ಸೋಮವಾರಪೇಟೆ, ಜೂ. 14: ಕಲ್ಲುಕೋರೆಯಲ್ಲಿ ಸಂಭವಿಸಿದ ಸ್ಫೋೀಟಕ್ಕೆ ಬೆದರಿದ ಮಹಿಳೆಯೋರ್ವರು ಸುಮಾರು 40 ಅಡಿ ಎತ್ತರದಿಂದ ಕೆಳಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಯಲಕನೂರು ಹೊಸಳ್ಳಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಕುಶಾಲನಗರದ ರವಿ ಎಂಬವರಿಗೆ ಸೇರಿದ ಕಲ್ಲುಕೋರೆಯಲ್ಲಿ ಇಂದು ಮಧ್ಯಾಹ್ನ 12.30ರ ಸುಮಾರಿಗೆ ಕಾರ್ಮಿಕರು ಕುಳಿ ಒಡೆದು ಸ್ಫೋಟಕ ತುಂಬಿಸಿ ಬೆಂಕಿ ಹಚ್ಚಿದ್ದರು. ಈ ಸಂದರ್ಭ ಇದೇ ಮಾರ್ಗದಲ್ಲಿ ನೇರಳೆ ಗ್ರಾಮದ ಪೂವಯ್ಯ ಎಂಬವರ ಪತ್ನಿ ಹೇಮಾವತಿ (60) ಅವರು ತೆರಳುತ್ತಿದ್ದಂತೆ ಕಲ್ಲು ಸ್ಫೋಟಗೊಂಡಿದೆ. ದಿಢೀರನೇ ಉಂಟಾದ ಭಯಾನಕ ಶಬ್ಧಕ್ಕೆ ಬೆದರಿದ ಹೇಮಾವತಿ ಅವರು ಸುಮಾರು 40 ಅಡಿ ಎತ್ತರದಿಂದ ಕೆಳಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯರು ಕಲ್ಲುಕೋರೆಯ ಮಾಲೀಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಘಟನೆ ನಡೆದ ತಕ್ಷಣ ಕಾರ್ಮಿಕರು ಸ್ಥಳದಿಂದ ಪರಾರಿಯಾಗಿದ್ದು, ಸಾರ್ವಜನಿಕರ ಆಕ್ರೋಶ ಹೆಚ್ಚಲು ಕಾರಣವಾಯಿತು. ನಂತರ ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.

ಘಟನೆಯ ಬಗ್ಗೆ ಕಲ್ಲುಕೋರೆಯ ಮಾಲೀಕರೊಂದಿಗೆ ಮೊಬೈಲ್ ಮೂಲಕ ಮಾತುಕತೆ ನಡೆಸಿದ ಸ್ಥಳೀಯರು, ಮಾಲೀಕರು ಪರಿಹಾರವಾಗಿ ಮೃತೆ ಹೇಮಾವತಿ ಅವರ ಕುಟುಂಬಕ್ಕೆ 75 ಸಾವಿರ ಹಣ ನೀಡುವ ಭರವಸೆ ವ್ಯಕ್ತಪಡಿಸಿದ ಹಿನ್ನೆಲೆ ಮೃತದೇಹವನ್ನು ಸೋಮವಾರಪೇಟೆಯ ಶವಾಗಾರಕ್ಕೆ ಸಾಗಿಸಲಾಯಿತು.