ಭಾಗಮಂಡಲ, ಜೂ. 9: ಟಿಪ್ಪುವಿನಿಂದ ಹತ್ಯೆಗೀಡಾದವರ ಸ್ಮರಣೆಗಾಗಿ ಸ್ಮಾರಕ ನಿರ್ಮಾಣ ಮಾಡುವ ವಿಚಾರದಲ್ಲಿ ಗೊಂದಲವೇರ್ಪಟಿದ್ದು, ಇದರ ನೇತೃತ್ವ ವಹಿಸಿಕೊಂಡಿರುವ ಸಿಎನ್‍ಸಿ ಸಂಘಟನೆ ಕೊಡವರು ಹಾಗೂ ಗ್ರಾಮದ ಜನತೆಯಲ್ಲಿ ಗೊಂದಲ ಮೂಡಿಸಿದ್ದಾರೆ. ಸಿಎನ್‍ಸಿ ಈ ಹಿಂದೆಯೂ ಬೇರೊಂದೆಡೆ ಸ್ಮಾರಕ ನಿರ್ಮಿಸಲು ಮುಂದಾಗಿದ್ದುದು ಬೆಳಕಿಗೆ ಬಂದಿದೆ.

ಎರಡೆರಡು ಕಡೆಗಳಲ್ಲಿ ಸ್ಮಾರಕದ ನೆಪದಲ್ಲಿ ಕಲ್ಲುಗಳನ್ನು ನೆಟ್ಟಿದ್ದು, ಹತ್ಯಾಕಾಂಡದಲ್ಲಿ ಮಡಿದ ಆತ್ಮಗಳಿಗೆ ಈ ಎರಡು

ಕಡೆಗಳಲ್ಲಿ ಎಲ್ಲಿ ಶಾಂತಿ ಸಿಗಲಿದೆ ಎಂಬದನ್ನು ಸಂಘಟನೆ ಅಧ್ಯಕ್ಷ ಎನ್.ಯು. ನಾಚಪ್ಪನವರೇ ಸ್ಪಷ್ಟಪಡಿಸಬೇಕು. ಕೊಡವರು ಹಾಗೂ ಊರಿನ ಜನರ ಗೊಂದಲಗಳಿಗೆ ಉತ್ತರಿಸಬೇಕೆಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಕುಯ್ಯಮುಡಿ ರಂಜಿತ್, ಪೂರ್ಣಯ್ಯ, ಟೋನಿ ಹಾಗೂ ಕುಂಞಳಿ ಸಂತೋಷ್ ಅವರುಗಳು ಲಿಖಿತ ಹೇಳಿಕೆ ನೀಡಿದ್ದಾರೆ. ಒಂದು ವರ್ಷದ ಹಿಂದೆ ಸಿಎನ್‍ಸಿ ಅಧ್ಯಕ್ಷ ನಾಚಪ್ಪ ಅವರು, ದೇವಟ್ ಪರಂಬು ಎಂದು ಹೇಳಿಕೊಂಡು ಅಯ್ಯಂಗೇರಿಯ ಮುಸಲ್ಮಾನ ಸಮುದಾಯದ ಒತ್ತಿನ ದೋಣಿ ಕಾಡು ಎಂಬಲ್ಲಿ ‘13.12.1785 ಹೋಲೋಕಾಸ್ಟ್ ಸ್ಮಾರಕ ನೆನಪಿಗೋಸ್ಕರ’ ಅದರ ಹಿಂದೆ ಸಿಎನ್‍ಸಿ ಎಂಬ ನಾಮಧೇಯವುಳ್ಳ ಚಿಕ್ಕ ಹೊಳೆಯ ಕಲ್ಲನ್ನು ಪ್ರತಿಷ್ಠಾಪಿಸಿ ಮಡಿದವರ ಆತ್ಮಕ್ಕೆ ಶಾಂತಿ ಕೋರಿ ಮೀದಿ ಇಡುವ ಸಂಪ್ರದಾಯವನ್ನು ಮಾಡಿಕೊಂಡು ಬರುತ್ತಿದ್ದರು. ತದನಂತರ ಅಲ್ಲಿನ ಮುಸಲ್ಮಾನ ಬಾಂಧವರ ವಿರೋಧದ ಹಿನ್ನೆಲೆಯಲ್ಲಿ ಪಲಾಯನ ಮಾಡಿ ಅಲ್ಲಿಂದ 1 ಕಿ.ಮೀ. ದೂರಕ್ಕೆ ಹೋಗಿ 21.12.15 ರಂದು ಸ.ನಂ. 2/6ಠಿ ರ ಮೀಸಲು ಅರಣ್ಯದಲ್ಲಿ ಜೆಸಿಬಿ, ಕ್ರೇನ್, ಲಾರಿಯ ಸಹಾಯದಿಂದ ನಾಲ್ಕು ಕಲ್ಲಿನ ಕಂಬ ಮತ್ತು ಮಧ್ಯಭಾಗದಲ್ಲಿ ಸ್ವಲ್ಪ ದೊಡ್ಡ ಕಲ್ಲನ್ನು ನೆಡುವಂತಹ ಸಂದರ್ಭದಲ್ಲಿ ಊರಿನ ಕೆಲವರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಆಕ್ಷೇಪವೆತ್ತಿರುವ ಸಂದರ್ಭ ಬಲತ್ಕಾರವಾಗಿ ಕಲ್ಲನ್ನು ನೆಡಲಾಗಿದೆ. ನಂತರ ಇತರ ಸಂಘಟನೆಯವರು ಬಂದು ಮದ್ಯ, ಮಾಂಸವನ್ನು ಇಟ್ಟು, ಸೇವಿಸಿ ಹೋಗುತ್ತಿದ್ದರು.

