ಮಡಿಕೇರಿ, ಜೂ. 27: ಜಿಲ್ಲೆಯಾದ್ಯಂತ ಆರಿದ್ರ ಮಳೆಯು ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಕಳೆದೆರಡು ದಿನಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಮಡಿಕೇರಿ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಕಳೆದೆರಡು ದಿನಗಳಿಂದ ಬಿಟ್ಟು ಬಿಟ್ಟು ಮಳೆ ತೀವ್ರತೆ ಪಡೆದುಕೊಂಡಿದೆ. ಮಡಿಕೇರಿ ನಗರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 4.20 ಇಂಚು ಮಳೆ ಸುರಿದಿದೆ. ವರ್ಷಾರಂಭದಿಂದ ಇಂದಿನವರೆಗೆ ಮಡಿಕೇರಿ ನಗರದಲ್ಲಿ 34.35 ಇಂಚು ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಗೆ 40 ಇಂಚು ಮಳೆಯಾಗಿತ್ತು. ಕಳೆದ ವರ್ಷ ಜೂನ್ ಒಂದೇ ತಿಂಗಳಲ್ಲಿ ಸುಮಾರು 40 ಇಂಚಿನಷ್ಟು ಮಳೆಯಾಗಿತ್ತು. ಕಳೆದ ಸಾಲಿಗೆ ಹೋಲಿಸಿದ್ದಲ್ಲಿ 4.65 ಇಂಚಿನಷ್ಟು ಮಾತ್ರ ಮಳೆ ಕಡಿಮೆಯಾಗಿದೆ.

ತೀರ್ಥ ಕ್ಷೇತ್ರವಾದ ತಲಕಾವೇರಿ ಹಾಗೂ ಭಾಗಮಂಡಲದಲ್ಲಿಯೂ ಮಳೆ ಬಿರುಸುಗೊಂಡಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಸುಮಾರು ಒಂದು ಅಡಿಯಷ್ಟು ನೀರಿನ ಮಟ್ಟ ಏರಿಕೆಯಾಗಿದೆ. ಈ ವರ್ಷ ಜೂನ್ ಆರಂಭದಿಂದ ಇಂದಿನವರೆಗೆ 23.06 ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 74.32 ಇಂಚು ಮಳೆಯಾಗಿತ್ತು. ಕಳೆದ ಬಾರಿ ಜೂನ್ 20 ರಿಂದ 28ರ ವರೆಗೆ 8 ದಿನಗಳಲ್ಲೇ 60 ಇಂಚು ಮಳೆಯಾಗಿತ್ತು. ತ್ರಿವೇಣಿ ಸಂಗಮ ಭರ್ತಿಯಾಗಿ ವಾಹನ ಹಾಗೂ ಜನ ಸಂಚಾರಕ್ಕೆ ಅಡಚಣೆಯಾಗಿತ್ತು.

ಈ ವರ್ಷ ಜನವರಿ ಆರಂಭದಿಂದ ಇಂದಿನವರೆಗೆ 36.78 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 91.88 ಇಂಚು ಮಳೆಯಾಗಿತ್ತು. ಭಾಗಮಂಡಲ ಹೋಬಳಿಯಾದ್ಯಂತ ಉತ್ತಮ ಮಳೆಯಾಗುತ್ತಿರುವದರಿಂದ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

ಪಶ್ಚಿಮಘಟ್ಟ ವ್ಯಾಪ್ತಿಯ ಶ್ರೀಮಂಗಲ ಸುತ್ತಮುತ್ತಲ ಉತ್ತಮ ಮಳೆಯಾಗುತ್ತಿದೆ. ನಿನ್ನೆಯಿಂದ ಇಂದಿನವರೆಗೆ ಶ್ರೀಮಂಗಲದಲ್ಲಿ ಸುಮಾರು 2.15 ಇಂಚು ಮಳೆಯಾಗಿದೆ. ಅಲ್ಲಲ್ಲಿ ಮರಗಳು ಬಿದ್ದ ಪ್ರಕರಣಗಳು ನಡೆದಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಸುಮಾರು 4 ಇಂಚು ಮಳೆಯಾದ ಬಗ್ಗೆ ವರದಿಯಾಗಿದೆ. ನಾಪೋಕ್ಲು ಹೋಬಳಿಯಾದ್ಯಂತ ಸಾಧಾರಣ ಮಳೆಯಾಗುತ್ತಿದೆ.

