*ಗೋಣಿಕೊಪ್ಪಲು, ಆ. 17: ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದ ಆವರಣದಲ್ಲಿ ಖಾಸಗಿ ವಾಹನಗಳ ನಿಲುಗಡೆಯಿಂದ ತುರ್ತು ವಾಹನ ‘ನಗು-ಮಗು’ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.

ಖಾಸಗಿ ವಾಹನಗಳು ಆಸ್ಪತ್ರೆ ಮುಂಭಾಗದ ಒಳ ಆವರಣದಲ್ಲಿ ನಿಲುಗಡೆಗೊಳ್ಳುವದರಿಂದ ಅಪಘಾತ ಇನ್ನಿತರ ತುರ್ತು ಸಂದರ್ಭಗಳಲ್ಲಿ ಒಳ ಮತ್ತು ಹೊರ ಹೋಗುವ ಆಂಬುಲೆನ್ಸ್ ಸಂಚಾರಕ್ಕೆ ತಡೆಯಾಗುತ್ತಿದೆ. ಬುಧವಾರ ಇಂತಹದೆ ಘಟನೆ ನಡೆದಿದ್ದು ತುರ್ತಾಗಿ ಆಗಮಿಸಿದ ನಗು-ಮಗು ವಾಹನಕ್ಕೆ ಆರೋಗ್ಯ ಕೇಂದ್ರದ ಒಳ ಹೋಗಲು ಸಾಧ್ಯವಾಗದೆ ಗೇಟಿನ ಮುಂಬದಿಯಲ್ಲೇ ನಿಲ್ಲಿಸಲಾಯಿತು.

ಖಾಸಗಿ ವಾಹನಗಳ ನಿಲುಗಡೆ ಈ ಸಮಸ್ಯೆಗೆ ಕಾರಣವಾಗಿತ್ತು. ಪರಿಸ್ಥಿತಿ ಮನಗಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಗ್ಯ ಕೇಂದ್ರದ ಒಳಗೆ ನಿಲ್ಲಿಸಿದ್ದ ವಾಹನಗಳಿಗೆ ದಂಡ ವಿಧಿಸಿ ಕ್ರಮ ಕೈಗೊಂಡರು.

ಈ ಸಂದರ್ಭ ಮಾಹಿತಿ ನೀಡಿದ ವೃತ್ತ ನಿರೀಕ್ಷಕ ಪಿ.ಕೆ.ರಾಜು, ಆರೋಗ್ಯ ಕೇಂದ್ರದ ಒಳಗೆ ನಿಲ್ಲಿಸುವ ಖಾಸಗಿ ವಾಹನಗಳಿಗೆ ದಂಡ ವಿಧಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.