ಸಂಸ್ಥೆಯ ಕಾರ್ಯದರ್ಶಿ ಕೆ.ವಿ ಪ್ರಭಾಕರ್ ಮಾತನಾÀಡಿ, ಕಳೆದ 2008ರಲ್ಲಿ ಶಿಕ್ಷಣ ಸಂಸ್ಥೆಗಳ ಸುಧಾರಣೆಯ ನಿಮಿತ್ತ ಆಡಳಿತಾತ್ಮಕ ತರಬೇತಿ ನೀಡಲು ಬೃಹನ್‍ಮಠ ಮುಂದಾಗಿದ್ದರೂ, ಕಾರಣಾಂತರ ಗಳಿಂದ ಕೆಲವು ವರ್ಷಗಳು ಮುಂದುವರೆಸಲು ಸಾಧ್ಯವಾಗಲಿಲ್ಲ. ಉತ್ತಮ ಶಿಕ್ಷಣ ಸಂಸ್ಥೆಯಾಗಿ ಬೆಳೆಯಲು ಹಾಗೂ ಒಳ್ಳೆಯ ಕೆಲಸ ಪಡೆಯಬೇಕಾದಲ್ಲಿ ಮೊದಲು ಆಡಳಿತ ಮಾಡುವವರಿಗೆ ತರಬೇತಿ ನೀಡುವದು ಮುಖ್ಯ ಎಂದರು.

ವೇದಿಕೆಯಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಮಲ್ಲಿಕಾರ್ಜುನಪ್ಪ, ಮಠದ ಪ್ರಮುಖರಾದ ಡಾ. ಚಿತ್ರಶೇಖರ್, ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು.