ಮಡಿಕೇರಿ, ಜೂ. 7: ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಇಲಾಖಾ ಸಚಿವರು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ನಗರದಲ್ಲಿ ವಿವಿಧ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ನೆರವೇರಿಸಿದರು.

ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮತ್ತಿತರರೊಂದಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ನಗರದ ಅಬ್ಬಿಫಾಲ್ಸ್ ರಸ್ತೆ ಮಾರ್ಗದಲ್ಲಿ ವೈದ್ಯಕೀಯ ಕಾಲೇಜು, ಪ್ರಾದೇಶಿಕ ಸಾರಿಗೆ ಕಚೇರಿ ಮತ್ತಿತರ ಸರ್ಕಾರಿ ಕಟ್ಟಡಗಳು ಇವೆ. ಹಾಗೆಯೇ ಅಬ್ಬಿಫಾಲ್ಸ್‍ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆದ್ದರಿಂದ ಅಬ್ಬಿಫಾಲ್ಸ್ ರಸ್ತೆ ಅಗಲೀಕರಣ ಮಾಡುವದು ಅಗತ್ಯ. ಆ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಯವರಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಮಡಿಕೇರಿ ನಗರ ಪ್ರದೇಶದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಲಾಗಿದೆ. ಅಬ್ಬಿಫಾಲ್ಸ್‍ನಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ 86 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತದೆ.

ವಿಕಲಚೇತನರಿಗೆ ಪೆಟ್ಟಿಗೆ ಅಂಗಡಿ ಇಡಲು ಅಗತ್ಯ ವ್ಯವಸ್ಥೆ ಮಾಡುವದು ಹಾಗೂ ಜಿಲ್ಲೆಯಲ್ಲಿರುವ ವಿಕಲಚೇತನರನ್ನು ಗುರುತಿಸಿ ಅವರಲ್ಲೂ

ಬಡವರನ್ನು ಪತ್ತೆಹಚ್ಚಿ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನಿಸಬೇಕಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹಾಗೂ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸಲಹೆ ಮಾಡಿದರು.

ಡಿವೈಎಸ್‍ಪಿ ಅನುಪಮ ಶೆಣೈ ರಾಜೀನಾಮೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಸಾರ್ವಜನಿಕ ಕ್ಷೇತ್ರದಲ್ಲಿ ಒತ್ತಡ ಇರುತ್ತದೆ. ಅದನ್ನು ನ್ಯಾಯಯುತವಾಗಿ ಪರಿಹರಿಸಿಕೊಳ್ಳಬೇಕಿದೆ. ಸರ್ಕಾರದ ಮಟ್ಟದಲ್ಲಿ ಸರ್ಕಾರದ ಕಾರ್ಯದರ್ಶಿ ಹಾಗೂ ಪೊಲೀಸ್ ಇಲಾಖೆ ಮಟ್ಟದಲ್ಲಿ ಡಿಜಿ ಇರುತ್ತಾರೆ. ಅವರ ಗಮನಕ್ಕೆ ತರಬಹುದಲ್ಲವೇ. ಅದನ್ನು ಬಿಟ್ಟು ರಾಜೀನಾಮೆ ನೀಡುವದು ಸರಿಯಲ್ಲ ಎಂದರು.

ಹಲವು ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಿದ ಸಚಿವರು ಮತ್ತು ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನಗರಸಭೆ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

ಮಂಗೇರಿರ ಮುತ್ತಣ್ಣ ವೃತ್ತದಿಂದ ಆಂಜನೇಯ ದೇವಸ್ಥಾನ, ಓಂಕಾರೇಶ್ವರ ದೇವಸ್ಥಾನ, ಸಿವಿಎಸ್ ವರೆಗೆ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು.

ಮುತ್ತಪ್ಪ ದೇವಸ್ಥಾನದಿಂದ ಕಾನ್ವೆಂಟ್ ಜಂಕ್ಷನ್‍ವರೆಗೆ ರಸ್ತೆ ಮರು ಡಾಮರೀಕರಣವನ್ನು 14 ನೇ ಹಣಕಾಸು ಯೋಜನೆಯಡಿ ಭರಿಸಲಾಗಿದ್ದು, ಸುಮಾರು 17.98 ಲಕ್ಷ ರೂ. ಗಳ ಮರುಡಾಂಬರೀಕರಣಕ್ಕೆ ಚಾಲನೆ ನೀಡಿದರು.

ಈ ರಸ್ತೆಯು 900 ಮೀಟರ್ ಉದ್ದವಿದ್ದು, 400 ಮೀಟರ್ ರಸ್ತೆಯನ್ನು ಹೊಸದಾಗಿ ನಿರ್ಮಿಸಲು ಮತ್ತು 500 ಮೀಟರ್ ರಸ್ತೆಯನ್ನು ಮರು ಡಾಂಬರೀಕರಣ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ಗಾಳಿಬೀಡು ರಸ್ತೆಗೆ ನೇರ ಸಂಪರ್ಕ ರಸ್ತೆಯಾಗಿದ್ದು, ಮಹದೇವಪೇಟೆ ರಸ್ತೆಯ ವಾಹನ ಸಂಚಾರ ಕಡಿಮೆಯಾಗಲಿದೆ ಎಂದು ಸಚಿವರು ಇದೇ ಸಂದರ್ಭ ಹೇಳಿದರು.

ಅಬ್ಬಿಫಾಲ್ಸ್ ಅಭಿವೃದ್ಧಿಗೆ ಚಾಲನೆ: ನಗರದ ಹೊರವಲಯದ ಅಬ್ಬಿ ಜಲಪಾತದಲ್ಲಿ ಸಾಗುವ ಪ್ರದೇಶದಲ್ಲಿ ಪ್ಲಾಟ್ ಫಾರಂ, ರೈಲಿಂಗ್ಸ್, ಮೆಟ್ಟಿಲು ದುರಸ್ತಿ, ಚೈನ್ ಲಿಂಕ್ ಮೆಶ್ ಮತ್ತಿತರ ಪ್ರವಾಸಿ ಸೌಲಭ್ಯಗಳ ಸುಮಾರು 86 ಲಕ್ಷ ರೂ.ನ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಚಾಲನೆ ನೀಡಿದರು.

ಅಬ್ಬಿ ಜಲಪಾತದ ಬಳಿ ಪ್ರವೇಶ ದ್ವಾರದಲ್ಲಿ ದೊಡ್ಡದಾದ ಆರ್ಚ್ ನಿರ್ಮಾಣ ಮಾಡಿ ನಾಮಫಲಕ ಅಳವಡಿಸುವದು. ಜಲಪಾತ ಮುಂಭಾಗದಲ್ಲಿರುವ ಪೊಲೀಸ್ ರಕ್ಷಣಾ ಕೊಠಡಿಯ ಮುಂಭಾಗದಲ್ಲಿ ಜಲಪಾತವನ್ನು ನೋಡಲು ವಾಚ್ ಟವರ್ ನಿರ್ಮಿಸುವದು. ಜಲಪಾತಕ್ಕೆ ಹೋಗುವ ದಾರಿಯಲ್ಲಿ ರಸ್ತೆ ಎರಡು ಬದಿಯಲ್ಲಿ ಬೇಸ್‍ಮೆಂಟ್ ಮೇಲೆ 8 ಅಡಿ ಎತ್ತರಕ್ಕೆ ಚೈನ್‍ಲಿಂಕ್ ಬೇಲಿ ಅಳವಡಿಸುವದು. ಜಲಪಾತ ಮುಂಭಾಗದಲ್ಲಿ ಪ್ರವಾಸಿಗರು ಜಲಪಾತಕ್ಕೆ ಇಳಿಯದಂತೆ ರೈಲಿಂಗ್ಸ್ ಅಳವಡಿಸುವದು. ಜಲಪಾತಕ್ಕೆ ಹೋಗುವ ದಾರಿಯಲ್ಲಿ ಮೆಟ್ಟಿಲುಗಳ ನಿರ್ಮಾಣ ಮಾಡುವದು. ಈಗಾಗಲೇ ಇರುವ ಶೌಚಾಲಯಕ್ಕೆ ಸಮರ್ಪಕ ನೀರು ಪೂರೈಕೆಗೆ ವ್ಯವಸ್ಥೆ ಮಾಡುವದು ಮತ್ತಿತರ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಿದರು.

