ಸೋಮವಾರಪೇಟೆ, ನ. 23: ಜಾನುವಾರುಗಳನ್ನು ಸಾಗಾಟಗೊಳಿಸಲು ಅಕ್ರಮವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅನುಮತಿ ನೀಡಿದ್ದು, ಇವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಐಗೂರು ಮತ್ತು ಯಡವಾರೆ ಗ್ರಾಮದ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ತಾ. 22ರಂದು ಕೂಡಿಗೆ ಬಳಿಯಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಸಂದರ್ಭ ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ದನಗಳನ್ನು ಐಗೂರಿನಿಂದ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಗ್ರಾಮದ ಬಾಲಕೃಷ್ಣ ಎಂಬವರಿಗೆ ಸೇರಿದ ದನಗಳನ್ನು ಸಾಗಿಸಲು ದಾಖಲೆಗಳ ಕೊರತೆಯಿಂದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದರು.

ಆದರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಯ ಗಮನಕ್ಕೆ ತಾರದೇ ದನಗಳನ್ನು ಸಾಗಿಸಲು ತಾವೇ ಖುದ್ದು ಅನುಮತಿ ನೀಡಿದ್ದಾರೆ. ಗ್ರಾಮ ಪಂಚಾಯಿತಿಯ ಲೆಟರ್‍ಹೆಡ್‍ನಲ್ಲಿ ವಾಹನ ಸಂಖ್ಯೆ ನಮೂದಿಸಿ ಯಾವದೇ ಸಮರ್ಪಕ ದಾಖಲೆಗಳನ್ನು ಹೊಂದಿಕೊಳ್ಳದೇ ಅಧಿಕಾರ ವ್ಯಾಪ್ತಿ ಮೀರಿ ಅನುಮತಿ ನೀಡಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ಒಂದು ವಾಹನದಲ್ಲಿ ಕೇವಲ 2 ಹಸುಗಳನ್ನು ಮಾತ್ರ ಸಾಗಿಸಲು ಅನುಮತಿ ಇದ್ದರೂ, ಬಲವಂತವಾಗಿ 9 ದನಗಳನ್ನು ಸಾಗಿಸಲಾಗುತ್ತಿದ್ದು, ಈ ಸಂದರ್ಭ ಒಂದು ಹಸು ಮೃತಪಟ್ಟಿದೆ. ಅಕ್ರಮವಾಗಿ ದನಗಳನ್ನು ಸಾಗಾಟ ಗೊಳಿಸಲು ಗ್ರಾಮ ಪಂಚಾಯಿತಿ ಅಧ್ಯಕ್ಷರೇ ಅನುಮತಿ ನೀಡಿರುವದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತಕ್ಷಣ ಇವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.

ಐಗೂರು ಭಾಗದಲ್ಲಿ ನಿರಂತರ ವಾಗಿ ಜಾನುವಾರುಗಳ ಕಳ್ಳತನ ಪ್ರಕರಣ ನಡೆಯುತ್ತಿದ್ದು, ಐಗೂರಿನ ಮನೋಹರ್ ಅವರು ಬ್ಯಾಂಕ್ ಸಾಲ ಮಾಡಿ ಮೂರು ಹಸುಗಳನ್ನು ಖರೀದಿಸಿದ್ದರು. ಈ ಹಸುಗಳನ್ನು ಮೇಯಲು ಬಿಟ್ಟಾಗ ದನಗಳ್ಳರು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವದೇ ಪ್ರಯೋಜನ ವಾಗಿಲ್ಲ ಎಂದು ಆರೋಪಿಸಿದರು.

ಅಕ್ರಮವಾಗಿ ದನಗಳನ್ನು ಸಾಗಾಟ ಗೊಳಿಸಲು ಅನುಮತಿ ನಿಡಿರುವ ಐಗೂರು ಗ್ರಾ.ಪಂ.ಯ ಅಧ್ಯಕ್ಷರನ್ನು ತಕ್ಷಣ ವಜಾಗೊಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ವಿವಿಧ ಸಂಘಟನೆಗಳು, ಸಾರ್ವಜನಿಕರ ಬೆಂಬ ಲದೊಂದಿಗೆ ಗ್ರಾ.ಪಂ. ಮುಂಭಾಗ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.

ಮನವಿ ಸಲ್ಲಿಕೆ ಸಂದರ್ಭ ಬಿಜೆಪಿ ಐಗೂರು ಸ್ಥಾನೀಯ ಸಮಿತಿ ಅಧ್ಯಕ್ಷ ಮಚ್ಚಂಡ ಪ್ರಕಾಶ್, ಪ್ರಮುಖರುಗಳಾದ ಪ್ರಭಾಕರ್, ಭಾಸ್ಕರ್, ಚನ್ನಕೇಶವ, ಅವಿಲಾಷ್, ವಿನೋದ್, ಭರತ್, ಅಪ್ಪು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.