ಶ್ರೀಮಂಗಲ, ಜು. 2: ಕೊಡಗಿನ ಗಡಿಭಾಗ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಿ.ಎಸ್.ಎನ್.ಎಲ್. ಸ್ಥಿರ ಹಾಗೂ ಮೊಬೈಲ್ ದೂರವಾಣಿ ಸೇವೆ ದುರಾವಸ್ಥೆಯಲ್ಲಿದ್ದು ಈ ಬಗ್ಗೆ ಇಲಾಖಾಧಿಕಾರಿಗಳಿಗೆ ಗ್ರಾಮ ಪಂಚಾಯಿತಿಯಿಂದ ಹಲವಾರು ಬಾರಿ ಲಿಖಿತ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಈ ವ್ಯಾಪ್ತಿಯಲ್ಲಿ 30-40 ವರ್ಷಗಳ ಹಳೆಯದಾದ ವಿದ್ಯುತ್ ಮಾರ್ಗಗಳು ಶಿಥಿಲಾವಸ್ಥೆಯಲ್ಲಿದ್ದು, ಮಳೆಗಾಲದ ಮುನ್ನ ‘ಜಂಗಲ್ ಕಟ್ಟಿಂಗ್’ (ಅಡಚಣೆಯಾಗುವ ಮರಗಳ ತೆರವು)ಗಳನ್ನು ಮಾಡದೇ ವಿದ್ಯುತ್ ಮಾರ್ಗಗಳಿಗೆ ಮರಗಳು ಬಿದ್ದು ವಿದ್ಯುತ್ ಕಡಿತವಾಗಿದೆ.

ಈ ಹಿನ್ನೆಲೆಯಲ್ಲಿ ಗ್ರಾ.ಪಂ. ವ್ಯಾಪ್ತಿಯ ಬಿರುನಾಣಿ ಹಾಗೂ ಪರಕಟಕೇರಿ ದೂರವಾಣಿ ವಿನಿಮಯ ಕೇಂದ್ರಗಳಿಗೆ ಹಾಗೂ ಶ್ರೀಮಂಗಲ ವಿದ್ಯುತ್ ಕೇಂದ್ರಗಳಿಗೆ ಬೀಗ ಜಡಿಯುವದಾಗಿ ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ ಎಚ್ಚರಿಕೆ ನೀಡಿದ್ದಾರೆ.

ಗ್ರಾ.ಪಂ. ಕಚೆರಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಬಿರುನಾಣಿ ಹಾಗೂ ಪರಕಟಗೇರಿ ದೂರವಾಣಿ ಕೇಂದ್ರದಲ್ಲಿ ಒಟ್ಟು 800 ಸ್ಥಿರ ದೂರವಾಣಿ ಸಂಪರ್ಕದಲ್ಲಿ ಗ್ರಾಹಕರ ದೂರುಗಳಿಗೆ ಇಲಾಖೆ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ 700 ದೂರವಾಣಿಗಳನ್ನು ಹಿಂದಿರುಗಿಸಿ ದ್ದಾರೆ. ಮೊಬೈಲ್ ದೂರವಾಣಿ ಸೇವೆ ಸಹ ದುರಾವಸ್ಥೆಯಲ್ಲಿದ್ದು, ವಿದ್ಯುತ್ ಕಡಿತವಾದರೆ ಸಂಪರ್ಕ ಕಡಿತ ವಾಗುತ್ತದೆ. ಜನರೇಟರ್‍ಗಳಿಗೆ ಇಲಾಖೆ ಡೀಸೆಲ್ ನೀಡುತ್ತಿದ್ದರೂ ವಿದ್ಯುತ್ ಕಡಿತವಾದಾಗ ಜನರೇಟರ್ ಬಳಸುತ್ತಿಲ್ಲ. ಡೀಸೆಲ್‍ಗೆ ಬರುವ ಹಣ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾ ಕೇಂದ್ರದಿಂದ 100 ಕಿ.ಮೀ. ದೂರದಲ್ಲಿರುವ ಬಿರುನಾಣಿ ವೀರಾಜಪೇಟೆ ತಾಲೂಕಿನಲ್ಲಿ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಇಲ್ಲಿನ ಸಮಸ್ಯೆಗೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಗ್ರಾ.ಪಂ. ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ವಿದ್ಯುತ್ ಮಾರ್ಗದ ಜೋತು ಬಿದ್ದ ತಂತಿಗಳ ನಡುವೆ ಕಂಬ ಅಳವಡಿಸಲು ಗುಂಡಿ ತೆಗೆದಿದ್ದರೂ ನಿಗದಿತ ಆಳದಲ್ಲಿ ತೆಗೆದಿಲ್ಲ. ಕಳೆದ ನವೆಂಬರ್ ತಿಂಗಳಲ್ಲಿ ಗುಂಡಿ ತೆಗದಿದ್ದರೂ ಇನ್ನೂ ಕಂಬ ಅಳವಡಿಸಿಲ್ಲ. 3-4 ದಶಕ ಹಳೆಯದಾದ ಮುಖ್ಯ ವಿದ್ಯುತ್ ಮಾರ್ಗ ಶಿಥಿಲಗೊಂಡಿದೆ. ಪಟ್ಟಣ ಭಾಗಗಳಿಗೆ ಇಲಾಖೆ ಹೆಚ್ಚಿನ ಒತ್ತು ನೀಡುವ ಬದಲು ಬಿರುನಾಣಿಯಂತಹ ಗ್ರಾಮೀಣ ಭಾಗಕ್ಕೆ ಎಕ್ಸ್‍ಪ್ರೆಸ್ ವಿದ್ಯುತ್ ಮಾರ್ಗ ಅಳವಡಿಸಲು ಮುಂದಾಗ ಬೇಕೆಂದು ತಂಬಿ ನಾಣಯ್ಯ ಆಗ್ರಹಿಸಿದರು.

