ಮಡಿಕೇರಿ, ಅ. 30: ವಿಶಿಷ್ಟವಾದ ಆಚಾರ - ವಿಚಾರ ಸಂಸ್ಕøತಿಯ ಮೂಲಕ ವಿಭಿನ್ನವಾಗಿ ಗುರುತಿಸಲ್ಪಡುವ ಕೊಡವ ಜನಾಂಗದಲ್ಲಿ ಗುರು ಕಾರೋಣರ (ಹಿರಿಯರ) ಆರಾಧನೆಯೂ ಒಂದಾಗಿದೆ. ಕುಟುಂಬದವರೆಲ್ಲರೂ ಸೇರಿ ತಮ್ಮ ಪೂರ್ವಿಕರನ್ನು ಸ್ಮರಿಸಿ ಪ್ರಾರ್ಥಿಸುವದರೊಂದಿಗೆ ಕಾರೋಣರಿಗೆ ವಾರ್ಷಿಕವಾಗಿ ಮೀದಿ ಅರ್ಪಿಸುವದು ಈ ಆಚರಣೆಯಾಗಿದೆ. ಜಿಲ್ಲೆಯಲ್ಲಿ ಕೊಡವ ಜನಾಂಗದಲ್ಲಿ ಅನಾದಿ ಕಾಲದಿಂದಲೂ ಈ ಸಂಸ್ಕøತಿ ಮುಂದುವರಿದುಕೊಂಡು ಬರುತ್ತಿದೆ. ತಾ. 30 ರಂದು ಶೇ. 60ಕ್ಕೂ ಅಧಿಕ ಕೊಡವ ಕುಟುಂಬಗಳಲ್ಲಿ ಗುರು ಕಾರೋಣರಿಗೆ ಕೊಡುವ (ಕಾರಣಂಗ್ ಕೊಡ್‍ಪ ಕಾರ್‍ಬಾರ್) ಕಾರ್ಯಕ್ರಮ ನಡೆಯಿತು. ಆಯಾ ಕುಟುಂಬಗಳಲ್ಲಿ ಪ್ರತ್ಯೇಕವಾಗಿ ತಮ್ಮ ತಮ್ಮ ಕುಟುಂಬದ ಕಾರೋಣರನ್ನು ಸ್ಮರಿಸಲಾಯಿತು. ಕೈಮಡ, ಐನ್‍ಮನೆ ಅಥವಾ ಕಾರೋಣರಿಗೆ ಮೀಸಲಾದ ಸ್ಥಳದಲ್ಲಿ ಈ ಕಾರ್ಯ ನಡೆಯುತ್ತದೆ.

ವಾರ್ಷಿಕವಾಗಿ ಒಮ್ಮೆ ಕುಟುಂಬದವರೆಲ್ಲರೂ ಸೇರಿ ಈ ಕಾರ್ಯ ನೆರವೇರಿಸುತ್ತಾರೆ. ಪ್ರತಿ ಕುಟುಂಬದ ಸದಸ್ಯರು, ಹೊರ ಭಾಗದಲ್ಲಿ ಉದ್ಯೋಗ, ವ್ಯಾಪಾರದಲ್ಲಿ ತೊಡಗಿರುವವರು ಸಂಸಾರ ಸಹಿತವಾಗಿ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ.