ಮಡಿಕೇರಿ, ಜು. 14: ಮಾಜಿ ಗೃಹ ಸಚಿವ ಕೆ.ಜೆ. ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣಬ್ ಮೊಹಂತಿ ಹಾಗೂ ಪ್ರಸಾದ್ ಅವರುಗಳ ಕಿರುಕುಳದ ಆರೋಪ-ನೋವು ತೋಡಿಕೊಂಡು ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್‍ಪಿ ಮಾದಪಂಡ ಕೆ. ಗಣಪತಿ ಅವರಿಗೆ ಅವರ ತವರು ಜಿಲ್ಲೆಯಾದ ಕೊಡಗು ಹೃದಯಾಂತರಾಳದಿಂದ ಮಿಡಿದಿದೆ.

ಆತ್ಮಹತ್ಯೆ ಪ್ರಕರಣ ಹಾಗೂ ಸರಕಾರದ ನಡೆಯನ್ನು ವಿರೋಧಿಸಿ ಇಂದು ಹಿಂದೂಪರ ಸಂಘಟನೆಗಳ ಮೂಲಕ ಕರೆ ನೀಡಲಾಗಿದ್ದ ಕೊಡಗು ಬಂದ್‍ಗೆ ಇಡೀ ಜಿಲ್ಲೆಗೆ ಜಿಲ್ಲೆಯೇ ಸ್ಪಂದಿಸಿದ್ದು ಬಂದ್‍ನ ಕರಾಳದಿನದ ಮೂಲಕ ಜನತೆಯ ಆಕ್ರೋಶ ಸ್ಫೋಟಗೊಂಡಿದೆ.

ಇದು ಯಾವದೇ ಜನವಿರೋಧಿ ಯೋಜನೆ ಅಥವಾ ರಾಜಕೀಯ ವಿಚಾರದ ಬಂದ್ ಕರೆಯಾಗಿರಲಿಲ್ಲ. ದಕ್ಷ-ಪ್ರಮಾಣಿಕ ಅಧಿಕಾರಿಯೋರ್ವರು ಸಮವಸ್ತ್ರದಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯ ಕಿಡಿಯಂತೆ ಮೃತರ ಕುಟುಂಬಕ್ಕೆ, ಮೃತ ಅಧಿಕಾರಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ನಡೆದ ಪ್ರತಿಭಟನೆಯಾಗಿದ್ದು, ಜಿಲ್ಲೆಯ ಜನತೆ, ಸಂಘ-ಸಂಸ್ಥೆ, ಸಮಾಜಗಳು, ಹೋರಾಟ ಸಂಘಟನೆಗಳು ಒಗ್ಗೂಡಿ ಸ್ಪಂದಿಸಿದ್ದು ಬಂದ್ ಕರೆ ಸಂಪೂರ್ಣ ಯಶಸ್ವಿಯಾಗಿದೆ.

ಜುಲೈ 7 ರಂದು ಗಣಪತಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆ ದಿನದಿಂದಲೇ ರಾಜ್ಯಾದ್ಯಂತ ಹೋರಾಟದ ಕಾವು ಆರಂಭಗೊಂಡಿದ್ದು, ಇಂದು ಜಿಲ್ಲೆಯಲ್ಲಿ ಬಂದ್ ಆಚರಣೆಯ ಮೂಲಕ ಪ್ರತಿಭಟನೆ ಮತ್ತಷ್ಟು ಸ್ಫೋಟಗೊಂಡಿತು.

ಗಣಪತಿ ಅವರು ಆರೋಪಿಸಿರುವ ಮಾಜಿ ಗೃಹಸಚಿವ, ಹಾಲಿ ಸಚಿವ ಕೆ.ಜೆ. ಜಾರ್ಜ್ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು, ಇವರು ಸೇರಿದಂತೆ ಕಿರುಕುಳದ ಆರೋಪ ಹೊತ್ತಿರುವ ಅಧಿಕಾರಿಗಳಾದ ಪ್ರಣಬ್ ಮೊಹಂತಿ ಹಾಗೂ ಪ್ರಸಾದ್ ಅವರುಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು, ಪ್ರಕರಣದ ತನಿಖೆಯನ್ನು ಸಿಐಡಿಗೆ ಬದಲಾಗಿ

ಸಿಬಿಐಗೆ ವಹಿಸಬೇಕು ಎಂಬ ಒತ್ತಾಯ ಇಡೀ ರಾಜ್ಯಾದ್ಯಂತ ಸಾರ್ವತ್ರಿಕವಾಗಿ ವ್ಯಕ್ತಗೊಂಡಿದೆ.

ಮೃತ ಗಣಪತಿ ಕುಟುಂಬದ ಬೇಡಿಕೆಯೂ ಇದೇ ಆಗಿದ್ದು, ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಈ ಬಗ್ಗೆ ಜಂಟಿ ಹೋರಾಟ ನಡೆಸುತ್ತಿದೆ. ಆದರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಈ ಬಗ್ಗೆ ‘ಜಪ್ಪಯ್ಯ’ ಎಂದರೂ ಯಾವದೇ ರೀತಿ ಸ್ಪಂದಿಸಿಲ್ಲ. ಆರಂಭದಲ್ಲಿ ಸಿಐಡಿ ತನಿಖೆಗೆ ಆದೇಶಿಸಿರುವ ಸರಕಾರ ನಿನ್ನೆ ನ್ಯಾಯಾಂಗ ತನಿಖೆಗೆ ಮಾತ್ರ ಒಪ್ಪಿಗೆ ನೀಡಿದೆ. ಆದರೆ ಇದನ್ನು ಒಪ್ಪದ ಬಿಜೆಪಿ ಹಾಗೂ ಜೆಡಿಎಸ್ ಸದನದಲ್ಲಿ ಆಹೋರಾತ್ರಿ ಪ್ರತಿಭಟನೆ ನಡೆಸಿವೆ.

ಈ ತನಕದ ಹೋರಾಟಕ್ಕೆ, ಬೇಡಿಕೆಗೆ ಸ್ಪಂದನ ಸಿಗದ ಕಾರಣ ಬಂದ್ ಕರೆಗೆ ಮತ್ತಷ್ಟು ಬೆಂಬಲ ಕಂಡುಬಂದಿದ್ದು, ಬಿಜೆಪಿ, ಹಿಂದೂಪರ ಸಂಘಟನೆಗಳು, ಜೆಡಿಎಸ್, ಕೊಡವ-ಗೌಡ ಸಮಾಜ ಸೇರಿದಂತೆ ಜಿಲ್ಲೆಯ ಖಾಸಗಿ ಬಸ್ ಮಾಲೀಕರ ಸಂಘ, ಚೇಂಬರ್ ಆಫ್ ಕಾಮರ್ಸ್, ವಿವಿಧ ಜನಾಂಗೀಯ ಸಂಘಟನೆಗಳು ಇನ್ನಿತರ ಸಂಘ-ಸಂಸ್ಥೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಜಿಲ್ಲೆಯಾದ್ಯಂತ ಬಂದ್ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ಕೇಂದ್ರ ಮಡಿಕೇರಿ, ತಾಲೂಕು ಕೇಂದ್ರಗಳಾದ ಸೋಮವಾರಪೇಟೆ, ವೀರಾಜಪೇಟೆ ಗಡಿಭಾಗವಾದ ಕುಶಾಲನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಪಟ್ಟಣಗಳು ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲೂ ಬಂದ್ ಕರೆಗೆ ಪ್ರತಿಸ್ಪಂದನ ಕಂಡುಬಂದಿರುವದು ವಿಶೇಷವಾಗಿದೆ.

ಬೆಳಿಗ್ಗೆ 6 ಗಂಟೆಯಿಂದಲೇ ಮಡಿಕೇರಿ ಕೊಪ್ಪ ಗೇಟ್, ವೀರಾಜಪೇಟೆ, ಸೋಮವಾರಪೇಟೆ, ಗೋಣಿಕೊಪ್ಪ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರತಿಭಟನೆ ಆರಂಭಗೊಂಡಿತು. ಬೆಳ್ಳಂಬೆಳಿಗ್ಗೆಯೇ ಕುಶಾಲನಗರದಲ್ಲಿ ಟಯರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಜಾರ್ಜ್ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟು ಇತರ ಇಬ್ಬರ ವಿರುದ್ಧವೂ ಕ್ರಮ ಜರುಗಿಸಬೇಕು. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂಬ ಒತ್ತಾಯ ಇಡೀ ಜಿಲ್ಲೆಯಾದ್ಯಂತ ಕೇಳಿಬಂದಿತು. ಅಲ್ಲಲ್ಲಿ ಸೇರಿದ್ದ ಜನರ ಸಂಖ್ಯೆಯೂ ಈ ದಿನದ ಬಂದ್ ಕರೆಯಲ್ಲಿ ಹೆಚ್ಚಾಗಿ ಕಂಡುಬಂದಿತು

