ಸೋಮವಾರಪೇಟೆ, ಜೂ. 19: ಶನಿವಾರಸಂತೆ ಸಮೀಪದ ಗೋಪಾಲಪುರ ಸಂತ ಅಂಥೋಣಿ ದೇವಾಲಯದ ಪ್ರಾರ್ಥನಾ ಮಂದಿರದ ಸಲಹಾ ಸಮಿತಿ ಸದಸ್ಯ ವಿನ್ಸೆಂಟ್ ಲೋಬೋ ಅವರು ಚರ್ಚ್‍ನ ಧರ್ಮಗುರುಗಳು ಹಾಗೂ ಪ್ರಾರ್ಥನಾ ಮಂದಿರಕ್ಕೆ ಕೆಟ್ಟ ಹೆಸರು ತರಿಸುವ ಉದ್ದೇಶದಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿದೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಹೆನ್ರಿ ಪಿರೇರಾ ಅವರು, ಗೋಪಾಲಪುರದಲ್ಲಿ ನಿರ್ಮಾಣವಾಗಿರುವ ಸಂತ ಅಂತೋಣಿಯವರ ದೇವಾಲಯದ ಖರ್ಚು ವೆಚ್ಚಗಳ ಲೆಕ್ಕಪತ್ರವನ್ನು ಪ್ರಾರ್ಥನಾ ಮಂದಿರದಲ್ಲಿ ಮಾಹಿತಿ ಫಲಕಗಳ ಮೂಲಕ ಅಳವಡಿಸಲಾಗಿದೆ. ಇದರೊಂದಿಗೆ ಪ್ರತಿ ಭಾನುವಾರದ ಪ್ರಾರ್ಥನಾ ಸಮಯದಲ್ಲಿ ಎಲ್ಲಾ ಭಕ್ತರಿಗೂ ಮಾಹಿತಿ ನೀಡಲಾಗಿದೆ. ಎಲ್ಲಾ ವ್ಯವಹಾರಗಳೂ ಪಾರದರ್ಶಕವಾಗಿಯೇ ನಡೆದಿದೆ. ಆದರೆ ದುರುದ್ದೇಶದಿಂದ ವಿನ್ಸೆಂಟ್ ಲೋಬೋ ಅವರು ಈ ವಿಷಯವನ್ನು ಸಾರ್ವಜನಿಕಗೊಳಿಸುತ್ತಿದ್ದಾರೆ ಎಂದು ದೂರಿದರು.
ಈ ಭಾಗದ ಕ್ರೈಸ್ತ ಸಮುದಾಯದವರು ಹಾಗೂ ಸಾರ್ವಜನಿಕರ ಸಹಕಾರದಿಂದ ನೂತನ ಪ್ರಾರ್ಥನಾ ಮಂದಿರ ನಿರ್ಮಾಣವಾಗಿದ್ದು, ಇದಕ್ಕೆ ತಗುಲಿದ ಖರ್ಚುವೆಚ್ಚಗಳ ಸಂಪೂರ್ಣ ಮಾಹಿತಿಯಲ್ಲಿ ಚರ್ಚ್‍ನ ಫಾದರ್ ಜಾನ್ ಸಗಾಯ್ ಪುಷ್ಪರಾಜ್ ಅವರು ಭಕ್ತಾದಿಗಳಿಗೆ ನೀಡಿದ್ದಾರೆ. ಆಡಿಟ್ ಪ್ರತಿಗಳನ್ನು ಧರ್ಮಾಧ್ಯಕ್ಷರಿಗೂ ಕಳುಹಿಸಲಾಗಿದೆ ಎಂದರು.
ಈ ಹಿಂದೆ ಗೇಟ್ ಅಳವಡಿಸುವ ವಿಚಾರದಲ್ಲಿ ಧರ್ಮಗುರುಗಳು ವಿನ್ಸೆಂಟ್ ಲೋಬೋ ಅವರ ಮೇಲೆ ಪೊಲೀಸ್ ಠಾಣೆಯಲ್ಲಿ ಪುಕಾರು ನೀಡಿದ್ದರು. ಇದರೊಂದಿಗೆ ಚರ್ಚ್‍ನ ಕೆಲಸವನ್ನು ಇವರ ಕಡೆಯವರಿಗೆ ನೀಡಿಲ್ಲ ಎಂಬ ಕಾರಣಕ್ಕೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ಗೋಷ್ಠಿಯಲ್ಲಿ ಸಲಹಾ ಸಮಿತಿಯ ಪದಾಧಿಕಾರಿಗಳಾದ ಸಿಸ್ಟರ್ ಸರಳಾ, ಆಲ್ವಿನ್ ರೊಜಾರಿಯೋ, ಬೇಬಿ ವರ್ಗೀಸ್, ಫ್ರಾನ್ಸಿಸ್ ಡಿಸೋಜ ಸೇರಿದಂತೆ ಇತರರು ಉಪಸ್ಥಿತರಿದ್ದರು.