ಬಳಿಕ ಆರ್.ಟಿ.ಓ ಕಚೇರಿಗೆ ತೆರಳಿ ಕಚೇರಿ ಮುಂಭಾಗ ನಡೆಯುತ್ತಿರುವ ಮಾಡಿರುವ ಕಾಮಗಾರಿಯನ್ನು ಪರಿಶೀಲನೆ ಮಾಡಿದರು. ಬಳಿಕ ವೈದ್ಯಕೀಯ ಕಾಲೇಜಿಗೆ ತೆರಳಿದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.

ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಸದ್ಯದಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ವರ್ಷವೇ ತರಗತಿ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು.

ತ್ರಿಚಕ್ರ ವಾಹನ ವಿತರಣೆ: ನಗರದ ಎಫ್.ಎಂ.ಸಿ. ಕಾಲೇಜು ಬಳಿಯಿರುವ ಸ್ತ್ರೀಶಕ್ತಿ ಭವನದಲ್ಲಿ ವಿಕಲಚೇತನರಿಗೆ ಯಂತ್ರಚಾಲಿತ 10 ತ್ರಿಚಕ್ರ ವಾಹನವನ್ನು ವಿತರಿಸಿದರು. ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಸಲಹೆ ಮಾಡಿದರು.

ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪಿ. ರಾಜೇಂದ್ರ ಪ್ರಸಾದ್, ನಗರಸಭಾ ಅಧ್ಯಕ್ಷೆ ಶ್ರೀಮತಿ ಬಂಗೇರಾ, ಉಪಾಧ್ಯಕ್ಷೆ ಲೀಲಾಶೇಷಮ್ಮ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ಮಾಜಿ ಅಧ್ಯಕ್ಷ ಬಿ.ಟಿ. ಪ್ರದೀಪ್, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಕೆ.ಎಂ. ಲೋಕೇಶ್, ನಗರಸಭಾ ಸದಸ್ಯರಾದ ಎಚ್.ಎಂ. ನಂದ ಕುಮಾರ್, ಕೆ.ಎಂ.ಬಿ.ಗಣೇಶ್, ಚುಮ್ಮಿ ದೇವಯ್ಯ, ವೀಣಾಕ್ಷಿ, ತಜಸುಮ್, ಪ್ರಕಾಶ್ ಆಚಾರ್ಯ, ಕಾವೇರಮ್ಮ ಸೋಮಣ್ಣ, ಮನ್ಸೂರ್ ಅಹಮ್ಮದ್, ಸೇರಿದಂತೆ ಎಲ್ಲಾ ಸದಸ್ಯರುಗಳು, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮನೋಹರ್, ನಗರಸಭೆ ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ, ಎಇಇ ಕೆ.ಎಂ. ರವಿಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಜಯರಾಮ್, ವಿಕಲಚೇತನರ ಅಧಿಕಾರಿ ಜಗದೀಶ್ ಮತ್ತಿತರರು ಇದ್ದರು.

ಅಬ್ಬಿಫಾಲ್ಸ್ ಕಾಮಗಾರಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ರೀಟಾ ಮತ್ತಣ್ಣ, ಗ್ರಾ.ಪಂ. ಸದಸ್ಯರಾದ ಡೀನ್ ಬೋಪಣ್ಣ, ಜಾನ್ಸ್‍ನ್, ಭೂ ಸೇನಾ ನಿಗಮದ ಎಇಇ ಪಾಟೀಲ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ಸಿ.ಜಗನ್ನಾಥ್, ಪಿಡಿಓ ವೀರಭದ್ರ ಶೆಟ್ಟಿ ಮತ್ತಿತರರು ಇದ್ದರು.