ಮಡಿಕೇರಿ, ಆ. 22: ಫಲವತ್ತಾದ ಭೂಮಿಯಲ್ಲಿ ಬೆವರು ಸುರಿಸಿ ದುಡಿದು ದೇಶದ ಜನತೆಗೆ ಅನ್ನವನ್ನು ನೀಡುತ್ತಿರುವ ಅನ್ನದಾತ ರೈತನ ಕಷ್ಟಸುಖಗಳನ್ನು ಯುವ ಸಮೂಹಕ್ಕೆ ಪರಿಚಯಿಸುವ ಉದ್ದೇಶದಿಂದ ತಾ. 30 ರಂದು ‘ಮುಂಗಾರು ಸಂಪದ’ (ಸಾಹಿತ್ಯ ಲೋಕಕ್ಕೆ ಅನ್ನದಾತನ ಕೊಡುಗೆ) ಕಾರ್ಯಕ್ರಮವನ್ನು ಆಯೋಜಿಸಿರುವದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಗಡಿಭಾಗವಾದ ಶಿರಂಗಾಲ ಗ್ರಾಮದಲ್ಲಿ ತಾ. 30 ರಂದು ವೈವಿಧ್ಯಮಯ ಕಾರ್ಯಕ್ರಮ ಗಳು ನಡೆಯಲಿವೆ ಎಂದರು. ಸಾಹಿತ್ಯ ಲೋಕಕ್ಕೆ ಅನ್ನದಾತನ ಕೊಡುಗೆ ಅಪಾರವಾಗಿದ್ದು, ಇವರ ಪರಿಶ್ರಮವು ಸಾಹಿತ್ಯ ರೂಪ ಪಡೆಯುವ ಅಗತ್ಯವಿದೆ. ಯುವ ಸಮೂಹಕ್ಕೆ ರೈತರ ಜೀವನವನ್ನು ಪರಿಚಯಿಸುವದು ಕಾರ್ಯಕ್ರಮದ ಉದ್ದೇಶವಾಗಿದ್ದು, ಯುವ ಬರಹಗಾರರಿಗೆ ರೈತರೊಂದಿಗೆ ನೇರ ಸಂವಾದ ನಡೆಸಲು ಕಾರ್ಯಕ್ರಮದಲ್ಲಿ ಅವಕಾಶವಿದೆ. ಕೃಷಿ ಚಟುವಟಿಕೆ, ಕೃಷಿ ಪರಿಕರಗಳ ಪರಿಚಯದೊಂದಿಗೆ ಕೃಷಿ ಸಂಶೋಧನೆಗೂ ಅವಕಾಶ ಕಲ್ಪಿಸುವದಾಗಿ ತಿಳಿಸಿದ ಲೋಕೇಶ್ ಸಾಗರ್, ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷಾ ಸಾಹಿತ್ಯ ಅಕಾಡೆಮಿಗಳ ತಂಡಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತವೆ ಎಂದರು.

ಬೆಳಗ್ಗೆ 9 ಗಂಟೆಗೆ ಶಾಸಕÀ ಎಂ.ಪಿ. ಅಪ್ಪಚ್ಚು ರಂಜನ್ ಅವರು, ಕಾರ್ಯಕ್ರಮವನ್ನು ಉದ್ಘಾಟಿಸಲಿ ದ್ದಾರೆ. ಸಮಾರೋಪ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಲ್ಲೂರು ಪ್ರಸಾದ್ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭ ಸಾಹಿತಿ ಶೋಭಾ ಸುಬ್ಬಯ್ಯ ಅವರ ‘ಢಮರು’ ಪುಸ್ತಕವನ್ನು ಬಿಡುಗಡೆ ಮಾಡಲಾಗುವದು. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕೆಂದು ಶಾಲಾ, ಕಾಲೆÉೀಜುಗಳಲ್ಲಿ ಅನುಮತಿ ಕೋರಿದ್ದು, ಈಗಾಗಲೆ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ ಎಂದು ಲೋಕೇಶ್ ಸಾಗರ್ ತಿಳಿಸಿದರು. ರೈತರಿಗಾಗಿ ಕ್ರೀಡಾ ಸ್ಪರ್ಧೆ, ಮಹಿಳೆಯರಿಗಾಗಿ ಅಳಗುಳಿ ಮಣೆ , ರಂಗೋಲಿ, ಹಗ್ಗಜಗ್ಗಾಟ, ಆನೆಕಲ್ಲು, ಬಳೆಚೂರು ಆಟ, ಪುರುಷರಿಗಾಗಿ ಹಗ್ಗ ಜಗ್ಗಾಟ, ಭಾರ ಹೊತ್ತು ಓಡುವದು, ಬಾಲಕಿಯರಿಗೆ ಕುಂಟು ಬಿಲ್ಲೆ , ಆನೆಕಲ್ಲು, ಬಾಲಕರಿಗೆ ಲಗೋರಿ, ಬುಗುರಿ, ಸೂರ್ ಚೆಂಡು, ಪೆಟ್ಲು ಹೊಡೆಯುವದು ಇತ್ಯಾದಿ ಗ್ರಾಮೀಣ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.

ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಉಳುವ ಹಾಡು, ರಾಗಿ ಬೀಸುವ ಹಾಡು, ನಾಟಿ ಹಾಡು, ಭತ್ತ ಕುಟ್ಟುವ ಹಾಡು, ರಂಗ ಗೀತೆ ಹಾಗೂ ಕೋಲಾಟ ನಡೆಯಲಿದೆಯೆಂದು ಲೋಕೆÉೀಶ್ ಸಾಗರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್, ವಿಶೇಷ ಆಹ್ವಾನಿತರಾದ ಕುಮಾರ್, ಮಾಧ್ಯಮ ಕಾರ್ಯದರ್ಶಿ ಅಶ್ವತ್ಥ್ ಮತ್ತು ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.