ಪುಷ್ಪಗಿರಿಗೆ 35 ಇಂಚು ಮಳೆ

ಕಳೆದ ಎರಡು ದಿನಗಳಿಂದ ಸೋಮವಾರಪೇಟೆಯಲ್ಲಿ ಮಳೆಗಾಲದ ನಿಜವಾದ ವಾತಾವರಣ ಕಂಡುಬರುತ್ತಿದೆ. ದಿನದ 24 ಗಂಟೆಯೂ ಜಿಟಿಜಿಟಿ ಮಳೆ ಬೀಳುತ್ತಿದ್ದು, ಶೀತಗಾಳಿ ಬೀಸುತ್ತಿರುವ ಪರಿಣಾಮ ಚಳಿ ಅಧಿಕವಾಗುತ್ತಿದೆ. ಮಳೆಗಾಲ ಎದುರಿಸಲು ಜನತೆ ಇದೀಗ ಸಿದ್ದರಾಗುತ್ತಿದ್ದು, ಸಂತೆ, ಅಂಗಡಿಗಳಲ್ಲಿ ಕೊಡೆ, ರೈನ್‍ಕೋಟ್, ಟಾರ್ಪಲ್ ಖರೀದಿಯ ಭರಾಟೆ ಜೋರಾಗಿದೆ.

ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ಈಗಾಗಲೇ 35 ಇಂಚು ಮಳೆ ಬಿದ್ದಿದ್ದು, ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಬೇಸಿಗೆಯಲ್ಲಿ ಬತ್ತಿಹೋಗಿದ್ದ ಸಣ್ಣಪುಟ್ಟ ತೊರೆಗಳಲ್ಲಿ ನೀರಿನ ಪಸೆ ಕಂಡುಬರುತ್ತಿದೆ. ಗದ್ದೆಗಳನ್ನು ಉಳುಮೆ ಮಾಡಲು ರೈತಾಪಿ ವರ್ಗ ಸಿದ್ಧತೆ ನಡೆಸುತ್ತಿದೆ. ಭತ್ತದ ಸಸಿಮಡಿಗಳೂ ತಯಾರಾಗುತ್ತಿವೆ.

ಮಳೆಗಾಲವನ್ನು ಎದುರಿಸಲು ಜನತೆ ಸಿದ್ದರಾಗುತ್ತಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ರೈನ್‍ಕೋಟ್, ಕೊಡೆಗಳನ್ನು ಖರೀದಿಸುತ್ತಿದ್ದರೆ, ಕೂಲಿ ಕಾರ್ಮಿಕರು ಪ್ಲಾಸ್ಟಿಕ್ ಚೀಲಗಳ ಮೊರೆ ಹೋಗುತ್ತಿದ್ದಾರೆ. ಮಳೆಯಿಂದ ರಕ್ಷಿಸಿಕೊಳ್ಳಲು ಮನೆ, ಸೌದೆ ಕೊಟ್ಟಿಗೆಗೆ ಅಳವಡಿಸಲು ಟಾರ್ಪಲ್‍ಗಳ ಖರೀದಿಯೂ ಜೋರಾಗಿದ್ದರೆ, ಬೈಕ್‍ನಲ್ಲಿ ತೆರಳುವವರು ಮಳೆಯಿಂದ ರಕ್ಷಣೆ ಪಡೆಯಲು ರೈನ್ ಸೂಟ್‍ಗಳನ್ನು ಖರೀದಿಸುತ್ತಿದ್ದಾರೆ. ಸಂತೆ ಮಾರುಕಟ್ಟೆಯಲ್ಲಿ 300 ರಿಂದ 600 ರೂ.ಗಳವರೆಗೆ ರೈನ್ ಸೂಟ್‍ಗಳು ಲಭ್ಯವಿದ್ದು, 100,120ರಿಂದ 150 ರೂಪಾಯಿಗಳಿಗೆ ಸ್ವಿಚ್‍ಕೊಡೆಗಳು ಸಿಗುತ್ತಿವೆ.

ವಿವಿಧ ವಿನ್ಯಾಸದ ಜರ್ಕಿನ್‍ಗಳು, ಸ್ವೆಟ್ಟರ್‍ಗಳು, ಸ್ಕಾರ್ಪ್, ಪ್ಲಾಸ್ಟಿಕ್, ರಬ್ಬರ್ ಶೂ ಸೇರಿದಂತೆ ಮಳೆ ಗಾಳಿಯಿಂದ ರಕ್ಷಣೆ ಪಡೆಯಲು ಬಳಸಲ್ಪಡುವ ತರಹೇವಾರಿ ವಸ್ತುಗಳ ಮಾರಾಟವೂ ಭರದಿಂದ ನಡೆಯುತ್ತಿದೆ.

ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ನಗರದಲ್ಲಿ ವಾಹನ ದಟ್ಟಣೆಯೂ ಅಧಿಕಗೊಳ್ಳುತ್ತಿದ್ದು, ವಾಹನಗಳ ನಿಲುಗಡೆಗೆ ಜಾಗದ ಸಮಸ್ಯೆ ಎದುರಾಗಿದೆ. ಈ ಹಿಂದೆ ದ್ವಿಚಕ್ರ ವಾಹನಗಳಲ್ಲಿ ನಗರಕ್ಕೆ ಆಗಮಿಸುತ್ತಿದ್ದವರು ಇದೀಗ ಮಳೆಯಾದ್ದರಿಂದ ನಾಲ್ಕುಚಕ್ರದ ವಾಹನಗಳಲ್ಲಿ ಬರುತ್ತಿರುವದರಿಂದ ನಿಲುಗಡೆಯ ಸಮಸ್ಯೆ ಎದುರಾಗಿದೆ.

ಕುಶಾಲನಗರ: ಹಾರಂಗಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳವಾಗಿದೆ. ಜಲಾಶಯಕ್ಕೆ ಒಂದೇ ದಿನದಲ್ಲಿ ಎರಡು ಅಡಿಗಳಷ್ಟು ನೀರು ಏರಿಕೆಯಾಗಿದೆ. ಅಣೆಕಟ್ಟಿನಲ್ಲಿ ನೀರಿನ ಗರಿಷ್ಠ ಮಟ್ಟ 2859 ಅಡಿಗಳಾಗಿದ್ದು ಸೋಮವಾರ ಸಂಜೆಯ ವೇಳೆಗೆ 2816 ಅಡಿಗಳಷ್ಟು ಸಂಗ್ರಹ ಕಂಡುಬಂದಿದೆ.

ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆ ತನಕ 18.6 ಮಿಮೀ ಪ್ರಮಾಣದ ಮಳೆಯಾದ ಬಗ್ಗೆ ವರದಿಯಾಗಿದೆ. ಕಳೆದ ಬಾರಿಗಿಂತ ಈ ಸಾಲಿನಲ್ಲಿ 18 ಅಡಿಗಳಷ್ಟು ನೀರಿನ ಕೊರತೆ ಉಂಟಾಗಿದೆ. ಈ ಅವಧಿಯಲ್ಲಿ ಕಳೆದ ಬಾರಿ 2833.04 ಅಡಿಗಳಷ್ಟು ನೀರಿನ ಸಂಗ್ರಹ ಮಟ್ಟ ಕಂಡುಬಂದಿತ್ತು.

ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿಯಿಂದ ನಿರಂತರವಾಗಿ ಮಳೆ ಸುರಿದಿದೆ.

ವೀರಾಜಪೇಟೆ: ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗಿನಿಂದ ಇಂದು ಬೆಳಗಿನ ತನಕ ಒಟ್ಟು 1.54 ಇಂಚು ಮಳೆ ಸುರಿದಿದೆ.

ಶನಿವಾರದ ಬೆಳಗಿನಿಂದಲೇ ಮೋಡ ಕವಿದ ವಾತಾವರಣವಿದ್ದು ಸಂಜೆ ವೇಳೆಗೆ ಮಳೆ ಸುರಿದಿದೆ. ಭಾನುವಾರ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು ಅಪರಾಹ್ನ ದಿಂದ ಇಂದಿನ ಬೆಳಗಿನವರೆಗೂ ಮಳೆ ಸುರಿದಿದೆ. ನಿನ್ನೆ ದಿನ ವೀರಾಜಪೇಟೆ ಸಮೀಪದ ಹೆಗ್ಗಳ, ಕೆದಮುಳ್ಳೂರು, ಪಾಲಂಗಾಲ, ಆರ್ಜಿ, ಬೆಟೋಳಿ, ಬಿಟ್ಟಂಗಾಲ, ಮಗ್ಗುಲ, ಐಮಂಗಲ ಸೇರಿದಂತೆ ವಿವಿಧೆಡೆಗಳಲ್ಲಿ ಮಳೆ ಸುರಿದಿದೆ. ವೀರಾಜಪೇಟೆ ವಿಭಾಗದಲ್ಲಿ ಇಂದು ಬೆಳಗಿನಿಂದಲೇ ಮಳೆ ಸುರಿಯುತ್ತಿದ್ದು ಮೋಡ ಕವಿದ ವಾತಾವರಣ ಮುಂದುವರೆದಿದೆ.

ಚಿತ್ರ, ವರದಿ: ಚಂದ್ರ ಉಡೋತ್, ಅಣ್ಣೀರ ಹರೀಶ್ ಮಾದಪ್ಪ, ಡಿ.ಎಂ.ಆರ್., ವಿಜಯ್ ಹಾನಗಲ್, ಸಿಂಚು