ಮಡಿಕೇರಿ, ಆ. 4: ಕೊಡಗಿನ ವಿಶೇಷತೆಗಳಲ್ಲಿ ಕಕ್ಕಡ ಪದಿನೆಟ್ಟ್ ಆಚರಣೆಯೂ ಒಂದು. ಕಕ್ಕಡ 18ನೇ ದಿನದಂದು ಘಮ ಘಮಿಸುವ ವಿಶೇಷ ಮದ್ದು ಪಾಯಸದ ಸವಿಯೊಂದಿಗೆ ನಾಟಿಕೋಳಿಯ ಭಕ್ಷ್ಯ ಬೋಜನದೊಂದಿಗೆ ಕೊಡಗಿನ ಮಳೆಗಾಲದಲ್ಲಿ ಮೈ ಬಿಸಿ ಏರಿಸುವ ವಿಶಿಷ್ಟ ಪದ್ಧತಿ. ಪರಂಪರಾಗತವಾಗಿ ಕೊಡಗು ಜಿಲ್ಲೆಯಲ್ಲಿ ನಡೆದುಕೊಂಡು ಬರುತ್ತಿದೆ. ಮನೆ ಮನೆಗಳಲ್ಲಿ ಆಚರಿಸಲ್ಪಡುತ್ತಿದ್ದ ಈ ದಿನದ ವಿಶೇಷ. ಇತ್ತೀಚಿನ ವರ್ಷಗಳಲ್ಲಿ ಸಾರ್ವತ್ರಿಕ ಆಚರಣೆಯಾಗಿಯೂ ರೂಪುಗೊಳ್ಳುತ್ತಿದ್ದು, ಗಮನ ಸೆಳೆಯುತ್ತಿದೆ.ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ಕಳೆದ ಐದು ವರ್ಷದಿಂದ ಕಕ್ಕಡ-18 ವಿಶೇಷ ರೀತಿಯಲ್ಲಿ ಆಚರಿಸಲ್ಪಡುತ್ತಿದೆ. ಪೊನ್ನಂಪೇಟೆಯ ಕಿಗ್ಗಟ್ಟ್ನಾಡ್ ಕೊಡವ ಹಿತರಕ್ಷಣಾ ಬಳಗ ಈ ದಿನವನ್ನು ಕೊಡವ ಜನಾಂಗವನ್ನು ಬೆಸೆಯುವಂತೆ ಮಾಡುವ ಪ್ರಯತ್ನವಾಗಿ ಹಮ್ಮಿಕೊಳ್ಳುತ್ತಿರುವದು ವಿಶೇಷವಾಗಿದೆ.ಕಿಗ್ಗಟ್ಟ್ನಾಡ್ ಕೊಡವ ಹಿತರಕ್ಷಣಾ ಬಳಗದ ಯುವಕರು ಪೊನ್ನಂಪೇಟೆ ಕೊಡವ ಸಮಾಜದ ಸಹಕಾರದೊಂದಿಗೆ ಸಾರ್ವತ್ರಿಕವಾಗಿ ಈ ದಿನವನ್ನು ಆಚರಿಸುತ್ತಿದ್ದು, ಯುವಕರ ಪ್ರಯತ್ನಕ್ಕೆ ಹಿರಿಯರು, ಮಹಿಳೆಯರು ಸಾಥ್ ನೀಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಪಾಲ್ಗೊಳ್ಳುತ್ತಿರುವ ಜನರ ಸಂಖ್ಯೆಯೂ ಹೆಚ್ಚಳಗೊಳ್ಳುತ್ತಿದೆ.ನಿನ್ನೆ ಸಂಜೆ ಪೊನ್ನಂಪೇಟೆಯಲ್ಲಿ ಕಕ್ಕಡ 18ರ ಸಾರ್ವತ್ರಿಕ ಆಚರಣೆಯಾಗಿದ್ದು, ಪಂಜಿನ ಮೆರವಣಿಗೆ, ಮದ್ದು ಪಾಯಸದ ಸವಿ, ಕೊಡವ ಹಾಡಿನ ಕೊಡವ ನೈಟ್ಸ್ ಕಾರ್ಯಕ್ರಮ ನಡೆಯಿತು. ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಸೇರಿದ ನೂರಾರು ಮಂದಿ ಒಡ್ಡೋಲಗದೊಂದಿಗೆ ಉರಿಯುವ ಪಂಜು ಹಿಡಿದು ಸಂಜೆಗತ್ತಲಿನಲ್ಲಿ ಮೆರವಣಿಗೆ ನಡೆಸಿದರು. ಪೊನ್ನಂಪೇಟೆ ಕೊಡವ ಸಮಾಜದಿಂದ ಸಾಗಿದ ಮೆರವಣಿಗೆ ಬಸ್ ನಿಲ್ದಾಣದಲ್ಲಿರುವ ಬಸವೇಶ್ವರ ದೇವಾಲಯದ ಪ್ರದಕ್ಷಿಣೆಯೊಂದಿಗೆ ಮತ್ತೆ ಕೊಡವ ಸಮಾಜದಲ್ಲಿ ಸಮಾಪನಗೊಂಡಿತು. ಪುರುಷರು, ಮಹಿಳೆಯರು, ಮಕ್ಕಳು ಪಂಜು ಹಿಡಿದು ಹೆಜ್ಜೆ ಹಾಕಿದರಲ್ಲದೆ, ಬಸ್ ನಿಲ್ದಾಣದಲ್ಲಿ ವಾಲಗಕ್ಕೆ ನೃತ್ಯ ಮಾಡಿದ್ದು ಕಂಡು ಬಂದಿತು.
