ಗೋಣಿಕೊಪ್ಪಲು, ಡಿ.14: ಕೊಡಗು ಕೆನ್ನಲ್ ಕ್ಲಬ್, ಪಾಲಿಬೆಟ್ಟ ಮತ್ತು ಕರ್ನಾಟಕ ಪಶುವೈದ್ಯ ಸಂಘ ಸಂಯುಕ್ತ ಆಶ್ರಯದಲ್ಲಿ ತಾ.17 (ಶನಿವಾರ) ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ರಾಜ್ಯ ವiಟ್ಟದ ಶ್ವಾನ ಪ್ರದರ್ಶನ ಜರುಗಲಿದ್ದು, ವಿಶ್ವವಿಖ್ಯಾತ ಸೈಬೀರಿಯನ್ ಹಸ್ಕಿ, ರಾಟ್ ವೀಲರ್, ಸೈಂಟ್ ಬರ್ನಾಡ್, ಡಾಬರ್‍ಮೆನ್, ಜರ್ಮನ್ ಶಫರ್ಡ್, ಬುಲ್ ಟೆರ್ರಿಯರ್, ಡಾಲ್‍ಮೇಶಿಯನ್, ಭಾರತದ ಮುಧೋಳ ತಳಿ ಒಳಗೊಂಡಂತೆ ಸುಮಾರು 20 ತಳಿಯ 250ಕ್ಕೂ ಅಧಿಕ ಶ್ವಾನಗಳು ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದೆ ಎಂದು ಕೆನ್ನಲ್ ಕ್ಲಬ್ ಕಾರ್ಯದರ್ಶಿ ಡಾ.ಶಾಂತೇಶ್ ತಿಳಿಸಿದ್ದಾರೆ.

ಗೋಣಿಕೊಪ್ಪಲಿನಲ್ಲಿ ಮಾಹಿತಿ ನೀಡಿದ ಅವರು, ಪಾಲಿಬೆಟ್ಟ ಕೆನ್ನಲ್ ಕ್ಲಬ್ ವತಿಯಿಂದ 13ನೇ ವರ್ಷದ ಶ್ವಾನ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದ್ದು, ಪಾಲಿಬೆಟ್ಟದಲ್ಲಿ 7 ಬಾರಿ, ಮಡಿಕೇರಿಯಲ್ಲಿ ಒಮ್ಮೆ ಹಾಗೂ ಗೋಣಿಕೊಪ್ಪಲಿನಲ್ಲಿ 5 ನೇ ಬಾರಿಗೆ ಆಯೋಜಿಸುತ್ತಿರುವದಾಗಿಯೂ, ಭಾಗವಹಿಸುವ ಎಲ್ಲ ಶ್ವಾನಗಳಿಗೂ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ಹಾಕಲಿರುವದಾಗಿ ಹೇಳಿದರು.

ಕೊಡಗಿನಲ್ಲಿ ಚಿಕಿತ್ಸೆ ನೀಡಲು ಅಸಾಧ್ಯವಾದ ವಿಭಿನ್ನ ಶ್ವಾನ ಸಂಬಂಧಿ ಕಾಯಿಲೆಗಳಿಗೆ ಬೆಂಗಳೂರು ಪಶುವೈದ್ಯ ಮಹಾವಿದ್ಯಾಲಯದ ತಜ್ಞರು ಅಂದು ಆಗಮಿಸಿ ಚಿಕಿತ್ಸೆ ನೀಡಲಿದ್ದಾರೆ.

1998 ರಲ್ಲಿ ಪಾಲಿಬೆಟ್ಟದಲ್ಲಿ ಕೊಡಗು ಕೆನ್ನಲ್ ಕ್ಲಬ್ ಆರಂಭಗೊಂಡಿದ್ದು, 150ಕ್ಕೂ ಅಧಿಕ ಅಜೀವ ಸದಸ್ಯರಿದ್ದಾರೆ. ಅಜೀವ ಸದಸ್ಯತನ ಶುಲ್ಕ ರೂ.1600 ಮೊತ್ತವಾಗಿದ್ದು ಜಿಲ್ಲೆಯ ಯಾರು ಬೇಕಿದ್ದರೂ ಸದಸ್ಯತನ ಹೊಂದಬಹುದು ಎಂದು ಹೇಳಿದರು. ಈವರೆಗೆ ಸ್ಥಾಪಕ ಅಧ್ಯಕ್ಷರಾಗಿ ಜನರಲ್ ಕಾರ್ಯಪ್ಪ, ಡಾ.ಎ.ಸಿ. ಗಣಪತಿ, ಡಾ.ಚಿಣ್ಣಪ್ಪ, ಡಾ. ಸುಬ್ರಮಣ್ಯ ಅಧ್ಯಕ್ಷರಾಗಿದ್ದು, ಈ ಬಾರಿ ನೂತನ ಅಧ್ಯಕ್ಷ ಕೆ.ಎಂ.ಅಪ್ಪಯ್ಯ ನೇತೃತ್ವದಲ್ಲಿ ‘ಡಾಗ್ ಶೋ’ ನಡೆಯಲಿದೆ ಎಂದು ವಿವರಣೆ ನೀಡಿದರು.

ಸೋಮವಾರಪೇಟೆ, ಸುಂಟಿಕೊಪ್ಪ, ವೀರಾಜಪೇಟೆ, ಗೋಣಿಕೊಪ್ಪಲು, ಪಾಲಿಬೆಟ್ಟ, ಸಿದ್ದಾಪುರ, ಮಡಿಕೇರಿ ಹಾಗೂ ಸಂಪಾಜೆಯಲ್ಲಿ ಸಂಸ್ಥೆಯ ವತಿಯಿಂದ ಈವರೆಗೆ 8 ಶ್ವಾನ ಆರೋಗ್ಯ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈವರೆಗೆ 3000ಕ್ಕೂ ಅಧಿಕ ಶ್ವಾನಗಳಿಗೆ ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕೆ ಹಾಕಿರುವದಾಗಿ ನುಡಿದರು.

