ಭಾಗಮಂಡಲ, ಅ. 25: ಕಾವೇರಿ ನದಿ ನೀರಿನ ಸಮಸ್ಯೆಗೆ ಕಾವೇರಿ ಮಾತೆಯ ಅನುಗ್ರಹ ಮೂಲಕ ಮಾತ್ರ ಶಾಶ್ವತ ಪರಿಹಾರ ದೊರಕಿಸಲು ಸಾಧ್ಯ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನದ ತಮಿಳುನಾಡು ಪ್ರಾಂತ್ಯದ ಪ್ರಮುಖರು ಹಾಗೂ ಅಖಿಲ ಭಾರತ ಸಾಧುಸಂತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ರಮಾನಂದ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಕಾವೇರಿ ಜಾಗೃತಿ ತೀರ್ಥಯಾತ್ರೆಯ 6ನೇ ವರ್ಷದ ಯಾತ್ರೆ ಅಂಗವಾಗಿ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜೀವನದಿ ಕಾವೇರಿ ಇತ್ತೀಚಿನ ದಿನಗಳಲ್ಲಿ ಮೂಲಸ್ಥಾನದಿಂದಲೇ ಸೊರಗುತ್ತಿರುವದು ನಿಜಕ್ಕೂ ಆತಂಕದ ವಿಷಯ. ರಾಜ್ಯಗಳ ನಡುವೆ ಜಲವ್ಯಾಜ್ಯಗಳು ತಲೆದೋರಿದ್ದು, ಜಲ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಚಿಂತನೆ ಹರಿಸಬೇಕಾಗಿದೆ ಎಂದರು.

ತಲಕಾವೇರಿ ವ್ಯಾಪ್ತಿಯಲ್ಲಿ ಪರಿಸರದ ಸಂರಕ್ಷಣೆ ಮಾಡುವಲ್ಲಿ ಪ್ರತಿಯೊಬ್ಬರೂ ವಿಫಲರಾಗುತ್ತಿದ್ದಾರೆ ಎಂದ ಸ್ವಾಮೀಜಿ, ಇದೇ ಪರಿಸ್ಥಿತಿ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಜನತೆ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಪರಿಸರ ಸಂರಕ್ಷಣೆಯ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಕೊಡಗು ಜಿಲ್ಲೆಗೆ ವಿಶೇಷ ಯೋಜನೆ ರೂಪಿಸುವ ಮೂಲಕ ಕಾವೇರಿ ನದಿಯ ಸಂರಕ್ಷಣೆ ಹಾಗೂ ನದಿ ತಟದ ಜನರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ರೂಪಿಸುವಲ್ಲಿ ಸರಕಾರಗಳು ಮುಂದಾಗಬೇಕಾಗಿದೆ ಎಂದು ಆಗ್ರಹಿಸಿದರು.

ಕಳೆದ 6 ವರ್ಷಗಳಿಂದ ಅಖಿಲ ಭಾರತ ಸಾಧುಸಂತರ ಸಂಘದ ಪದಾಧಿಕಾರಿಗಳು ನದಿ ಸಂರಕ್ಷಣೆಯ ನಿಟ್ಟಿನಲ್ಲಿ ಜಾಗೃತಿ ತೀರ್ಥಯಾತ್ರೆ ಹಮ್ಮಿಕೊಳ್ಳುವ ಮೂಲಕ ತಲಕಾವೇರಿ ಕ್ಷೇತ್ರದಿಂದ ತಮಿಳುನಾಡಿನ ಪೂಂಪ್‍ಹಾರ್ ತನಕ ಯಾತ್ರೆ ತೆರಳಿ ಜನರಲ್ಲಿ ನದಿ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರ ಮೋಹನ್ ತಿಳಿಸಿದರು. ಮುಂದಿನ 20 ದಿನಗಳ ಕಾಲ ಎರಡು ರಾಜ್ಯಗಳ ನದಿ ತಟದಲ್ಲಿ ತೆರಳುವ ತಂಡದ ಸದಸ್ಯರು ಸಭೆ ಸಮಾರಂಭಗಳ ಮೂಲಕ ಜನರಿಗೆ ನದಿಯ ಮಹತ್ವದ ಅರಿವು ಮೂಡಿಸಲಿದ್ದಾರೆ. ನವೆಂಬರ್ 13 ರಂದು ಕಾವೇರಿ ನದಿ ಬಂಗಾಳಕೊಲ್ಲಿ ಸಮುದ್ರ ಸೇರುವ ಸ್ಥಳವಾದ ಪೂಂಪ್‍ಹಾರ್‍ನಲ್ಲಿ ಸಮಾರೋಪ ಗೊಳ್ಳಲಿದೆ ಎಂದು ತಿಳಿಸಿದರು.

ತಮಿಳುನಾಡಿನ 20 ಕ್ಕೂ ಅಧಿಕ ಸಾಧು ಸಂತರು ಹಾಗೂ ಕಾರ್ಯ ಕರ್ತರು ತೀರ್ಥಯಾತ್ರೆ ತಂಡದಲ್ಲಿ ಪಾಲ್ಗೊಂಡಿದ್ದು, ತಲಕಾವೇರಿ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸುವದರೊಂದಿಗೆ ಯಾತ್ರೆಗೆ ಚಾಲನೆ ನೀಡಲಾಯಿತು. ನಂತರ ಭಾಗಮಂಡಲ ಸಂಗಮ ಕ್ಷೇತ್ರ ಮತ್ತು ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಕಾವೇರಿ ನದಿಗೆ ಮಹಾ ಆರತಿ ಬೆಳಗಲಾಯಿತು. ಕುಶಾಲನಗರ ಮೂಲಕ ತೆರಳಿದ ಜಾಗೃತಿ ತೀರ್ಥಯಾತ್ರೆ ತಂಡ ಶ್ರೀರಂಗಪಟ್ಟಣ ಮೂಲಕ ಹೊಗೇನಕಲ್ ಕಡೆಗೆ ತೆರಳಿತು. ಯಾತ್ರೆಯಲ್ಲಿ ಅಖಿಲ ಭಾರತ ಸಾಧುಸಂತರ ತಂಡದ ಪ್ರಮುಖರಾದ ಯುಕ್ತೇಶ್ವರಾನಂದಪುರಿ ಸ್ವಾಮೀಜಿ, ಅಭಯಾನಂದಪುರಿ ಸ್ವಾಮೀಜಿ, ವೇದಾಂತ ಸರಸ್ವತಿ ಸ್ವಾಮೀಜಿ, ವಿದ್ಯಾಂಬ ಸರಸ್ವತಿ ಸ್ವಾಮೀಜಿ, ಮಾತಾಜಿ ಮಹಜಲೇಶ್ವರಿ, ಮಾತಾಜಿ ಅಪರೋಕ್ಷಾನಂದ ಸರಸ್ವತಿ, ನಾಗೇಶ್ವರಾನಂದ ಸ್ವಾಮೀಜಿ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ತಮಿಳುನಾಡು ಪ್ರಾಂತ್ಯದ ಸಂಚಾಲಕ ವಾಸು ರಾಮಚಂದ್ರನ್, ಪ್ರಮುಖರಾದ ಡಿ.ಆರ್. ಸೋಮಶೇಖರ್, ಕೆ.ಆರ್. ಶಿವಾನಂದನ್, ಜಗದೀಶ್, ಲತೀಶ್, ವಿ.ಆರ್. ಶಿವಶಂಕರ್ ಮತ್ತಿತರರು ಇದ್ದರು.