ಮಡಿಕೇರಿ, ಸೆ. 9: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಇಂದು ಕರೆ ನೀಡಿರುವ ‘ಕರ್ನಾಟಕ ಬಂದ್’ಗೆ ಕೊಡಗು ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ರಾಜಕೀಯ ಪಕ್ಷಗಳು ಹಾಗೂ ಕೆಲವು ಸಂಘ-ಸಂಸ್ಥೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿದವು. ನಗರದಲ್ಲಿ ಜನ ವಿರಳವಾಗಿದ್ದರು. ಶನಿವಾರಸಂತೆ, ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಸಂಪೂರ್ಣ ಬಂದ್ ಆಗಿದ್ದರೆ, ಬಾಳೆಲೆ ಪಟ್ಟಣ ಹಾಗೂ ಆನೆ ಚೌಕೂರು ಗೇಟ್‍ನಲ್ಲಿ ಸ್ವಲ್ಪ ಕಾಲ ಬಂದ್ ಮಾಡಲಾಯಿತು.

ಜಿಲ್ಲೆಯ ಕೆಲವು ಪಟ್ಟಣ ಪ್ರದೇಶಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಪ್ರತಿಭಟನೆಗಳು ನಡೆದರೆ, ಶಾಲಾ-ಕಾಲೇಜುಗಳಿಗೆ ನಿನ್ನೆಯೇ ರಜೆ ಘೋಷಣೆ ಮಾಡಲಾಗಿತ್ತು. ಇದರ ಹೊರತಾಗಿ ಸರ್ಕಾರಿ ಕಚೇರಿಗಳು, ವಾಣಿಜ್ಯ ಬ್ಯಾಂಕುಗಳು, ಖಾಸಗಿ ಬಸ್‍ಗಳು, ಸಂತೆ ಮಾರುಕಟ್ಟೆ ಹಾಗೂ ಆಟೋಗಳ ಸಂಚಾರ ಎಂದಿನಂತಿತ್ತು. ಹೊರ ಜಿಲ್ಲೆಯಲ್ಲಿ ವ್ಯಾಪಕ ಬಂದ್ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರವನ್ನು ಬೆಳಿಗ್ಗೆ ಯಿಂದಲೇ ಸ್ಥಗಿತಗೊಳಿಸಲಾಗಿತ್ತು.

ಪ್ರತಿಭಟನಾ ಮೆರವಣಿಗೆ

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ಜೆಡಿಎಸ್ ಪಕ್ಷಗಳಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಸುಪ್ರಿಂ ಕೋರ್ಟ್‍ನ

(ಮೊದಲ ಪುಟದಿಂದ) ತೀರ್ಪನ್ನು ಪುನರ್ ವಿಮರ್ಶಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿಯಲ್ಲಿ ಸಭೆ ಸೇರಿ ಬಳಿಕ ಜಿಲ್ಲಾಡಳಿತ ಭವನಕ್ಕೆ ಮೆರವಣಿಗೆ ತೆರಳಿ ಮನವಿ ಸಲ್ಲಿಸಿದರು.

ಈ ಸಂದರ್ಭ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್‍ಕುಮಾರ್, ಬಾಲಚಂದ್ರ ಕಳಗಿ, ಮಡಿಕೇರಿ ತಾಲೂಕು ಅಧ್ಯಕ್ಷ ಟಿ.ಎ. ಕಿಶೋರ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ರವಿಬಸಪ್ಪ, ಡೀನ್ ಬೋಪಣ್ಣ, ತಾ.ಪಂ. ಅಧ್ಯಕ್ಷೆ ತೆಕ್ಕೆಡೆ ಶೋಭಾ, ಉಪಾಧ್ಯಕ್ಷ ಸಂತು ಸುಬ್ರಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಜಿಲ್ಲಾ ಬಜೆಪಿ ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ, ಕೆ. ನಿಡುಗಣೆ ಗ್ರಾ.ಪಂ. ಅಧ್ಯಕ್ಷೆ ರೀಟಾ ಮುತ್ತಣ್ಣ ಹಾಗೂ ಇನ್ನಿತರರು ಇದ್ದರು.