ಬಂದ್ ಕರೆಯ ನಡುವೆಯೂ ಆಗಮಿಸಿದ ವಾಹನಗಳನ್ನು ತಡೆಹಿಡಿಯಲಾಯಿತು. ಶಾಲಾ ಕಾಲೇಜುಗಳು ಬಹುತೇಕ ಸ್ವಯಂ ಘೋಷಿತವಾಗಿ ಮುಚ್ಚಲ್ಪಟ್ಟಿತ್ತು. ಸರಕಾರ ಜಿಲ್ಲೆಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರೂ, ಸ್ವಯಂ ಪ್ರೇರಣೆಯ ಬಂದ್ ಆಚರಣೆಯಿಂದಾಗಿ ಪ್ರಾಮಾಣಿಕ ಅಧಿಕಾರಿಯೋರ್ವರ ದಾರುಣ ಸಾವಿಗೆ ನ್ಯಾಯದೊರಕಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟದ ಹೆಜ್ಜೆ ಸಂಪೂರ್ಣ ಯಶಸ್ವಿಯಾಗಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯ ಹೃದಯ ಭಾಗವಾದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಾರ್ಜ್, ಅಧಿಕಾರಿಗಳಾದ ಮೊಹಂತಿ ಹಾಗೂ ಪ್ರಸಾದ್ ಇವರುಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಗರ ವ್ಯಾಪ್ತಿಯಲ್ಲಿ ಸರಕಾರಿ ಹಾಗೂ ಖಾಸಗಿ ಬಸ್ ಸಂಚಾರವಿರಲಿಲ್ಲ. ಆಟೋ ಹಾಗೂ ಖಾಸಗಿ ವಾಹನಗಳ ಸಂಚಾರವೂ ಸ್ಥಗಿತಗೊಂಡಿತ್ತು. ಆಂಬ್ಯುಲೆನ್ಸ್ ಹಾಗೂ ತುರ್ತು ಕಾರ್ಯಗಳ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಪ್ರತಿಭಟನಾಕಾರರು ಅನುವು ಮಾಡಿಕೊಟ್ಟರೇ ಹೊರತಾಗಿ ಯಾವದೇ ವಾಹನಗಳಿಗೆ ಅವಕಾಶ ಕಲ್ಪಿಸಲಿಲ್ಲ. ಕೆಲವಾರು ವಾಹನಗಳು ನಗರ ಪ್ರವೇಶಿಸಲು ಬಂದವಾದರೂ ಪ್ರತಿಭಟನಾಕಾರರು ತಡೆದು ನಿಲ್ಲಿಸಿದರು. ಈ ಹಿನ್ನೆಲೆ ಮಂಗಳೂರು ರಸ್ತೆ, ಮೈಸೂರು ರಸ್ತೆ, ವೀರಾಜಪೇಟೆ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಗಣಪತಿ ಸಾವಿಗೆ ನ್ಯಾಯ ಕೊಡಿಸಿ, ಆರೋಪಿಗಳನ್ನು ಬಂಧಿಸಿ, ಜನವಿರೋಧಿ ಸರಕಾರ ಎಂಬಿತ್ಯಾದಿ ನೂರಾರು ನಾಮಫಲಕಗಳನ್ನು ಹಿಡಿದು ಪ್ರತಿಭಟನಾಕಾರರು ಪ್ರತಿಭಟಿಸಿದರು. ಬಂದ್ ಬಗ್ಗೆ ಮಾಹಿತಿಯಿಲ್ಲದೆ ಬಂದ ಪ್ರವಾಸಿಗರು ರಾಜಾಸೀಟ್ ಇತ್ಯಾದಿ ಕಡೆಗಳಲ್ಲಿ ದಿನಕಳೆಯುವಂತಾಯಿತು. ಪ್ರಯಾಣಿಕರು ಬಸ್ ನಿಲ್ದಾಣವನ್ನು ಅವಲಂಭಿಸಿದರು. ಬಹುತೇಕ ಕಾಲೇಜು, ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಿತ್ತು. ಪಿಯುಸಿ ಪೂರಕ ಪರೀಕ್ಷೆಗಳು ನಿಗದಿಯಂತೆ ನಡೆದವು. ಹಲವಾರು ಶಾಲಾ-ಕಾಲೇಜುಗಳು ಮುಚ್ಚಿದ್ದವು. ಕೆಲವು ಶಾಲಾ-ಕಾಲೇಜುಗಳು ಮಧ್ಯಾಹ್ನ ನಂತರ ಮುಚ್ಚಲಾಯಿತು. ಬಹುತೇಕ ಸರಕಾರಿ ಕಚೇರಿ ಮುಚ್ಚಿದ್ದವು. ಕರ್ತವ್ಯ ನಿರ್ವಹಿಸುತ್ತಿದ್ದ ಕೆಲವೊಂದು ಸರಕಾರಿ ಕಚೇರಿಗಳನ್ನು ಪ್ರತಿಭಟನಾಕಾರರು ಮುಚ್ಚಿಸಿದರು.

ಹಿಂದೂಪರ ಸಂಘಟನೆಗಳ ಪ್ರತಿಭಟನೆ, ಹಲವಾರು ಸಂಘಟನೆಗಳು, ರಾಜಕೀಯ ಪಕ್ಷಗಳು ಸಾಥ್ ನೀಡಿದವು. ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವಹಿಂದೂ ಪರಿಷತ್, ಹಿಂದೂ ಜಾಗರಣಾ ವೇದಿಕೆ, ಮೋಗೇರ ಸಮಾಜ, ಕೊಡವ ಮಕ್ಕಳ ಕೂಟ, ಕೊಡವ ನ್ಯಾಷನಲ್ ಕೌನ್ಸಿಲ್, ಬಂಟರ ಸಂಘ, ಚೇಂಬರ್ ಆಫ್ ಕಾಮರ್ಸ್, ವಕೀಲ ಮಿತ್ರ ಪರಿಷತ್, ನಾಗರಿಕ ಹೋರಾಟ ಸಮಿತಿ, ಕೊಡಗು ಜಿಲ್ಲಾ ಬಿಜೆಪಿ, ಆಮ್ ಆದ್ಮಿ ಪಾರ್ಟಿ ಸೇರಿದಂತೆ ಇನ್ನೂ ಹಲವಾರು ಸಂಘ ಸಂಸ್ಥೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

ಚೌಕಿಯಲ್ಲಿನ ಶೂ ಅಂಗಡಿಯೊಂದು ತೆರೆದೇ ಇದ್ದು, ಪ್ರತಿಭಟನಾಕಾರರು ಮನವೊಲಿಸಿ ಮುಚ್ಚಿಸಿದರು. ಒಮ್ಮೆ ಮಾತು ಬಿರುಸೇರಿದಾಗ ಪೊಲೀಸರು ಮಧ್ಯ ಪ್ರವೇಶಿಸಿದರು.

