ಪೊನ್ನಂಪೇಟೆ, ಆ. 27: ಕೊಡವ ಮುಸ್ಲಿಂರ ಪ್ರಾತಿನಿಧಿಕ ಸಂಘಟನೆ ಯಾದ ಕೊಡವ ಮುಸ್ಲಿಂ ಅಸೋಸಿಯೇಷನ್‍ನನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಸಂಘಟಿಸುವ ಹಿನ್ನೆಲೆ ಈಗಾಗಲೇ ಆರಂಭಿಸಿರುವ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಮತ್ತಷ್ಟು ವೇಗ ಹೆಚ್ಚಿಸಿ, ಜಾರಿಗೊಳಿಸಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಂತೆ ನಿರ್ಧರಿಸಲಾಗಿದೆ.

ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಅವರ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಂಸ್ಥೆಯ ಸ್ಥಾಪಕಾಧ್ಯಕ್ಷ ಕುವೇಂಡ ವೈ. ಹಂಝತುಲ್ಲಾ ಅವರ ಸಲಹೆಯಂತೆ ಸದಸ್ಯತ್ವ ಅಭಿಯಾನವನ್ನು ಹೆಚ್ಚು ಸಂಘಟಿತವಾಗಿ ಕಾರ್ಯಗತ ಗೊಳಿಸಲು ಜಿಲ್ಲಾದ್ಯಂತ ಪ್ರವಾಸ ಕೈಗೊಳ್ಳುವಂತೆಯೂ ನಿರ್ಧರಿಸಲಾ ಯಿತ್ತಲ್ಲದೆ, ಇದಕ್ಕಾಗಿ ಸಂಸ್ಥೆಯ ಅಧ್ಯಕ್ಷ ಡಿ.ಹೆಚ್. ಸೂಫಿ ಅವರ ಮಾರ್ಗದರ್ಶ ನದಲ್ಲಿ ನಿರ್ದೇಶಕ ಚಿಮ್ಮಿಚ್ಚೀರ ಕೆ. ಇಬ್ರಾಹಿಂ ನೇತೃತ್ವದ ಉಪ ಸಮಿತಿ ಯೊಂದನ್ನು ಸಭೆಯಲ್ಲಿ ರಚಿಸಲಾಯಿತು. ಸಂಸ್ಥೆಯ ಪದಾಧಿಕಾರಿಗಳಾದ ನಿವೃತ್ತ ಉಪತಹಶೀಲ್ದಾರ್ ಚಿಮ್ಮಿಚ್ಚಿರ ಎ. ಅಬ್ದುಲ್ಲ, ತಾ.ಪಂ. ಮಾಜಿ ಸದಸ್ಯ ಗುಂಡಿಗೆರೆಯ ಕುವೇಂಡ ವೈ. ಆಲಿ, ಕಾರ್ಯದರ್ಶಿಗಳಾದ ಪುದಿಯತಂಡ ಹೆಚ್. ಸಂಶುದ್ದೀನ್, ಜಂಟಿ ಕಾರ್ಯದರ್ಶಿ ಮಂಡೇಂಡ ಎ. ಮೊಯ್ದು ಮತ್ತು ಈತಲತಂಡ ರಫೀಕ್ ತೂಚಮಕೇರಿ ಅವರನ್ನು ಉಪಸಮಿತಿಯ ಸದಸ್ಯರುಗಳಾಗಿ ನೇಮಕಗೊಳಿಸಲಾಯಿತು. ಸಂಸ್ಥೆಯ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಜನಾಂಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡುವ ಕಾರ್ಯಕ್ರಮಗಳಿಗೆ ಮೊದಲ ಆದ್ಯತೆ ನೀಡುವಂತೆ ತೀರ್ಮಾನಿ ಸಲಾಯಿತು. ಕೇಂದ್ರ ಮತ್ತು ರಾಜ್ಯ ಸರಕಾರ ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಿರುವ ಹಲವಾರು ಶೈಕ್ಷಣಿಕ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಂತೆಯೂ ವಿವಿಧ ವಿದ್ಯಾರ್ಥಿ ವೇತನ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಸಂಸ್ಥೆಯ ಪ್ರಧಾನ ಕಚೇರಿಯನ್ನು ಬಳಸಿಕೊಳ್ಳಲು ಅಗತ್ಯವಿರುವ ತಂತ್ರಜ್ಞಾನದ ಸೌಲಭ್ಯವನ್ನು ವ್ಯವಸ್ಥೆಗೊಳಿಸುವಂತೆಯೂ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಹಿರಿಯ ನಿರ್ದೇಶಕ ನಿವೃತ್ತ ಉಪತಹಶೀಲ್ದಾರ್ ವೀರಾಜಪೇಟೆಯ ಚಿಮ್ಮಿಚ್ಚಿರ ಎ. ಅಬ್ದುಲ್ಲ, ನಿರ್ದೇಶಕರಾದ ತಾ.ಪಂ. ಮಾಜಿ ಸದಸ್ಯ ಗುಂಡಿಗೆರೆಯ ಕುವೇಂಡ ವೈ. ಆಲಿ, ಹಳ್ಳಿಗಟ್ಟಿನ ಚಿಮ್ಮಿಚ್ಚಿರ ಕೆ. ಇಬ್ರಾಹಿಂ, ಐಮಂಗಲದ ಪೊಯಕೆರ ಎಸ್. ರಫೀಕ್, ಕೋಕೇರಿಯ ಕಿಕ್ಕರೆರ ಮೊಹಮ್ಮದ್, ಈತಲತಂಡ ರಫೀಕ್ ತೂಚಮಕೇರಿ, ಜಂಟಿ ಕಾರ್ಯದರ್ಶಿ ಮಂಡೇಂಡ ಎ. ಮೊಯ್ದು ಹಾಜರಿದ್ದರು. ಕಾರ್ಯದರ್ಶಿ ಪುದಿಯತಂಡ ಹೆಚ್. ಷಂಶುದ್ದೀನ್ ಸ್ವಾಗತಿಸಿ, ವಂದಿಸಿದರು.