ಜೆಡಿಎಸ್ ಪಕ್ಷದ ವತಿಯಿಂದ ಗಾಂಧಿ ಮೈದಾನದಿಂದ ಖಾಸಗಿ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ತೆರಳಿ ಬಳಿಕ ಜ. ತಿಮ್ಮಯ್ಯ ವೃತ್ತದಲ್ಲಿ 5 ನಿಮಿಷಗಳ ಕಾಲ ಮಾನವ ಸರಪಳಿ ರಚಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಕೊಡಗು ಜಿಲ್ಲಾ ಆಟೋ ಮಾಲೀಕರು ಮತ್ತು ಚಾಲಕರ ಸಂಘ, ಲಾರಿ ಮಾಲೀಕರುಗಳ ಸಂಘ, ಟ್ಯಾಕ್ಸಿ ವಾಹನ ಮಾಲೀಕರು ಮತ್ತು ಚಾಲಕರ ಸಂಘ, ಜೀಪು ಮಾಲೀಕರು ಮತ್ತು ಚಾಲಕರ ಸಂಘ ಹಾಗೂ ಹೋಂಸ್ಟೇ ಅಸೋಸಿಯೇಷನ್ಸ್ ವತಿಯಿಂದ ಕರ್ನಾಟಕದ ರೈತರ ಸಮಸ್ಯೆಗಳಿಗೆ ಕೊಡಗಿನ ಜನತೆಯ ಸ್ಪಂದನೆ ಸದಾ ಇದ್ದು, ಕಾವೇರಿ ವಿವಾದದಿಂದ ಕರ್ನಾಟಕಕ್ಕೆ ಆಗಿರುವ ತೊಂದರೆಯನ್ನು ನಿವಾರಿಸಲು ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಎಂದು ಆಗ್ರಹಿಸಿ ನೈತಿಕ ಬೆಂಬಲವನ್ನು ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಬಿ.ಎನ್. ಪ್ರಕಾಶ್, ಮಾಜಿ ಅಧ್ಯಕ್ಷ ಜಿ. ಚಿದ್ವಿಲಾಸ್, ಪ್ರಮುಖರಾದ ನವೀನ್ ಕುಶಾಲಪ್ಪ, ಬಿ.ಕೆ. ಅರುಣ್‍ಕುಮಾರ್, ಮೋಂತಿ ಗಣೇಶ್, ನಗರ ಕಾರ್ಯದರ್ಶಿ ಧನಂಜಯ, ಆಟೋ ಮಾಲೀಕರು ಹಾಗೂ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಡಿ.ಹೆಚ್. ಮೇದಪ್ಪ, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಲಾರಿ ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಅಶೋಕ್, ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಜಿ.ಜೆ. ಸೋನ್ಸ್ ಹಾಗೂ ಇನ್ನಿತರರು ಇದ್ದರು.

ಶನಿವಾಸಂತೆ - ಕೊಡ್ಲಿಪೇಟೆ ಬಂದ್

ಕಾವೇರಿ ಜಲ ವಿವಾದದ ಹಿನ್ನೆಲೆಯಲ್ಲಿ ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಸಂಪೂರ್ಣ ಬಂದ್ ಆಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಬಂದ್‍ಗೆ ಕರೆ ನೀಡಿದ್ದು, ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ನಗರ ಬಂದ್ ಆಗಿತ್ತು.

