ಮಡಿಕೇರಿ, ಮೇ 28: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪೊಲೀಸ್ ಮಹಾ ಸಂಘ ಜೂ. 4ರಂದು ಕರೆ ನೀಡಿರುವ ಪ್ರತಿಭಟನೆಗೆ ಕೈಜೋಡಿಸುವ ನಿಟ್ಟಿನಲ್ಲಿ ಕೊಡಗಿನಲ್ಲೂ ಪೊಲೀಸರು ಸಾಮೂಹಿಕ ರಜೆ ಮಾಡಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲು ಮುಂದಾಗಿದ್ದಾರೆ.

ವಾರಕ್ಕೊಂದು ರಜೆ ನೀಡಬೇಕು. ಕೆಲಸಕ್ಕೆ ತಕ್ಕ ವೇತನ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆ ಮುಂದಿಟ್ಟು ಕರ್ನಾಟಕ ಪೊಲೀಸ್ ಮಹಾ ಸಂಘ ಜೂ. 4ರಂದು ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದೆ. ಅದರಂತೆ ಕೊಡಗಿನಲ್ಲಿಯೂ ಪೊಲೀಸರು ಆ ದಿನ ಸಾಮೂಹಿಕ ರಜೆ ಹಾಕಿ ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲು ನಿರ್ಧಾ ಕೈಗೊಂಡಿರುವದಾಗಿ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಈಗಾಗಲೇ ವೀರಾಜಪೇಟೆ ಗ್ರಾಮಾಂತರ ಠಾಣೆ, ಸಿದ್ದಾಪುರ ಠಾಣೆ, ಮಡಿಕೇರಿ ಗ್ರಾಮಾಂತರ ಠಾಣೆ, ಸುಂಟಿಕೊಪ್ಪ, ಕುಶಾಲನಗರ ಗ್ರಾಮಾಂತರ ಠಾಣೆ, ಗೋಣಿಕೊಪ್ಪ ಠಾಣೆಗಳ ಪೊಲೀಸರು ಜೂ. 4ರಂದು ಸಾಮೂಹಿಕ ರಜೆಗೆ ಅನುಮತಿ ಕೋರಿ ಆಯಾ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಇನ್ನೂ ಹಲವಾರು ಠಾಣೆಗಳಲ್ಲಿ ಈ ಪ್ರಕ್ರಿಯೆ ನಡೆದಿದೆ. ಮನವಿ ಸಲ್ಲಿಸುವದರ ಜೊತೆಗೆ ಪೊಲೀಸರು ಪ್ರತಿಭಟನೆಗೆ ವಿವಿಧ ಸಂಘ ಸಂಸ್ಥೆಗಳ ಸಹಕಾರವನ್ನು ಕೋರಿದ್ದಾರೆ.

ಪೊಲೀಸರು ಅಧಿಕಾರಿಗಳಿಗೆ ಸಲ್ಲಿಸಿರುವ ಮನವಿಯ ಸಾರಾಂಶ ಇಂತಿದೆ.