ಪ್ರತಿ ವರ್ಷ ಮಳೆಗಾಲ ಮುನ್ನ ವಿದ್ಯುತ್ ಮಾರ್ಗಕ್ಕೆ ಅಡಚಣೆ ತರುವ ಮರ-ಮರದ ರೆಂಬೆಗಳನ್ನು ತೆರವು ಮಾಡಬೇಕು. ಆದರೆ ಈ ವರ್ಷ ಸೇರಿದಂತೆ ಹಲವು ವರ್ಷಗಳಿಂದ ಇಲಾಖೆ ವತಿಯಿಂದ ಈ ಕೆಲಸ ಆಗಿಲ್ಲ. ಇದರಿಂದ ವಿದ್ಯುತ್ ಮಾರ್ಗದಲ್ಲಿ ಮಳೆ-ಗಾಳಿಗೆ ಮಾರ್ಗದ ಮೇಲೆ ಮರ ಬಿದ್ದು, ಸಂಪರ್ಕ ಕಡಿತವಾಗಿದೆ, ಕಳೆದ ಒಂದು ವಾರದಿಂದ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಬಿರುನಾಣಿ ಹಾಗೂ ದಕ್ಷಿಣ ಕೊಡಗಿನ ಭಾಗಗಳಲ್ಲಿ ಕಾರ್ಮಿಕರನ್ನು ಸಾಗಿಸುವ ಜೀಪುಗಳು ಹಾಗೂ ಪ್ರವಾಸಿಗರ ವಾಹನಗಳು ಸೇರಿದಂತೆ ಹೊರ ರಾಜ್ಯದ ವಾಹನಗಳು ಅತೀ ವೇಗದಿಂದ ಸಂಚರಿಸುತ್ತಿದ್ದು, ಇದರಿಂದ ಅಪಘಾತಗಳು ಸಂಭವಿಸುತ್ತಿದೆ. ಇವುಗಳ ವೇಗದ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಬಿರುನಾಣಿಯ ಮರೆನಾಡು ಕೊಡವ ಸಮಾಜದ ಅಧ್ಯಕ್ಷ ಕರ್ತಮಾಡ ಗಣಪತಿ, ಪ್ರಮುಖರಾದ ಕಾಳಿಮಾಡ ವಾಸು, ಮಲ್ಲೇಂಗಡ ತಮ್ಮಯ್ಯ ಹಾಜರಿದ್ದರು.