ಶನಿವಾರಸಂತೆಯಲ್ಲಿ ಬೆಳಿಗ್ಗೆ ಗುಡುಗಳಲೆ ಜಂಕ್ಷನ್‍ನಲ್ಲಿ ಟಯರ್‍ಗಳಿಗೆ ಬೆಂಕಿ ಹಾಕಿ ಪ್ರತಿಭಟನಾ ಮೆರವಣಿಗೆ ರ್ಯಾಲಿ ನಡೆಸಲಾಯಿತು. ರ್ಯಾಲಿಗೆ ರಕ್ಷಣಾ ವೇದಿಕೆ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಒ.ವಿ. ಫ್ರಾನ್ಸಿಸ್ ಚಾಲನೆ ನೀಡಿದರು. ಕೇಂದ್ರ ಸರಕಾರದ ವಿರುದ್ಧ ದಿಕ್ಕಾರ ಕೂಗುತ್ತಾ ಮೆರವಣಿಗೆ ಸಾಗಿದ ಕರವೇ ಕಾರ್ಯಕರ್ತರು ನಗರದಲ್ಲಿ ಕೆಲವು ತೆರೆದ ಅಂಗಡಿಗಳನ್ನು ಮುಚ್ಚಿಸುತ್ತಾ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಸರಕಾರಿ ಬಸ್ಸು ಹಾಗೂ ಖಾಸಗಿ ಬಸ್ಸುಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿತ್ತು. ಖಾಸಗಿ ವಾಹನಗಳು ಹಾಗೂ ಆಟೋ ರಿಕ್ಷಾಗಳು ಎಂದಿನಂತೆ ಸಂಚರಿಸಿದವು. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಜನ ಸಂಚಾರ ಇಲ್ಲದೆ ಬಣಗುಡುತ್ತಿತ್ತು. ಕೊಡ್ಲಿಪೇಟೆ ಪಟ್ಟಣ ಸಂಪೂರ್ಣ ಬಂದ್ ಆಗಿತ್ತು. ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‍ಗೆ ಬೆಂಬಲಿಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರಮುಖರಾದ ರಾಕೇಶ್, ಧನುಪ್ರಸಾದ್, ಹರೀಶ್, ಪ್ರವೀಣ, ಉದಯ, ಲೂಯಿಸ್, ರಂಜಿತ್, ರಾಜು, ಶಂಕರ್, ಆಕಾಶ್, ರಮೇಶ್, ರಂಗಸ್ವಾಮಿ, ಆದರ್ಶ್, ಶಿವಕುಮಾರ್, ರಕ್ಷಿತಾ, ಕೀರ್ತಿ ಇತರರು ಇದ್ದರು. ಶನಿವಾರಸಂತೆ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಹಾಗೂ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಖತೀಜಾ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

ಗೋಣಿಕೊಪ್ಪಲು : ಗೋಣಿಕೊಪ್ಪಲು ನಗರ ಒಳಗೊಂಡಂತೆ ವೀರಾಜಪೇಟೆ ತಾಲೂಕಿನಲ್ಲಿ ಬಂದ್ ಬಿಸಿ ತಟ್ಟಲಿಲ್ಲ. ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವ ಹಿನ್ನೆಲೆ ಯಾವದೇ ಶಾಲಾ - ಕಾಲೇಜು ತೆರೆದಿರಲಿಲ್ಲ. ವೀರಾಜಪೇಟೆ, ಗೋಣಿಕೊಪ್ಪಲು, ವೀರಾಜಪೇಟೆ-ಸಿದ್ದಾಪುರ, ಮೈಸೂರು, ಬೆಂಗಳೂರು ಕಡೆಗೆ ತೆರಳುವ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳ ಓಡಾಟ ಸಂಪೂರ್ಣ ಸ್ತಬ್ಧವಾಗಿತ್ತು. ಗ್ರಾಮೀಣ ಸಾರಿಗೆ ಅಲ್ಲಲ್ಲಿ ಓಡಾಟ ನಡೆಸಿದ್ದರೆ, ಖಾಸಗಿ ಬಸ್ಸುಗಳು, ಅಟೋಗಳ ಓಡಾಟ ಎಂದಿನಂತೆ ಕಂಡು ಬಂದವು. ಅಂಗಡಿ ಮಳಿಗೆಗಳು, ಬ್ಯಾಂಕ್‍ಗಳು ತೆರೆದಿದ್ದು, ಎಲ್ಲಿಯೂ ಜನದಟ್ಟಣೆ ಕಂಡು ಬರಲಿಲ್ಲ.

ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ ಕೊಡಗು ರೈತ ಸಂಘ ಮಾನವ ಸರಪಳಿ ನಿರ್ಮಿಸುವ ಮೂಲಕ ರಾಜ್ಯ ಬಂದ್‍ಗೆ ನೈತಿಕ ಬೆಂಬಲ ನೀಡಲಾಯಿತು.

ಉಳಿದಂತೆ ಪೆÇನ್ನಂಪೇಟೆ, ಕಾನೂರು, ಶ್ರೀಮಂಗಲ, ಹುದಿಕೇರಿ, ಕುಟ್ಟ, ಟಿ.ಶೆಟ್ಟಿಗೇರಿ, ಪಾಲಿಬೆಟ್ಟ, ಅಮ್ಮತ್ತಿ, ತಿತಿಮತಿಯಲ್ಲಿ ಯಾವದೇ ಬಂದ್ ನಡೆಯದೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು.

ಕೊಡಗಿನಲ್ಲಿ ಅರಣ್ಯನಾಶವಾಗದಿರಲಿ, ಬೆಂಗಳೂರಿಗೆ ಕಾವೇರಿ ನೀರು ನಿಲ್ಲದಿರಲಿ, ಕಾವೇರಿಯ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಘೋಷಣೆಯೊಂದಿಗೆ ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ಮೂಲಕ ರಾಜ್ಯ ರೈತ ಸಂಘದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಕೊಡಗು ರೈತ ಸಂಘದ ಸದಸ್ಯ ಲಾಲಾ ಪೂಣಚ್ಚ ಮಾತನಾಡಿದರು.

ಚೆಟ್ರುಮಾಡ ಕಾಶಿ ತಮ್ಮಯ್ಯ ಮಾತನಾಡಿ, ಕಾವೇರಿ ತವರಿಗೆ ರಾಜ್ಯ ಮುಖ್ಯಮಂತ್ರಿಗಳ ಕೊಡುಗೆ ಏನೂ ಇಲ್ಲ. ಕೊಡಗಿನಿಂದ ಮಳೆಯ ನೀರನ್ನು ಮಾತ್ರ ನಿರೀಕ್ಷಿಸುತ್ತಿರುವ ರಾಜ್ಯ ಸರ್ಕಾರ ಇಲ್ಲಿನ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ. ಕಾವೇರಿ ಜಲ ನ್ಯಾಯಮಂಡಳಿಗೆ ಕೊಡಗಿನಲ್ಲಿ ಈ ಬಾರಿ ಮಳೆಯ ಪ್ರಮಾಣ ಕುಸಿತವಾಗಿರುವ ವರದಿ ನೀಡಲು ಅವಕಾಶವಿತ್ತು. ರಾಜ್ಯ ಸರ್ಕಾರದ ವಕೀಲರೂ ಸರಿಯಾದ ವಾದ ಮಂಡಿಸಲು ವಿಫಲರಾಗಿದ್ದಾರೆ. ಕಾವೇರಿಯಿಂದ ಕೊಡಗಿನ ಜನತೆಗೆ ಯಾವ ಲಾಭವೂ ಇಲ್ಲ. ಈ ನಿಟ್ಟಿನಲ್ಲಿ ಕೊಡಗಿನ ಅಭಿವೃದ್ಧಿಯತ್ತ ಸರ್ಕಾರ ತುರ್ತು ಸ್ಪಂದನೆ ನೀಡಬೇಕಾಗಿದೆ ಎಂದು ಹೇಳಿದರು.