ನೂರಾರು ಸಮಸ್ಯೆಗಳಿದ್ದು, ಅವುಗಳಲ್ಲಿ ಮುಖ್ಯವಾದವು ವೇತನ ತಾರತಮ್ಯ ಮತ್ತು ಕೆಲಸದ ಒತ್ತಡ. ನಮ್ಮ ರಾಜ್ಯದಲ್ಲಿ ಬಹುತೇಕ ಇಲಾಖೆಗಳಿಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಮಾತ್ರ ಕೆಲಸದ ಅವಧಿ. ಆದರೆ ಪೊಲೀಸರಿಗೆ ಪ್ರತಿದಿನ 12 ರಿಂದ 18 ಗಂಟೆಗಳವರೆಗೆ ಹಗಲು - ರಾತ್ರಿ ಎನ್ನದೇ ಎಲ್ಲಾ ಕರ್ತವ್ಯಗಳನ್ನು ನಿರ್ವಹಿಸಬೇಕು. ಅಲ್ಲದೇ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಯವರು ಕೇವಲ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪಾಸಾಗಿ ಕರ್ತವ್ಯಕ್ಕೆ ಸೇರಿದ್ದು, ಅವರು ಸಾಫ್ಟ್‍ವೇರ್ - ಹಾರ್ಡ್‍ವೇರ್ ಇಂಜಿನಿಯರ್ಸ್ ಮಾಡುವ ಎಲ್ಲಾ ಕಂಪ್ಯೂಟರ್ ಕರ್ತವ್ಯಗಳನ್ನು ಪ್ರತಿ ಠಾಣೆಯಲ್ಲೂ ಮಾಡುತ್ತಾರೆ ಹಾಗೂ ಎಲ್.ಎಲ್.ಬಿ. ಓದದಿದ್ದರೂ ಸಹ ಠಾಣೆಯಲ್ಲಿರುವ ಎಲ್ಲಾ ಕಾಯಿದೆ - ಕಲಂಗಳ ಬಗ್ಗೆ ಜಾಣತನವನ್ನು ಹೊಂದಿದ್ದಾರೆ. ಆದರೂ ಪೊಲೀಸರಿಗೆ ಇತರೆ ಇಲಾಖೆಗಳಿಗಿಂತ ಕಡಿಮೆ ಸಂಬಳ ಸಿಗುತ್ತದೆ. ನಮ್ಮ ರಾಜ್ಯದಲ್ಲಿ ಬೇರೆ ಇಲಾಖೆಗಳು ತಮ್ಮ ಬೇಡಿಕೆಗಳಿಗಾಗಿ, ಸೌಲಭ್ಯಗಳಿಗಾಗಿ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ ಪೊಲೀಸರಿಗೆ ಎಷ್ಟೆ ತೊಂದರೆಗಳು ಎದುರಾದರೂ ಪ್ರತಿಭಟನೆ ಹಕ್ಕಿಲ್ಲ ಎಂದು ಪ್ರತಿಯೊಬ್ಬ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಮನದಲ್ಲಿ ನೋವಿದೆ. ಮನಸ್ಸಿನಲ್ಲಿಯೆ ಚುಚ್ಚುತ್ತಿರುತ್ತದೆ. ಆದರೆ ಅನಿವಾರ್ಯ ಹೋರಾಟ ಮಾಡುವ ಹಾಗಿಲ್ಲ. ಯಾರಿಗೂ ಏನು ಕೇಳುವಂತಿಲ್ಲ. ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘದ ವತಿಯಿಂದ ದಿನಾಂಕ 04.06.2016ರಂದು ಪೊಲೀಸ್ ಇಲಾಖೆಯಲ್ಲಿ ವೇತನ ತಾರತಮ್ಯವನ್ನು ಸರಿಪಡಿಸುವಂತೆ ಮತ್ತು ವಿಶೇಷ ವೇತನ ಆಯೋಗ ರಚನೆ ಮಾಡುವಂತೆ ಹಾಗೂ ಪೊಲೀಸ್ ಇಲಾಖೆಯನ್ನು ನವೀಕರಿಸುವಂತೆ ಒತ್ತಾಯಿಸಿ ಒಂದು ದಿನ ಕರ್ನಾಟಕ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಯ ಎಲ್ಲಾ ಹುದ್ದೆಯ ಅಧಿಕಾರಿಗಳು, ಸಿಬ್ಬಂದಿಯವರು ಸ್ವಇಚ್ಛೆಯಿಂದ ಕರ್ತವ್ಯಕ್ಕೆ ಹಾಜರಾಗದೇ ಸಾಂಕೇತಿಕವಾಗಿ ಮುಷ್ಕರವನ್ನು ಹಮ್ಮಿಕೊಂಡಿದ್ದನ್ನು ನಾವು ನಮ್ಮ ಠಾಣೆಯಿಂದ ಬೆಂಬಲಿಸುತ್ತೇವೆ. ಆದ್ದರಿಂದ ನಮಗೆ ಜೂ. 4ರಂದು ಒಂದು ದಿನ ಸಾಂಧರ್ಬಿಕ ರಜೆಯನ್ನು ಮಂಜೂರು ಮಾಡಿ ನಮಗೆ ಸಹಕರಿಸಲು ಮನವಿಯಲ್ಲಿ ಪೊಲೀಸರು ಕೋರಿದ್ದಾರೆ. ಪೊಲೀಸರ ಈ ಪ್ರತಿಭಟನೆಗೆ ಜಯಕರ್ನಾಟಕ ಕೊಡಗು ಜಿಲ್ಲಾಧ್ಯಕ್ಷ ರಾಬಿನ್ ಕುಟ್ಟಪ್ಪ, ಮಡಿಕೇರಿ ದೇಶಪ್ರೇಮಿ ಯುವಕ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ ಬೆಂಬಲ ವ್ಯಕ್ತಪಡಿಸಿದ್ದಾರೆ.