ಪ್ರತಿಕೃತಿ ದಹನ-ಶವಯಾತ್ರೆ

ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಮಡಿಕೇರಿಯಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಮೊಹಂತಿ, ಪ್ರಸಾದ್ ಇವರುಗಳ ಪ್ರತಿಕೃತಿ ದಹನ, ಅಣಕು ಶವಯಾತ್ರೆ ನಡೆಯಿತು. ದಿಢೀರನೆ ಕೆಲಹೊತ್ತು ಸುರಿದ ಮಳೆಯ ನಡುವೆಯೂ ಪ್ರತಿಭಟನೆಯ ಕಾವು ಕಡಿಮೆಯಾಗಲಿಲ್ಲ. ನಡು ರಸ್ತೆಯಲ್ಲಿ ಟೈರ್‍ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆಯಲ್ಲಿ ಹಿಂ.ಜಾ.ವೇ ಉಪಾಧ್ಯಕ್ಷ ಸುಜಾ, ತಾಲೂಕು ಅಧ್ಯಕ್ಷ ಪೊನ್ನಪ್ಪ, ಸಂಚಾಲಕ ಅಜಿತ್, ವಿಶ್ವ ಹಿಂದೂ ಪರಿಷತ್ ಪ್ರಮುಖ ಕರವಂಡ ಕುಶಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ, ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್, ಮಾಜಿ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ, ಮಡಿಕೇರಿ ನಗರಾಧ್ಯಕ್ಷ ಮಹೇಶ್ ಜೈನಿ, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಕೊಡವ ಸಮಾಜದ ಅಧ್ಯಕ್ಷ ಶಂಭು ಸುಬ್ಬಯ್ಯ, ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್, ವಕೀಲಮಿತ್ರ ಪರಿಷತ್ ಅಧ್ಯಕ್ಷ ಪೆಮ್ಮಯ್ಯ, ತಾ.ಪಂ. ಸದಸ್ಯ ರಾಯ್ ತಮ್ಮಯ್ಯ, ಮಡಿಕೇರಿ ನಗರಸಭಾ ಸದಸ್ಯರಾದ ಪ್ರಕಾಶ್, ಉಣ್ಣಿಕೃಷ್ಣ, ಕೆ.ಎಸ್. ರಮೇಶ್, ಅನಿತಾ ಪೂವಯ್ಯ, ಲಕ್ಷ್ಮಿ, ಸವಿತಾ ರಾಕೇಶ್, ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಸತೀಶ್, ದೇಶಪ್ರೇಮಿ ಯುವಕ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ, ನಾಗರಿಕ ಹಿತರಕ್ಷಣಾ ಸಮಿತಿಯ ಪ್ರಸನ್ನ ಭಟ್, ಕಾವೇರಪ್ಪ ಸೇರಿದಂತೆ ಹಲವಾರು ಪ್ರಮುಖರು ಪಾಲ್ಗೊಂಡಿದ್ದರು.

ಬಿಗಿ ಬಂದೋಬಸ್ತ್

ಬಂದ್ ಹಿನ್ನೆಲೆ ಮಡಿಕೇರಿ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಕೊಡಗು ಎಸ್ಪಿ ರಾಜೇಂದ್ರ ಪ್ರಸಾದ್, ಮೈಸೂರು ಜಿಲ್ಲಾ ಎಸ್ಪಿ ಅಭಿನವ್ ಖರೆ, ಹಾಸನ ಎಎಸ್‍ಪಿ ಶೋಭಾರಾಣಿ, ಐಜಿ ಬಿ.ಕೆ. ಸಿಂಗ್ ಮುಂದಾಳತ್ವದಲ್ಲಿ ಪೊಲೀಸ್ ಸರ್ಪಗಾವಲನ್ನು ಹಾಕಲಾಗಿತ್ತು.