ಕೊಡಗು ಜಿಲ್ಲಾ ರೈತ ಸಂಘದ ಸಂಚಾಲಕ ಚಿಮ್ಮಂಗಡ ಗಣೇಶ್ ಮಾತನಾಡಿದರು. ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ ಕಾರ್ಯಕ್ರಮ ನಿರ್ವಹಿಸಿದರು.

ಕುಶಾಲನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಕುಶಾಲನಗರದಲ್ಲಿ ರಾಜ್ಯ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತಗೊಂಡಿದೆ.

ಖಾಸಗಿ ಮತ್ತು ಸರಕಾರಿ ಬಸ್‍ಗಳು ಸಂಚಾರ ಸ್ಥಗಿತಗೊಂಡಿದ್ದವು. ವ್ಯಾಪಾರ ವಹಿವಾಟು ಎಂದಿನಂತೆ ಕಂಡುಬಂದರೂ ಜನಸಂದಣಿ ವಿರಳವಾಗಿತ್ತು. ಬಂದ್ ಹಿನ್ನಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾ ಘಟಕದ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಸ್ಥಳೀಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿ ಸೇರಿದ ಕಾರ್ಯಕರ್ತರು, ತಮಿಳುನಾಡು ಸಿಎಂ ಜಯಲಲಿತಾ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಕೀಲ ನಾರಿಮನ್ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಮಾನವ ಸರಪಳಿ ರಚಿಸಿ ಹೆದ್ದಾರಿಯಲ್ಲಿ ಸುಮಾರು ಅರ್ಧ ಗಂಟೆ ಕಾಲ ವಾಹನ ಸಂಚಾರ ಬಂದ್ ಮಾಡಿ, ಕೊಪ್ಪ ಗೇಟ್ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕರವೇ ನಗರಾಧ್ಯಕ್ಷ ಅಣ್ಣಯ್ಯ, ಮಣಿಕಂಠ ಮತ್ತಿತರರು ಈ ವೇಳೆ ಇದ್ದರು. ಕುಶಾಲನಗರ ನಗರ ಪೊಲೀಸ್ ಠಾಣಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ವತಿಯಿಂದ ಹಾರಂಗಿ ಅಣೆಕಟ್ಟೆ ಮುಂದೆÀ ಪ್ರತಿಭಟನೆ ನಡೆಸಲಾಯಿತು. ಸಂಘಟನೆಯ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಕಾರ್ಯಕರ್ತರು ಭಾಗವಹಿಸಿದ್ದರು.

ಸರಕಾರ ಹಾಗೂ ವಕೀಲ ನಾರಿಮನ್ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ನಂತರ ಅಣೆಕಟ್ಟೆಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ಹಿಂದಕ್ಕೆ ಕಳುಹಿಸಿದರು. ಈ ವೇಳೆ ಸಿದ್ದರಾಮಯ್ಯ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ನಂತರ ಕೂಡಲೇ ನೀರು ನಿಲ್ಲಿಸುವಂತೆ ಹಾರಂಗಿ ಯೋಜನೆಯ ಅಧೀಕ್ಷಕ ಅಭಿಯಂತರ ಚಂದ್ರಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಸಂಘಟನೆಯ ಪದಾಧಿಕಾರಿಗಳಾದ ನವೀನ್, ನಾಗೇಗೌಡ, ದಿನೇಶ್, ರೂಪಾಸುರೇಶ್, ನಾಸಿರ್, ಉದಯ, ಅಭಿಲಾಶ್ ಮತ್ತಿತರರು ಇದ್ದರು.