ಕೊಡವ ಜನಾಂಗದಲ್ಲಿ ಒಗ್ಗಟ್ಟಿನ ಅಗತ್ಯತೆ
ಪಂಜಿನ ಮೆರವಣಿಗೆ ಬಳಿಕ ಕೊಡವ ಸಮಾಜದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ಪ್ರಮುಖರು ಅಲ್ಪಸಂಖ್ಯಾತರಾಗಿರುವ ಕೊಡವ ಜನಾಂಗದವರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದು, ಗಮನ ಸೆಳೆದಿದ್ದಾರೆ. ಜನಾಂಗದವರಲ್ಲಿ ಎಲ್ಲಾ ರೀತಿಯ ಅರ್ಹತೆ ಇದೆಯಾದರೂ ಒಗ್ಗಟ್ಟಿನ ಕೊರತೆಯಿಂದಾಗಿ ಸಮಸ್ಯೆ ಎದುರಿಸುವಂತಾಗಿದ್ದು, ಒಗ್ಗಟ್ಟಿನ ಅಗತ್ಯತೆ ಅನಿವಾರ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹೈಕೋರ್ಟ್ ಹಿರಿಯ ವಕೀಲ, ಮುಕ್ಕಾಟಿರ ಟಿ. ನಾಣಯ್ಯ ಅವರು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಯುವಕರು ಹೊಸ ಹುಮ್ಮನಸ್ಸಿನೊಂದಿಗೆ ಜನಾಂಗವನ್ನು ಬೆಸೆಯುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದಾರೆ. ಜನಾಂಗ ದವರು ಪರಸ್ಪರ ಹೀಯಾಳಿಸುವ, ಕಾಲೆಳೆಯುವ ಪ್ರವೃತ್ತಿಯನ್ನು ಬಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು. ಪರಸ್ಪರ ಉತ್ತೇಜನದೊಂದಿಗೆ ಪ್ರೋತ್ಸಾಹ ನೀಡಬೇಕು. ಲೆಟರ್ಹೆಡ್ ಸಂಘಟನೆ ಯಿಂದ ಪ್ರಯೋಜನ ವಾಗದು ಕ್ರಿಯಾಶೀಲವಾದ ಕೆಲಸ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪರಸ್ಪರ ದ್ರೋಹ ಮಾಡಿದಲ್ಲಿ ಕಾವೇರಿಯ ಶಾಪ ತಟ್ಟುವದು ಖಚಿತ ಎಂದು ಕಿವಿಮಾತು ಹೇಳಿದ ಅವರು, ಕೊಡಗಿನ ಜನತೆ ವಿರೋಧಿಸಿದ ಹೈಟೆನ್ಷನ್ ವಿದ್ಯುತ್ ಮಾರ್ಗ ಹಾದು ಹೋಗಲು ಸಹಕರಿಸಿದ ಸಚಿವ ರೊಬ್ಬರು ರಾಜೀನಾಮೆ ನೀಡ ಬೇಕಾದ ಪರಿಸ್ಥಿತಿ ಎದುರಾಯಿ ತೆಂದು ಉದಾಹರಿಸಿ ದರು.
1956ರಲ್ಲಿ ಕೊಡಗು ಕರ್ನಾಟಕದೊಂದಿಗೆ ವಿಲೀನವಾದ ಸಂದರ್ಭ ಪ್ರಮುಖ ದಾಖಲೆ ಗಳೆಲ್ಲವೂ ಮದ್ರಾಸಿನಲ್ಲಿ ಉಳಿದು ಹೋಗಿದ್ದು, ಇದನ್ನು ತರುವ ಪ್ರಯತ್ನ ಮಾಡಬೇಕಿದೆ ಎಂದರು. ಪೂರ್ವಿಕರ ಹೆಸರಿನಲ್ಲಿರುವ ಜಾಗದ ದಾಖಲೆಗಳನ್ನು ಸರಿಪಡಿಸಿ ಕೊಳ್ಳುವಂತೆ ಸಲಹೆ ಇತ್ತ ನಾಣಯ್ಯ ಅವರು ಇದಕ್ಕೆ ಕಂದಾಯ ಇಲಾಖೆಯವರು ಸ್ಪಂದಿಸದಿದ್ದರೆ ಕಾನೂನು ಹೋರಾಟಕ್ಕೆ ನೆರವು ನೀಡುವದಾಗಿ ಭರವಸೆಯಿತ್ತರು.
ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ ಅವರು ಮಾತನಾಡಿ, ಜನಾಂಗದ ಪರ ಹೋರಾಡುವ ಯಾವದೇ ಸಂಘಟನೆಗೆ ಬೆಂಬಲ ತೋರಬೇಕು, ಜನಾಂಗದಲ್ಲಿ ಒಗ್ಗಟ್ಟಿನ ಕೊರತೆ ಯಿಂದಾಗಿ ವಿವಿಧ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಜನಸಂಖ್ಯೆ ಕ್ಷೀಣವಾಗುತ್ತಿದ್ದು, ಜನಾಂಗ ನಶಿಸಿ ಹೋಗುವ ಮುನ್ನ ಈ ಬಗ್ಗೆ ಎಚ್ಚೆತ್ತು ಕೊಳ್ಳಬೇಕು ಎಂದು ನುಡಿದರು. ಗದ್ದೆ ನೆಡುವ ಮೂಲಕ ಕಕ್ಕಡ 18ನ್ನು ಆಚರಿಸಿದರೆ, ಹೆಚ್ಚು ಅರ್ಥಪೂರ್ಣ ಎಂದ ಅವರು ಗದ್ದೆಗಳನ್ನು ಪಾಳುಬಿಡದಂತೆ ಕರೆ ನೀಡಿದರು.
ಕಾಫಿ ರಾಷ್ಟ್ರೀಯ ಪಾನೀಯ ಆಂದೋಲನದ ಸಂಚಾಲಕ ಮಾಚಿಮಾಡ ಎಂ. ರವೀಂದ್ರ ಅವರು ಮಾತನಾಡಿ, ಸಪ್ತ ನದಿಗಳೆಂದು ಪೂಜಿಸಲ್ಪಡುವ ನದಿಗಳಲ್ಲಿ ಒಂದಾದ ಕಾವೇರಿಯನ್ನು ಕುಲದೇವರೆಂದು ಆರಾಧಿಸುವ ಕೊಡವರು ಕೊಡಗಿನಲ್ಲಿ ಪುರಾತನ ಕಾಲದಿಂದಲೂ ನೆಲೆಸಿದ್ದಾರೆ. ಈ ಜನಾಂಗದವರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಪ್ರತಿಷ್ಠಿತ ಒಲಂಪಿಕ್ಸ್ ಕ್ರೀಡೆಯಲ್ಲಿ ಕೊಡವ ಜನಾಂಗದ ಐದು ಮಂದಿ ದೇಶವನ್ನು ಪ್ರತಿನಿಧಿಸುತ್ತಿರುವದು ಇದಕ್ಕೆ ಸಾಕ್ಷಿ ಎಂದರು. ಕೊಡವರ ಮಣ್ಣು ಹಾಗೂ ಹೆಣ್ಣು ಪರಭಾರೆಯಾಗಬಾರದು ಎಂದು ಮಾರ್ಮಿಕವಾಗಿ ಹೇಳಿದ ಅವರು ಇದರ ಗಂಭೀರತೆ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿಗ್ಗಟ್ಟ್ನಾಡ್ ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಕಾಯಪಂಡ ಸನ್ನಿ ಬೋಪಣ್ಣ ವಹಿಸಿದ್ದರು. ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿದರು. ಕೊಡವ ಸಮಾಜದ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ ಸ್ವಾಗತಿಸಿದರು. ಆಲೆಮಾಡ ನವೀನ್ ಅತಿಥಿ ಪರಿಚಯಿಸಿದರೆ, ಕೊಡವ ಸಮಾಜದ ಕಾರ್ಯದರ್ಶಿ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ ಹಾಗೂ ಮಾಜಿ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಕಾರ್ಯಕ್ರಮ ನಿರೂಪಿಸಿದರು. ಸುಳ್ಳಿಮಾಡ ಶಿಲ್ಪ ತಂಡದಿಂದ ಮೂಡಿ ಬಂದ ಗೆಜ್ಜೆ ತಂಡ ನೃತ್ಯ ರೂಪಕ ಗಮನ ಸೆಳೆಯಿತು.ಸಭಾ ಕಾರ್ಯಕ್ರಮದ ಬಳಿಕ ಮದ್ದ್ ಪಾಯಸದೊಂದಿಗೆ ಸಹಭೋಜನ ಹಾಗೂ ರಾತ್ರಿ ಕೊಡವ ನೈಟ್ಸ್ ಕಾರ್ಯಕ್ರಮ ನಡೆಯಿತು.
- ಶಶಿಸೋಮಯ್ಯ, ಹರೀಶ್