ಹಾಕತ್ತೂರುವಿನಲ್ಲಿ ಪ್ರತಿಭಟನೆ

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಕತ್ತೂರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಯುವ ಮೋರ್ಚಾ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಟಯರ್‍ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

ಈ ಸಂದರ್ಭ ತಾ.ಪಂ. ಸದಸ್ಯೆ ತುಂತಜೆ ಕುಮುದಾ ಮಾತನಾಡಿ, ಆತ್ಮಹತ್ಯೆ ಪ್ರಕರಣವನ್ನು ತಕ್ಷಣ ಸಿಬಿಐ ತನಿಖೆಗೆ ಒಪ್ಪಿಸಬೇಕು. ಅಲ್ಲದೆ ಆರೋಪಕ್ಕೆ ಗುರಿಯಾದ ಸಚಿವ ಕೆ.ಜೆ. ಜಾರ್ಜ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್ ಮತ್ತು ಪ್ರಣಬ್ ಮೊಹಂತಿ ಅವರನ್ನು ಅಮಾನತು ಮಾಡಿ ತನಿಖೆ ನಡೆಸುವಂತೆ ಆಗ್ರಹಿಸಿದರು.

ಮೇಕೇರಿ ಗ್ರಾ.ಪಂ. ಅಧ್ಯಕ್ಷೆ ಕೆ.ಕೆ. ಜಯಂತಿ ಮಾತನಾಡಿ, ದಕ್ಷ ಅಧಿಕಾರಿಯ ಆತ್ಮಹತ್ಯೆ ನೋವಿನ ಸಂಗತಿಯಾಗಿದೆ. ಗಣಪತಿ ಪತ್ನಿ ಪಾವನಾ ಅವರಿಗೆ ನ್ಯಾಯ ದೊರಕಿಸಿಕೊಡಬೇಕು. ಸರಕಾರದ ನಿರ್ಲಕ್ಷ್ಯ ತೀವ್ರ ಖಂಡನೀಯ ಎಂದರು.

ಈ ಸಂದರ್ಭ ಹಾಕತ್ತೂರು ಗ್ರಾ.ಪಂ. ಸದಸ್ಯರಾದ ಪುಷ್ಪಾವತಿ, ಪೃಥ್ವಿ, ವಿಷ್ಣುಕುಮಾರ್, ಮೇಕೇರಿ ಗ್ರಾ.ಪಂ. ಸದಸ್ಯ ರಕ್ಷಿತ್, ಹಾಕತ್ತೂರು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಜನ್ ಹಾಗೂ ಕಗ್ಗೋಡ್ಲು, ಹಾಕತ್ತೂರು, ಬಿಳಿಗೇರಿ ಗ್ರಾಮದ ಹಿಂದೂಪರ ಸಂಘಟನೆ ಕಾರ್ಯಕರ್ತರು ಇದ್ದರು.

ಸಿದ್ದಾಪುರ

ಡಿ.ವೈ.ಎಸ್.ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಜಾರ್ಜ್ ಕೂಡಲೇ ರಾಜಿನಾಮೆ ನೀಡಬೇಕು, ಪ್ರಕರಣವನ್ನು ಸಿ.ಬಿ.ಐ ಗೆ ವಹಿಸಬೇಕೆಂದು ಒತ್ತಾಯಿಸಿ ಬಿ.ಜೆ.ಪಿ ಹಾಗೂ ಹಿಂದೂಪರ ಸಂಘಟನೆಗಳು ಕರೆ ನೀಡಿದ ಕೊಡಗು ಬಂದ್‍ಗೆ ಸಿದ್ದಾಪುರ, ನೆಲ್ಯಹುದಿಕೇರಿ, ಚೆಟ್ಟಳ್ಳಿ, ಅಮ್ಮತ್ತಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಂಗಡಿಮುಂಗಟ್ಟು ಸಂಪೂರ್ಣ ಬಂದ್ ಆಗಿತ್ತು.

ನೆಲ್ಯಹುದಿಕೇರಿಯಲ್ಲಿ ಬಿ.ಜೆ.ಪಿ ಪ್ರತಿಭಟನಾ ಮೆರವಣಿಗೆಯ ಮೂಲಕ ಮುತ್ತಪ್ಪ ದೇವಾಲಯದಿಂದ ಪಟ್ಟಣಕ್ಕೆ ತೆರಳಿದ ಬಿ.ಜೆ.ಪಿ ಕಾರ್ಯಕರ್ತರು ರಾಜ್ಯ ಸರಕಾರ ಹಾಗೂ ಜಾರ್ಜ್ ವಿರುದ್ಧ ಘೋಷಣೆ ಕೂಗಿದರು. ಮಾತ್ರವಲ್ಲದೇ ಪಟ್ಟಣದಲ್ಲಿ ಮಾನವ ಸರಪಳಿ ರಚಿಸಿ, ಕೆಲಕಾಲ ರಸ್ತೆತಡೆ ನಡೆಸಿದರು. ಈ ಸಂದರ್ಭ ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೊಕೇಶ್ , ಗ್ರಾ.ಪಂ ಸದಸ್ಯ ಯೋಗೇಶ್, ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಟಿ.ಶಾಜಿ, ಮುಖಂಡರಾದ ಟಿ.ಸಿ.ಅಶೋಕ, ಸುರೇಶ್, ಮಂಜು, ನೇಮಿರಾಜ್, ಸತೀಶ್ ಅಪ್ಪಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಸಿದ್ದಾಪುರದಲ್ಲಿ ಬೆಳಗ್ಗಿನಿಂದಲೇ ವರ್ತಕರು ಅಂಗಡಿ ಮುಂಗಟ್ಟುಗಳು ಮುಚ್ಚುವ ಮೂಲಕ ಬಂದ್‍ಗೆ ಸ್ವಯಂಘೋಷಿತ ಬೆಂಬಲ ನೀಡಿದರು. ಖಾಸಗಿ, ಸರಕಾರಿ ಬಸ್ಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪಟ್ಟಣ ಬಿಕೋ ಎನ್ನುತ್ತಿತ್ತು. ಪಟ್ಟಣದಲ್ಲಿ ಬಿ.ಜೆ.ಪಿ ಪ್ರತಿಭಟನೆ ನಡೆಸಿ, ಜಾರ್ಜ್ ರಾಜಿನಾಮೆಗೆ ಒತ್ತಾಯಿಸಿದರು. ಈ ಸಂದರ್ಭ ಸ್ಥಾನೀಯ ಸಮಿತಿ ಅಧ್ಯಕ್ಷ ವಿ.ಮನೋಹರ್, ತಾ.ಪಂ ಸದಸ್ಯ ಜನೀಶ್, ಕಾರ್ಯದರ್ಶಿ ಪದ್ಮಯ್ಯ, ಮುಖಂಡರಾದ ಗಿರೀಶ್, ಮಣಿ, ಶೇಷಪ್ಪ, ರಾಜೀವ್, ಮೋಹನ್ ಸೇರಿದಂತೆ ಇನ್ನಿತರರು ಇದ್ದರು.

ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಬಿ.ಜಿ.ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು. ಸೂಕ್ಷ್ಮ ಪ್ರದೇಶವಾದ ಹಿನ್ನೆಲೆಯಲ್ಲಿ 2 ತುಕಡಿ ಕೆ.ಎಸ್.ಆರ್.ಪಿ, 1 ತುಕಡಿ ಡಿ.ಆರ್, 1 ವೃತ್ತ ನಿರೀಕ್ಷಕರು, 3 ಠಾಣಾಧಿಕಾರಿ, ಹೋಮ್‍ಗಾಡ್ರ್ಸ್‍ಗಳನ್ನು ನಿಯೋಜಿಸಲಾಗಿತ್ತು.

ಚೆಟ್ಟಳ್ಳಿ

ಡಿವೈಎಸ್‍ಪಿ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಬಲ್ಲಾರಂಡ ಮಣಿಉತ್ತಪ್ಪ ಅವರ ನೇತೃತ್ವದಲ್ಲಿ ಚೆಟ್ಟಳ್ಳಿಯಲ್ಲಿ ಸಚಿವ ಜಾರ್ಜ್ ಪ್ರತಿಕೃತಿ ದಹನ ಹಾಗೂ ಪ್ರತಿಭಟನೆ ಮಾಡಲಾಯಿತು.

ಬೆಳಿಗ್ಗೆ 6 ಗಂಟೆಯಿಂದಲೇ ಅಂಗಡಿಮುಂಗಟ್ಟನ್ನು ಮುಚ್ಚಿ ಪ್ರತಿಭಟನೆ ಮಾಡಲಾಯಿತು. 11.30 ಗಂಟೆಗೆ ಬಿಜೆಪಿ ಮುಖಂಡ ಬಲ್ಲಾರಂಡ ಮಣಿಉತ್ತಪ್ಪ, ಹಿಂದೂ ಸಂಘಟಕ ಕಂಠಿಕಾರ್ಯಪ್ಪ ಹಾಗೂ ಸಂಘಟಕರು ಡಿವೈಎಸ್‍ಪಿ ಆತ್ಮಹತ್ಯೆ ಪ್ರಕರಣಕ್ಕೆ ಕಾರಣರಾದ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿ ಸಿಧ್ಧರಾಮಯ್ಯ ಹಾಗೂ ಜಾರ್ಜ್ ಅವರಿಗೆ ಧಿಕ್ಕಾರ ಕೂಗುತ್ತಾ ಮಾನವಸರಪಳಿ ರಚಿಸಿ ಪ್ರತಿಕೃತಿ ಧಹಿಸಿದರು. ಮಣಿಉತ್ತಪ್ಪ ಮಾತನಾಡಿ ಡಿವೈಎಸ್‍ಪಿ ಆತ್ಮಹತ್ಯೆ ಪ್ರಕರಣಕ್ಕೆ ಕಾರಣರಾದ ಕೆ.ಜೆ ಜಾರ್ಜ್ ಹಾಗೂ ಪೊಲೀಸ್ ಉನ್ನತ ಅಧಿಕಾರಿಗಳ ಮೇಲೆ ಎಫ್‍ಐಆರ್ ದಾಖಲಿಸಿ ಈ ಕೂಡಲೇ ಅವರನ್ನು ಅಧಿಕಾರದಿಂದ ವಜಾಗೊಳಿಸಬೇಕು. ಸಾಧ್ಯವಾಗದಿದ್ದಲ್ಲಿ ಸಚಿವ ಸಂಪುಟವನ್ನು ವಿಸರ್ಜಿಸಿ ಮುಂದಿನ ಚುನಾವಣೆ ನಡೆಸಿ ಆವಾಗ ಇದರ ಪ್ರತಿಉತ್ತರವನ್ನು ಜನರೇ ನೀಡುವರು ಎಂದರು.

