ಕುಶಾಲನಗರ, ಮೇ 22: ಬೇಸಿಗೆ ಶಿಬಿರಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಮಕ್ಕಳ ಪೂರಕ ಬೆಳವಣಿಗೆಗೆ ಸಂಘ-ಸಂಸ್ಥೆಗಳು ಮುಂದಾಗಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಾರುಲತ ಸೋಮಲ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಸಂಯುಕ್ತ ಆಶ್ರಯದಲ್ಲಿ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಜೇನು ಕುರುಬರ ಮಕ್ಕಳ ಚಿಣ್ಣರ ಮೇಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಬಿ.ಸಿ. ಶಿವಪ್ಪ ಮಾತನಾಡಿ, ಪ್ರತಿಭಾನ್ವಿತ ಜೇನು ಕುರುಬರ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಬೇಸಿಗೆ ಶಿಬಿರ ಸಹಕಾರಿಯಾಗಿದೆ.

ಶಿಬಿರದಲ್ಲಿ ಮಕ್ಕಳು ತಮ್ಮಲ್ಲಿರುವ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ಪ್ರತಿಭೆಗಳನ್ನು ಅನಾವರಣ ಗೊಳಿಸಿದ್ದಾರೆ ಎಂದರು.

ಶಿಬಿರದಲ್ಲಿ 12 ಪರಿಶಿಷ್ಟ ಪಂಗಡಗಳ ಆಶ್ರಮ ಶಾಲೆಯ 103 ವಿದ್ಯಾರ್ಥಿಗಳು ಪಾಲ್ಗೊಂಡು ವರ್ಲಿ ಚಿತ್ರ, ಮುಖವಾಡ, ಗೊಂಬೆ, ಚಿತ್ರಕಲೆ, ಗ್ಲಾಸ್ ಪೈಂಟಿಂಗ್, ಪೇಪರ್ ಕಟಿಂಗ್ಸ್, ಕೊಬ್ಬರಿ ಕಲೆ, ಗೂಡು ದೀಪ, ಮಣ್ಣಿನ ದೀಪ ಸೇರಿದಂತೆ ಇತರ ಮಾದರಿಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿತ್ತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಂಸಾಳೆ, ರಂಗಗೀತೆ, ಪವಾಡ ಬಯಲು ನಾಟಕಗಳನ್ನು ಪ್ರದರ್ಶಿ ಸಿದರು. ತಾಲೂಕು ಪಂಚಾಯಿತಿ ಸದಸ್ಯೆ ಪುಷ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೂಲನಿವಾಸಿ ಜನಾಂಗದ ಯೋಜನೆಯ ಸದಸ್ಯರಾದ ಜೆ.ಪಿ. ರಾಜು, ಜೆ.ಕೆ. ರಾಮು, ಇಂದ್ರಮ್ಮ, ಸೋಮಯ್ಯ, ಕಾರ್ಯಕ್ರಮ ನಿರ್ದೇಶಕ ಜೀವನ್ ರಾಂ ಸುಳ್ಯ, ಪೊನ್ನಂಪೇಟೆ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಚಂದ್ರಶೇಖರ್ ಇದ್ದರು.