ಈ ಬಾರಿ ಗೋಣಿಕೊಪ್ಪಲಿನ ಕೆವಿಕೆ ಸಂಸ್ಥೆಯೂ ಶ್ವಾನ ಪ್ರದರ್ಶನಕ್ಕೆ ಸಹಕಾರ ನೀಡುತ್ತಿದೆ. ಕೊಡಗು ಜಿಲ್ಲೆಯಲ್ಲಿ ಶ್ವಾನಗಳ ದಾಖಲಾತಿ ಪಟ್ಟಿಯನ್ನೂ ಆಯಾಯ ತಾಲೂಕು ಮಟ್ಟದಲ್ಲಿ ತಯಾರಿಸಲಾಗಿದೆ ಎಂದು ಹೇಳಿದರು.

ಗೋಣಿಕೊಪ್ಪಲು ತಿರುಮಲ ಡೈವಿಂಗ್ ಸ್ಕೂಲ್ ಮಾಲೀಕರಾದ ಕುಪ್ಪಂಡ ಅಶೋಕ್ ಅವರು ವಾರ್ಷಿಕವಾಗಿ ಶ್ವಾನ ಪ್ರದರ್ಶನಕ್ಕೆ ಅನುಕೂಲವಾಗುವಂತಹ ‘ಜಡ್ಜಿಂಗ್ ರಿಂಗ್’ ನೀಡುತ್ತಾ ಬಂದಿದ್ದಾರೆ. ಶ್ವಾನ ಪ್ರದರ್ಶನ ತಾ.17 ರಂದು ಬೆಳಿಗ್ಗೆ 9 ಗಂಟೆಗೆ ಆರಂಭಗೊಳ್ಳಲಿದ್ದು ಕೆ.ಎಂ.ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗುವ ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಿರ್ವಾಹಕ ನಿರ್ದೇಶಕ ಡಾ. ಮಂಜುನಾಥ್, ಶ್ವಾನ ಪ್ರೇಮಿ ಕುಪ್ಪಂಡ ಅಶೋಕ್ ಅಪ್ಪಣ್ಣ, ಕೊಡಗು ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಯ ಉಪ ನಿರ್ದೇಶಕ ಡಾ. ಸಿ. ನಾಗರಾಜ್, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಸಾಜುಜಾರ್ಜ್, ಗೋಣಿಕೊಪ್ಪಲು ಪೆÇಲೀಸ್ ವೃತ್ತ ನಿರೀಕ್ಷಕ ಪಿ.ಕೆ. ರಾಜು ಭಾಗವಹಿಸಲಿದ್ದಾರೆ.

ಅಂದು ಬೆಳಿಗ್ಗೆ 9 ರಿಂದ 10.30 ನೋಂದಾವಣೆ, 10.30 ರಿಂದ ಮಧ್ಯಾಹ್ನ 1.30 ರವರೆಗೆ ಸ್ಪರ್ಧೆ ಮತ್ತು ತೀರ್ಪು ನಡೆಯಲಿದೆ. ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆಯನ್ನು ಬೆಂಗಳೂರಿನ ಕರುಣ ಪ್ರಾಣಿ ದಯಾ ಸಂಘ ಪ್ರಾಯೋಜಿಸಿದೆ.

ಕೊಡಗು ಪೆÇಲೀಸ್ ತಂಡದಿಂದ ಶ್ವಾನಗಳಿಂದ ಅಪರಾಧ ಪತ್ತೆ ಮತ್ತು ಸಾಹಸ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ರಾಯಲ್ ಕ್ಯಾನಿನ್ ಇಂಡಿಯಾ ಪ್ರೈವೇಟ್ ಲಿ. ಸಂಸ್ಥೆಯು ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ಹಾಗೂ 5ನೇ ಸ್ಥಾನಗಳಿಸಿದ ಅತ್ಯುತ್ತಮ ಶ್ವಾನಗಳಿಗೆ ಪಾರಿತೋಷಕ ಮತ್ತು ಅತ್ಯುತ್ತಮ ಶ್ವಾನ ತಳಿ ಪ್ರಶಸ್ತಿಯನ್ನು ಪ್ರಾಯೋಜಿಸಿದೆ.

ಮೈಸೂರು ಕೆನ್ನಲ್ ಕ್ಲಬ್‍ನ ಡಾ. ಜಯರಾಮಯ್ಯ ಹಾಗೂ ಮೈಸೂರು ಪಶುವೈದ್ಯ ಶಸ್ತ್ರ ಚಿಕಿತ್ಸಕ ಡಾ. ಷಡಕ್ಷರ ಮೂರ್ತಿ ಅವರು ತೀರ್ಪುಗಾರರಾಗಿದ್ದಾರೆ ಎಂದು ಡಾ. ಶಾಂತೇಶ್ ತಿಳಿಸಿದ್ದಾರೆ. ಮಳೆಯ ವೈಪರೀತ್ಯ ಇದೇ ರೀತಿ ಮುಂದುವರೆದಲ್ಲಿ ದಿನಾಂಕ ಬದಲಾವಣೆಯಾಗಬಹುದು ಎಂದು ಡಾ. ಶಾಂತೇಶ್ ತಿಳಿಸಿದ್ದಾರೆ. -ಟಿ.ಎಲ್. ಶ್ರೀನಿವಾಸ್