ಕೂಡಿಗೆ

ಹಿಂದೂಪರ ಸಂಘಟನೆಗಳು, ಬಿಜೆಪಿ, ಎಬಿವಿಪಿ ಮತ್ತು ವಿವಿಧ ಸಂಘ ಸಂಸ್ಥೆಗಳು ಕರೆದಿದ್ದ ಕೊಡಗು ಬಂದ್ ಹಿನ್ನೆಲೆಯಲ್ಲಿ ಕೂಡಿಗೆ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ.

ಕೂಡಿಗೆ ಡೈರಿ ಸರ್ಕಲ್ ಹಾಗೂ ಹಾಸನಕ್ಕೆ ತೆರಳುವ ರಸ್ತೆಯ ವೃತ್ತದವರೆಗೆ ಎಬಿವಿಪಿ, ಸಂಘಟನೆಗಳ ಪ್ರಮುಖರು, ಬಿಜೆಪಿಯ ಕಾರ್ಯಕರ್ತರು ಬೈಕ್ ರ್ಯಾಲಿಯೊಂದಿಗೆ ರಾಜ್ಯ ಸರ್ಕಾರಕ್ಕೆ ದಿಕ್ಕಾರ ಕೂಗುತ್ತಾ, ಹಾಗು ಪ್ರಕರಣದಲ್ಲಿ ಭಾಗಿಗಳಾಗಿರುವ ಸಚಿವ ಜಾರ್ಜ್ ಹಾಗೂ ಪೊಲೀಸ್ ಅಧಿಕಾರಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ಜಾರ್ಜ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಂದ್‍ಗೆ ಸಹಕರಿಸುವಂತೆ ವರ್ತಕರಲ್ಲಿ ಮನವಿ ಮಾಡುವದರ ಮೂಲಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು.

ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಕೈಗಾರಿಕಾ ಪ್ರದೇಶವು 50ಕ್ಕೂ ಹೆಚ್ಚು ಕೈಗಾಗರಿಕಾ ಘಟಕಗಳು ಹೊಂದಿದ್ದು, ದಿನಂಪ್ರತಿ ಸಾವಿರಾರು ಕಾರ್ಮಿಕರು ಕಾರ್ಯನಿರ್ವಹಿಸುವ ಪ್ರದೇಶವು ಸಂಪೂರ್ಣವಾಗಿ ಬಂದ್ ಆಗಿ ಬಿಕೋ ಎನ್ನುತ್ತಿದ್ದವು. ಖಾಸಗಿ ವಾಹನಗಳ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ಬೇರೆಡೆ ತಲುಪಲು ಪರದಾಡುವಂತಾಗಿತ್ತು. ಅತಿಹೆಚ್ಚು ಸರ್ಕಾರಿ ಕಚೇರಿ ಹೊಂದಿರುವ ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿ ಕಚೇರಿಗಳು ತೆರಿದಿದ್ದರೂ ನೌಕರರ ಸಂಖ್ಯೆ ಕ್ಷೀಣವಾಗಿತ್ತು. ಶಾಲಾ- ಕಾಲೇಜುಗಳು ತೆರೆದಿದ್ದರೂ, ಶಿಕ್ಷಕರು, ವಿದ್ಯಾರ್ಥಿಗಳ ಬರುವಿಕೆಯನ್ನು ಕಾಯುತ್ತಿದ್ದರು. ಕೆಲವು ಶಾಲೆಗಳಲ್ಲಿ ವಾಹನ ಸಂಚಾರವಿಲ್ಲದೆ ಮಕ್ಕಳ ಸಂಖ್ಯೆಯು ಇಲ್ಲದೆ ರಜೆ ಘೋಷಿಸಿರುವದು ಕಂಡುಬಂದಿತು. ಕುಶಾಲನಗರ ಹೋಬಳಿ ವ್ಯಾಪ್ತಿಯು ಗ್ರಾಮಾಂತರ ಪ್ರದೇಶವಾಗಿದ್ದು, ಈ ಗ್ರಾಮಗಳಿಗೂ ಬಂದ್‍ನ ಬಿಸಿ ತಟ್ಟಿದಂತಾಗಿದೆ. ಬಂದ್ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಬಂದೂಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

(5ನೇ ಪುಟಕ್ಕೆ)

(ನಾಲ್ಕನೇ ಪುಟದಿಂದ)

ಸಂಪಾಜೆ

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಹಿನೆÀ್ನಲೆಯಲ್ಲಿ ಸಚಿವ ಜಾರ್ಜ್‍ರನ್ನು ಸಂಪುಟದಿಂದ ಕೈಬಿಡುವಂತೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಹಾಗೂ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿ ನಡೆದ ಕೊಡಗು ಬಂದ್ ಹಿನೆÀ್ನಲೆಯಲ್ಲಿ ಸಂಪಾಜೆ ಗೇಟಿನಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ನೇತೃತ್ವದಲ್ಲಿ ಸಂಪಾಜೆ ಗೇಟ್ ಬಂದ್ ಮಾಡಿ, ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.