ಮೊದಲು ದೋಣಿ ಕಾಡುವಿನಲ್ಲಿ ಸ್ಥಾಪಿಸಿದ್ದ ಕಲ್ಲಿನ ಸ್ಮಾರಕಕ್ಕೆ ಮೀದಿ ಇಟ್ಟು ಆತ್ಮಗಳಿಗೆ ಆಸೆಯನ್ನು ತೋರಿಸಿ, ಇದೀಗ ಈ ಆತ್ಮಗಳು ಮೀದಿ ಇಲ್ಲದೇ ಆಸೆಯ ಕಂಗಳಿಂದ ಎದುರು ನೋಡುವದಿಲ್ಲವೇ? ಈ ಆತ್ಮಗಳಿಗೆ ಶಾಂತಿ ಎಲ್ಲಿಂದ ? ನೀವು ಹೇಳುವ ಆತ್ಮಗಳು ನಿಮ್ಮ ಹಿಂದೆ ಬರುತ್ತವೆಯೇ, ನೀವೇ ಸ್ಥಾಪಿಸಿದ್ದ ಆ ಸ್ಮಾರಕದ ಕಥೆ ಏನಾಯಿತು. ಇದಕ್ಕೆ ಉತ್ತರ ನೀಡಬಲ್ಲಿರ ಎಂದು ಪ್ರಶ್ನಿಸಿದ್ದಾರೆ.

‘ದೋಣಿ ಕಾಡುವಿನಲ್ಲಿ ಸ್ಥಾಪಿಸಿದ ಸ್ಮಾರಕ ಸರಿಯೇ ಅಥವಾ ಕಣಿಯಂಗೋಟು ಪರಂಬುವಿನಲ್ಲಿ ಸ್ಥಾಪಿಸಿ ಬೀಳಿಸಿರುವ ಸ್ಮಾರಕದ ಜಾಗ ಸರಿಯೇ? ಕೊಡವ ಜನಾಂಗದವರನ್ನು ಯಾಕೆ ಗೊಂದಲಕ್ಕೆ ಕೆಡವಿದ್ದೀರ? ನಿಮ್ಮ ಉತ್ತರ ಸ್ಪಷ್ಟವಾಗಿರಲಿ’ ಎಂದು ಆಗ್ರಹಿಸಿದ್ದಾರೆ.