ಕರ್ನಾಟಕ ಕಾವಲು ಪಡೆ ಜಿಲ್ಲಾ ಘಟಕದ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲೆಯ ಗಡಿ ಭಾಗ ಕೊಪ್ಪ ಗೇಟ್ ಬಳಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ ಸಂಘಟನೆಯ ಕಾರ್ಯಕರ್ತರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಡಿಕೇರಿ – ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿದರು. ತಮಿಳುನಾಡು ಸಿಎಂ ಮತ್ತು ಕರ್ನಾಟಕ ಮುಖ್ಯಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಜಯಲಲಿತಾ ಪ್ರತಿಕೃತಿಗೆ ಚಪ್ಪಲಿ ಏಟು ನೀಡಿ, ಬೆಂಕಿ ಹಚ್ಚಿ ಪ್ರತಿಭಟಿಸಿದರು. ರಸ್ತೆಯಲ್ಲಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಂಘಟನೆಯ ಪದಾಧಿಕಾರಿಗಳಾದ ಸಲೀಂ ಹೆಚ್.ಎಸ್., ಚಕ್ರವರ್ತಿ, ಸತ್ಯವೇಲು, ಶಿವಶಕ್ತಿ, ಶಶಿಧರ್, ಹರೀಶ್, ಗಿರೀಶ್, ಮಂಜು, ಆಕಾಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಸಹದೇವ್ ನೇತೃತ್ವದಲ್ಲಿ ಹಾರಂಗಿ ಜಲಾಶಯದ ಹೊರ ಭಾಗದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಕಾರ್ಯದರ್ಶಿ ಕುಮಾರ್, ನಗರ ಅಧ್ಯಕ್ಷ ಪ್ರಾನ್ಸಿಸ್ ಲೋಬೋ, ರಾಜೀವ, ಕೇಶವ ಮತ್ತಿತರರು ಇದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮತ್ತು ಡಿವೈಎಸ್‍ಪಿ ಟಿ.ಕುಮಾರ್ ನೇತೃತ್ವದಲ್ಲಿ ಹಾರಂಗಿ ಅಣೆಕಟ್ಟೆ ವ್ಯಾಪ್ತಿಯಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

ಸ್ಪಂದಿಸದ ಸೋಮವಾರಪೇಟೆ

ಸೋಮವಾರಪೇಟೆ : ರಾಜ್ಯದಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮವನ್ನು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಸೋಮವಾರಪೇಟೆ ಸ್ಪಂದಿಸಿಲ್ಲ. ಶಾಲಾ ಕಾಲೇಜುಗಳನ್ನು ಹೊರತುಪಡಿಸಿದರೆ ಉಳಿದಂತೆ ಜನಜೀವನ ಎಂದಿನಂತೆ ಸಾಗಿತ್ತು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್‍ಗಳು ಸಂಪೂರ್ಣ ಸ್ಥಗಿತಗೊಂಡಿದ್ದರೆ, ಕೆಲವು ಖಾಸಗಿ ಬಸ್‍ಗಳನ್ನು ಹೊರತುಪಡಿಸಿದರೆ ಉಳಿದಂತೆ ಇತರ ಬಸ್‍ಗಳು ಸಂಚರಿಸಿದವು. ಆದರೂ ನಗರದಲ್ಲಿ ಜನ ಸಂಚಾರ ವಿರಳವಾಗಿತ್ತು.

ವರ್ತಕರ ಸಂಘ ಬಂದ್‍ಗೆ ನೈತಿಕ ಬೆಂಬಲವನ್ನಷ್ಟೇ ನೀಡಿದ್ದರಿಂದ ಅಂಗಡಿಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಬ್ಯಾಂಕ್‍ಗಳಲ್ಲೂ ಗ್ರಾಹಕರ ಓಡಾಟ ವಿರಳವಾಗಿತ್ತು. ಜೆಡಿಎಸ್ ಪಕ್ಷ ಕರೆ ನೀಡಿದ್ದ ಒಂದು ಗಂಟೆಗಳ ಅಂಗಡಿಮುಂಗಟ್ಟು ಬಂದ್ ಕರೆಗೂ ಇಲ್ಲಿನ ವರ್ತಕರು ಕಿವಿಗೊಡಲಿಲ್ಲ.

ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ, ಬಂದ್‍ನಲ್ಲಿ ಭಾಗವಹಿಸುತ್ತಾರೆ ಎಂದು ರಾಜ್ಯಾಧ್ಯಕ್ಷ ನಾರಾಯಣಗೌಡ ಅವರು ಕರೆ ನೀಡಿದ್ದರಿಂದ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರಪೇಟೆ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಜಿಲ್ಲಾಧ್ಯಕ್ಷ ಪ್ರವೀಣ್ ಪೂಜಾರಿ ಹಾಗೂ ಇನ್ನಿತರರು ಇದ್ದರು.

ಇನ್ನು ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಂದು ಗÀಂಟೆಗಳ ಕಾಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಪ್ರತಿಭಟನೆಗೆ ಇಳಿಯುತ್ತಾರೆ ಎಂದು ನಂಬಲಾಗಿತ್ತಾದರೂ, ಆ ಪಕ್ಷದ ಮುಖಂಡರುಗಳು ನಾಲ್ಕೈದು ಕಾರಿನಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಗೆ ತೆರಳಿದ್ದರು.

ಬೆಳಗ್ಗಿನ ಜಾವ ಸೋಮವಾರಪೇಟೆ-ಶಾಂತಳ್ಳಿ ರಸ್ತೆಯ ಅಭಿಮಠ ಬಾಚಳ್ಳಿ ಜಂಕ್ಷನ್‍ನಲ್ಲಿ ರಸ್ತೆಗೆ ಅಡ್ಡಲಾಗಿ ಮರವನ್ನು ಉರುಳಿಸಲಾಗಿತ್ತು. ಇದರಿಂದಾಗಿ ಕೆಲಕಾಲ ಸಂಚಾರ ಸ್ಥಗಿತಗೊಂಡಿದ್ದು, ನಂತರ ತೆರವುಗೊಳಿಸಲಾಯಿತು. ಒಟ್ಟಾರೆ ಕರ್ನಾಟಕ ಬಂದ್ ಕರೆಗೆ ಓಗೊಡದ ಸೋಮವಾರಪೇಟೆಯಲ್ಲಿ ಜನಜೀವನ ಎಂದಿನಂತೆ ಇತ್ತು. ಬಂದ್‍ಗೂ ತಮಗೂ ಸಂಬಂಧವಿಲ್ಲ ಎಂದು ಬಿಜೆಪಿಯವರೂ ಸಹ ತಮ್ಮ ದೈನಂದಿನ ಕೆಲಸಕಾರ್ಯಗಳಲ್ಲಿ ತೊಡಗಿದ್ದರು.

ಸುಂಟಿಕೊಪ್ಪ : ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ‘ಕರ್ನಾಟಕ ಬಂದ್’ಗೆ ಸುಂಟಿಕೊಪ್ಪದಲ್ಲಿ ಯಾವದೇ ಪ್ರತಿಕ್ರಿಯೆ ಕಂಡುಬರಲಿಲ್ಲ.

ಅಲ್ಲದೇ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳ ಓಡಾಟ ಸ್ಥಗಿತಗೊಳಿಸಿದರಿಂದ ಜನರು ದೂರದ ಊರಿಗೆ ಹೋಗಲು ಪರದಾಡುವಂತಹ ಪರಿಸ್ಥಿಯನ್ನು ಹೊರತುಪಡಿಸಿದರೇ ಅಂಗಡಿ ಮುಂಗಟ್ಟುಗಳು, ಬ್ಯಾಂಕ್‍ಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಮೊದಲೇ ಬಂದ್ ಬಗೆ ಜನಸಾಮಾನ್ಯರಿಗೆ ಗೊತ್ತಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರ ಓಡಾಟ ಕಂಡುಬರಲಿಲ್ಲ.

ವೀರಾಜಪೇಟೆ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಕರ್ನಾಟಕ ಬಂದ್ ಪಟ್ಟಣದಲ್ಲಿ ಯಶಸ್ವಿಯಾಗಲಿಲ್ಲ.

ನಿತ್ಯದಂತೆ ಪಟ್ಟಣದಲ್ಲಿ ಬೆಳಿಗ್ಗೆಯಿಂದಲೆ ಅಂಗಡಿ ಮುಂಗಟ್ಟುಗಳು, ಹೋಟೆಲ್, ಕಚೇರಿಗಳು, ಬ್ಯಾಂಕ್‍ಗಳು, ತನ್ನ ವಹಿವಾಟು ನಡೆಸುತ್ತಿದ್ದವು. ಖಾಸಗಿ ವಾಹನಗಳು, ಬಸ್ಸುಗಳು ದಿನನಿತ್ಯದಂತೆ ಓಡಾಡುತ್ತಿರುವದು ಕಂಡು ಬಂತು.

ಗ್ರಾಮೀಣ ಪ್ರದೇಶದ ಜನರು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ಮತ್ತು ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಸರ್ಕಾರಿ ಬಸ್ಸುಗಳು ಮಾತ್ರ ಸಂಚರಿಸಲಿಲ್ಲ. ಪರಿಣಾಮ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣ ಬಿಕೋ ಎನ್ನುತ್ತಿತ್ತು. ಶಾಲಾ ಕಾಲೇಜಿಗೆ ರಜೆ ಘೋಷಿಸಿದ್ದರಿಂದ ಮಕ್ಕಳಿಗೆ ಹೆಚ್ಚಿನ ಸಮಸ್ಯೆಯಾಗಲಿಲ್ಲ. ದಿನನಿತ್ಯ ಜನ ಜಂಗುಳಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ತುಂಬಿ ಗಿಜಿಗುಡುತ್ತಿದ್ದ ನಿಲ್ದಾಣ ಶುಕ್ರವಾರ ಖಾಲಿಯಾಗಿ ಕಂಡುಬಂತು.

ಕ.ಸಾ.ಪ. ವಿರೋಧ : ಕರ್ನಾಟದಲ್ಲಿ ಜಲ ಸಂಪನ್ಮೂಲವು ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಜಲ ಸಂಪನ್ಮೂಲವು ಕನ್ನಡಿಗರಿಗೇ ಸಾಕಾಗದ ಹಿನ್ನೆಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವದು ಕಂಡುಬರುತ್ತಿದ್ದು, ಇದೀಗ ತಮಿಳುನಾಡಿಗೆ ನೀರು ಹರಿಸಿರುವದನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿರೋಧಿಸುತ್ತದೆ.

ಕೇಂದ್ರ ಹಾಗೂ ಸರ್ವೋಚ್ಛ ನ್ಯಾಯಾಲಯಕ್ಕೆ ಕನ್ನಡಿಗರ ಪರಿಸ್ಥಿತಿಯನ್ನು ಅರ್ಥೈಸುವಲ್ಲಿ ಜನಪ್ರತಿನಿಧಿಗಳು ವಿಫಲವಾಗಿರುವದೇ ಈ ಅನಾಹುತಕ್ಕೆ ಕಾರಣವಾಗಿರಬಹುದು. ಇನ್ನಾದರೂ ರಾಜ್ಯದ ರೈತರ ಹಿತಾಸಕ್ತಿಗಾಗಿ ನಾಡಿನ ಜಲ ಸಂನ್ಮೂಲವನ್ನು ಕಾಪಾಡಬೇಕೆಂದು ಆಗ್ರಹಿಸಿ ಕ.ಸಾ.ಪ.ದಿಂದ ಮನವಿ ಸಲ್ಲಿಸಲಾಯಿತು.

ವರದಿ : ಚಂದ್ರ ಉಡೋತ್, ಚಂದ್ರಮೋಹನ್, ಶ್ರೀನಿವಾಸ್, ಎನ್.ಎನ್. ದಿನೇಶ್, ವಿಜಯ್, ರಾಜ್‍ಕುಮಾರ್, ರಾಜುರೈ, ನರೇಶ್ಚಂದ್ರ, ನಾಗರಾಜ ಶೆಟ್ಟಿ.