ಬಾಲಚಂದ್ರ ಕಳಗಿ ಮಾತನಾಡಿ, ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆಗೆ ಕಾರಣರಾದ ಸಚಿವ ಜಾರ್ಜ್‍ರನ್ನು ಸಂಪುಟದಿಂದ ಕೈಬಿಟ್ಟು ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಅಲ್ಲದೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಪೊಲೀಸ್ ಮೇಲಾಧಿಕಾರಿಗಳಾದ ಪ್ರಣಬ್ ಮೊಹಂತಿ, ಪ್ರಸಾದ್ ಇವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಗಣಪತಿ ಅವರ ಹೇಳಿಕೆಯನ್ನು ಆಧರಿಸಿ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಂಚಾಯಿತಿ ಉಪಾಧ್ಯಕ್ಷ ಸುಂದರ, ಮುಖಂಡರಾದ ಕುಮಾರ್ ಚಿದ್ಕಾರ್, ಶ್ರೀಧರ, ಜಗದೀಶ ಪಿ.ಸಿ, ಮಾದವ ಪೊಯ್ಯಮಜಲು, ನಡುಬೆಟ್ಟು ಕೃಷ್ಣಪ್ಪ, ಶ್ರೀಧರ ಪಡ್ಪು, ರಾಜೇಶ್ ಬಿ.ಎನ್, ಜಯರಾಜ್, ರಮೇಶ್, ಹೊನ್ನಪ್ಪ, ಪೆರುಮಾಳ್, ರೋಹಿತ್ ಕೆ, ಸುಂದರ ಕಲ್ಲುಗದ್ದೆ, ವಿಜಯಕುಮಾರ್, ದಾಮೋದರ ಮತ್ತಿತರರು ಉಪಸ್ಥಿತರಿದ್ದರು.

ಆಲೂರುಸಿದ್ದಾಪುರ

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರಸಂತೆ ಪಟ್ಟಣದಲ್ಲಿಯೂ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಶನಿವಾರಸಂತೆ ಹೋಬಳಿ ಬಿಜೆಪಿ ಘಟಕ, ಜೆಡಿಎಸ್ ಘಟಕ, ಹಿಂದೂಪರ ಸಂಘಟನೆಗಳು, ರಕ್ಷಣಾ ವೇದಿಕೆ ಘಟಕ, ಮಹಿಳಾ ಸಂಘಟನೆ ಮುಂತಾದ ಸಂಘ-ಸಂಸ್ಥೆಗಳು ಪಕ್ಷಾತೀತವಾಗಿ ಕರೆದಿದ್ದ ಶನಿವಾರಸಂತೆ ಪಟ್ಟಣ ಬಂದ್ ಯಶಸ್ವಿಯಾಗಿದೆ. ಶನಿವಾರಸಂತೆ ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ವರ್ತಕರು ಅಂಗಡಿ- ಮುಂಗಟ್ಟುಗಳ ಬಾಗಿಲುಗಳನ್ನು ತೆರೆಯದೆ ಬಂದ್‍ಗೆ ಸಹಕರಿಸಿದರು. ಸರಕಾರಿ-ಖಾಸಗಿ ಬಸ್ಸುಗಳ ಓಡಾಟ ಸ್ಥಗಿತಗೊಂಡಿತ್ತು. ಪಟ್ಟಣದಲ್ಲಿ ರಿಕ್ಷಾ, ವ್ಯಾನ್, ಟ್ಯಾಕ್ಸಿ ಮುಂತಾದ ವಾಹನಗಳ ಓಡಾಟವೂ ಸ್ಥಗಿತಗೊಂಡಿತ್ತು. ಹೊರ ಜಿಲ್ಲೆಯಿಂದ ಬಂದ ವಾಹನಗಳ ಓಡಾಟಕ್ಕೆ ಪ್ರತಿಭಟನಾಕಾರರು ಅವಕಾಶ ಮಾಡಿಕೊಟ್ಟರು. ಸರಕಾರಿ ಹಾಗೂ ಖಾಸಗಿ ಶಾಲಾ- ಕಾಲೇಜುಗಳನ್ನು ಮುಚ್ಚಲಾಯಿತು. ಶನಿವಾರಸಂತೆ ಕಂದಾಯ ಇಲಾಖೆಯ ಕಚೇರಿ, ಗ್ರಾ.ಪಂ.ಕಚೇರಿ ಸೇರಿದಂತೆ ಸರಕಾರಿ ಕಚೇರಿಗಳನ್ನು ಮುಚ್ಚಲಾಯಿತು.

ಬೆಳಗ್ಗೆ 10 ಗಂಟೆಯಿಂದ ಬಿಜೆಪಿ ಕಾರ್ಯಕರ್ತರು, ಹಿಂದೂಪರ ಸಂಘಟನೆ ಕಾರ್ಯಕರ್ತರು, ಕರವ�?