ವೀರಾಜಪೇಟೆ, ಜೂ. 19: ವೀರಾಜಪೇಟೆಯ ಪೊಲೀಸ್ ಸಿಬ್ಬಂದಿಗಳ ಬಹುಕಾಲದ ನಿರೀಕ್ಷೆಯ ಸುಸಜ್ಜಿತ ವಸತಿ ಗೃಹಗಳ ಸಮುಚ್ಛಯ ಇನ್ನೆರಡು ತಿಂಗಳಿನಲ್ಲಿ ಉದ್ಘಾಟನೆಗೊಳ್ಳಲಿದೆ.

ಕಳೆದ 17 ತಿಂಗಳುಗಳಿಂದ ನಿರಂತರವಾಗಿ ಸಾಗುತ್ತಿರುವ ವಸತಿ ಗೃಹಗಳ ನಿರ್ಮಾಣ ಕಾಮಗಾರಿ ಇದೀಗ ಅಂತಿಮ ಹಂತ ತಲಪಿದೆ. ಸುಮಾರು ರೂ. 10.50 ಕೋಟಿಗಳ ಕಾಮಗಾರಿಯನ್ನು ಬೆಂಗಳೂರಿನ ವಿನ್ಯಾಸ್ ಇಂಜಿನಿಯರ್ ಸಂಸ್ಥೆ ಕೈಗೆತ್ತಿಕೊಂಡಿದೆ. ವೀರಾಜಪೇಟೆ ಹೊರತಾಗಿ ಸೋಮವಾರಪೇಟೆ, ಶನಿವಾರಸಂತೆ, ನಾಪೋಕ್ಲು ಮತ್ತು ಪೊನ್ನಂಪೇಟೆಗಳಲ್ಲಿ ಏಕಕಾಲದಲ್ಲಿ ನಡೆಯುತ್ತಿರುವ ಪೊಲೀಸ್ ವಸತಿ ಗೃಹಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಸದ್ಯಕ್ಕೆ ವೀರಾಜಪೇಟೆಯ ನಗರ ಹಾಗೂ ಗ್ರಾಮಾಂತರ ಠಾಣೆಗಳ ಒಟ್ಟು 95 ಸಿಬ್ಬಂದಿಗಳಿಗೆ ನಗರದ ಗಾಂಧಿನಗರದಲ್ಲಿ 24 ಹಾಗೂ ಮೀನುಪೇಟೆಯಲ್ಲಿ 24 ಸೇರಿ ಒಟ್ಟು 48 ವಸತಿ ಗೃಹಗಳು ಇವೆ. ಈ ಕಟ್ಟಡಗಳು 60 ವರ್ಷಗಳಿಗಿಂತಲೂ ಹೆಚ್ಚು ಹಳೆಯದಾಗಿದ್ದು. ಸಂಪೂರ್ಣ ಜೀರ್ಣಾವಸ್ಥೆಯಲ್ಲಿದೆ. ನೂತನ ವಸತಿ ಗೃಹ ಸಮುಚ್ಛಯದ ಎಲ್ಲಾ ಕೊಠಡಿಗಳಿಗೆ ಫ್ಯಾನ್ ಸೇರಿದಂತೆ ಎಲ್ಲಾ ಆಧುನಿಕ ಸೌಲಭ್ಯಗಳಿವೆ. ಪ್ರತಿ ಫ್ಲಾಟ್‍ಗೂ ತಲಾ 12 ಸಾವಿರ ಲೀಟರ್‍ನ ಮೂರು ಪ್ರತ್ಯೇಕ ಟ್ಯಾಂಕ್‍ಗಳನ್ನು ನೆಲಮಾಳಿಗೆಯಲ್ಲಿ ನಿರ್ಮಿಸಲಾಗಿದೆ. ಸೌರಶಕ್ತಿಯ (ಸೋಲಾರ್) ಮೂಲಕ ನೀರನ್ನು ಬಿಸಿ ಮಾಡುವ ಉಪಕರಣಗಳನ್ನು ಅಳವಡಿಸಲಾಗಿದೆ. ಆಧುನಿಕ ಸೌಕರ್ಯಗಳ ವಸತಿ ಗೃಹ ಸಮುಚ್ಛಯ ಉದ್ಘಾಟನೆಗೊಂಡರೆ ವೀರಾಜಪೇಟೆಯ ಪೊಲೀಸ್ ಸಿಬ್ಬಂದಿಗಳ ವಾಸದ ಮನೆಯ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ.