ಬೆಂಗಳೂರು, ಅ.31: ಬೆಂಗಳೂರು ಶಿವಾಜಿನಗರದ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಾಲ್ವರು ಆರೋಪಿಗಳ ಪೈಕಿ ಮೂವರು ವ್ಯಕ್ತಿಗಳು ಮಡಿಕೇರಿಯಲ್ಲಿ ಕಳೆದ ವರ್ಷ ಟಿಪ್ಪು ಜಯಂತಿ ಸಂದರ್ಭ ನಡೆದ ಗಲಭೆಯಲ್ಲಿ ಪಾತ್ರಧಾರಿ ಗಳಾಗಿರುವದು ಬೆಳಕಿಗೆ ಬಂದಿದೆ. ಎನ್.ಐ.ಎ ಅಧಿಕಾರಿಗಳು ನಡೆಸುತ್ತಿರುವ ತನಿಖೆಯಲ್ಲಿ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕುಟ್ಟಪ್ಪ ಅವರ ಹತ್ಯೆಗೆ ಉದ್ದೇಶ ಪೂರ್ವಕವಾಗಿ ಕಾರ್ಯ ಯೋಜಿಸಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ ಎಂದು ರಾಜ್ಯದ ಪ್ರಮುಖ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ನವದೆಹಲಿಯಿಂದ ಬಂದಿರುವ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ)ದ ಅಧಿಕಾರಿಗಳು ನಡೆಸಿದ ವಿಚಾರಣೆಯಲ್ಲಿ ಆರೋಪಿಗಳು ಈ ಮಾಹಿತಿ ನೀಡಿದ್ದಾರೆನ್ನಲಾಗಿದೆ. ಮಡಿಕೇರಿ ಯಲ್ಲಿ ಕಳೆದ ವರ್ಷ ಟಿಪ್ಪು ಜಯಂತಿ ಆಚರಣೆ ವೇಳೆ ಕೋಮು ಗಲಭೆಗಳಾಗಿದ್ದವು.

ಆ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಮುಖಂಡ ಕುಟ್ಟಪ್ಪ ಅವರ ಹತ್ಯೆಯಾಗಿತ್ತು. ಅದು ಗಲಭೆಯಲ್ಲಿ ಆದ ಸಾವು ಎಂಬದು ಸರಕಾರದ ವಾದವಾಗಿದೆ. ಆದರೆ, ಎನ್.ಐ.ಎ ಅಧಿಕಾರಿಗಳು ನಡೆಸುತ್ತಿರುವ ತನಿಖೆಯಲ್ಲಿ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕುಟ್ಟಪ್ಪ ಅವರÀ ಹತ್ಯೆಯನ್ನು ಉದ್ದೇಶಪೂರ್ವಕವಾಗಿ ಯೋಜಿಸಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ಕೇರಳದ ಪ್ರಬಲ ಸಮುದಾಯದವರನ್ನು ಕರೆಸಿಕೊಂಡು ಮಡಿಕೇರಿಯಲ್ಲಿ ಗಲಭೆಗೆ ಬಳಸಿಕೊಳ್ಳಲಾಗಿತ್ತು ಎಂದು ಆರೋಪಿಗಳು ತಿಳಿಸಿದ್ದಾರೆ.

ರುದ್ರೇಶ್ ಹತ್ಯೆಯಲ್ಲಿ ಭಾಗಿಯಾಗಿದ್ದಾರೆನ್ನಲಾದ ವಜೀಬ್, ಇಕ್ರಾಮ್ ಪಾಷಾ, ವಾಸೀಂ ಮತ್ತು ಮಜರ್ ಅವರು ಪಿಎಫ್‍ಐ ಸಂಘಟನೆಗೆ ಸೇರಿದವರಾಗಿದ್ದು, ಎನ್.ಐ.ಎ. ಅಧಿಕಾರಿಗಳು ಇನ್ನಷ್ಟು ದಿನ ಅವರ ವಿಚಾರಣೆ ಮುಂದುವರಿಸಲಿದ್ದಾರೆ.

ಇವರ ಪೈಕಿ ವಜೀಬ್, ವಾಸೀಂ ಮತ್ತು ಮಜರ್ ಅವರುಗಳು ಮಡಿಕೇರಿ ಗಲಭೆಯಲ್ಲಿ ಪಾಲ್ಗೊಂಡಿದ್ದರು ಎಂಬದು ಎನ್.ಐ.ಎ.ಗೆ ದೊರೆತ ಮಾಹಿತಿಯಾಗಿದೆ ಎಂದು ಸುದ್ದಿ ವಾಹಿನಿ ವಿವರಿಸಿದೆ.

ಸಂಸದರ ಹತ್ಯೆಗೆ ಸಂಚು

ಕೇರಳದ ಉಗ್ರ ಸಂಘಟನೆಯ ತತ್ವಗಳಿಂದ ಪ್ರಭಾವಿತರಾಗಿದ್ದ ಈ ಹಂತಕರು ರಾಜ್ಯದ ಹಿಂದೂ ಸಂಘಟನೆ ಹಾಗೂ ಬಿ.ಜೆ.ಪಿ.ಯ ಕೆಲವು ಮುಖಂಡರ ಹತ್ಯೆಗೂ ಸಂಚು ರೂಪಿಸಿದ್ದುದು ತನಿಖೆ ಸಂದರ್ಭ ಬಯಲಿಗೆ ಬಂದಿದೆ. ಕೊಡಗು- ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಹತ್ಯೆಗೆ ಈ ತಂಡ ಎರಡು ಬಾರಿ ವಿಫಲ ಯತ್ನ ನಡೆಸಿತ್ತು ಎಂದು ತಿಳಿದುಬಂದಿದೆ.