ಸುಂಟಿಕೊಪ್ಪ, ಮೇ 9: ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪಕ್ಕೆ ಆದ್ಯತೆ ಕಲ್ಪಿಸಿಕೊಡಿ ಎಂದು ನಾಕೂರು ಶಿರಂಗಾಲ ಗ್ರಾಮಸ್ಥರು ವಿಶೇಷ ಗ್ರಾಮ ಸಭೆಯಲ್ಲಿ ಬೇಡಿಕೆ ಮುಂದಿಟ್ಟರು. ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ 2016-17ನೇ ಸಾಲಿನ ವಿಶೇಷ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷೆ ರಂಜನಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಮ್ಮ ಗ್ರಾಮ ಯೋಜನೆ ಕೇಂದ್ರ ಸರಕಾರ ಪ್ರತೀ ಗ್ರಾಮದಲ್ಲಿನ ಮೂಲಭೂತ ಸೌಕರ್ಯ ಕಲ್ಪಿಸಲು ಇಂತಿಷ್ಟು ಅನುದಾನ ಎಂಬ ಗುರಿ ನೀಡದೆ ಅಭಿವೃದ್ಧಿಗೆ ಒತ್ತು ನೀಡುತ್ತಿದೆ ಕರ್ನಾಟಕ ಸರಕಾರಕ್ಕೆ ಈ ಯೋಜನೆಯಡಿ ಈಗಾಗಲೇ 10,000ಕೋಟಿ ಹಣ ಕೇಂದ್ರ ಬಿಡುಗಡೆ ಮಾಡಿದೆ. ಜನಸಂಖ್ಯೆ ಅನುಸಾರ ನಮ್ಮ ಗ್ರಾ.ಪಂ.ಗೆ 64 ಲಕ್ಷ ರೂ. ಲಭ್ಯವಾಗಲಿದೆ. ಗ್ರಾಮಸ್ಥರು ಎಲ್ಲಾ ವಿಭಾಗಗಳಲ್ಲಿ ಆಗಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಬೇಕು. 5 ವರ್ಷಗಳಲ್ಲಿ ಆದ್ಯತೆ ಮೇರೆ ಕಾಮಗಾರಿ ನಡೆಯಲಿದೆ. ಅನುದಾನ ವೆಚ್ಚವಾದ ನಂತರ ಮತ್ತಷ್ಟೂ ಅಭಿವೃದ್ಧಿ ಕೆಲಸಕ್ಕೂ ಅನುದಾನ ಸಿಗಲಿದೆ ಗ್ರಾ.ಪಂ. ಕ್ರಿಯಾ ಯೋಜನೆ ತಯಾರಿಸಿ ಕಳುಹಿಸಿ ಕೊಡಬೇಕಾಗಿರುವದರಿಂದ ಕಾಮಗಾರಿಯ ವಿವರ ನೀಡುವಂತೆ ಪಿಡಿಓ ಬೈರಪ್ಪ ಸಭೆಗೆ ತಿಳಿಸಿದರು.

ಕುಡಿಯಲು ನೀರಿಲ್ಲ: ನಾಕೂರು ಶಿರಂಗಾಲದ ನಮ್ಮ 3 ಮನೆಗೆ ಕುಡಿಯುವ ನೀರು ಸಿಗುತ್ತಿಲ್ಲ ಕಾರಣವೇನು? ನೀರು ಸರಬರಾಜು ಮಾಡುವವನ ನಿರ್ಲಕ್ಷ್ಯವೇ ಕಾರಣ ಎಂದು ಶಾಂತು ದಯಾ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ನೀರು ಕೊಡದಿದ್ದರೆ ಹೋರಾಟ ಮಾಡಲಾಗುವದು ಎಂದರು.

ಸದಸ್ಯ ವಸಂತಕುಮಾರ್ ಮಾತನಾಡಿ ಕುಡಿಯುವ ನೀರು ಅಲ್ಲಿ ಎಲ್ಲರಿಗೂ ನೀಡಲಾಗುತ್ತದೆ, ವಾಟರ್‍ಮೇನ್ ತಪ್ಪಿದ್ದರೆ ಆತನನ್ನು ವಿಚಾರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಕೊಳವೆ ಬಾವಿ ಪರವಾನಗಿ: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯಲ್ಲಿ ಕೊಳೆವೆ ಬಾವಿ ಸನಿಹದಲ್ಲೇ ಖಾಸಗಿಯವರಿಗೆ ಕೊಳವೆಬಾವಿ ತೆಗೆಯಲು ಅನುಮತಿಯನ್ನು ನೀಡಿರುವದರಿಂದ ಅಂತರ್‍ಜಲ ಕುಸಿದಿದ್ದು ಕುಡಿಯಲು ನೀರು ಸಿಗುತ್ತಿಲ್ಲ. ಆದರೆ ಖಾಸಗಿ ಕಾಫಿ ಬೆಳೆಗಾರರು ತೋಟಕ್ಕೆ ಕೊಳೆವೆ ಬಾವಿಯಿಂದ ನೀರು ಹಾಯಿಸುತ್ತಿದ್ದಾರೆ. ಆದರೆ ಪಂಚಾಯಿತಿಯವರು ಏನು ಕ್ರಮಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರಾದ ಪೊನ್ನು ಗಂಭೀರ ಆರೋಪ ಮಾಡಿದರು. ಸದಸ್ಯ ವಸಂತ,ಬಿಜು ಅವರುಗಳು ವೈಯಕ್ತಿಕ ವಿಷಯ ಪ್ರಸ್ತಾಪ ಮಾಡುವದು ಬೇಡ ಎಂದಾಗ ಮಾತಿನ ಚಕಮಕಿ ನಡೆದು ಸಭೆ ಗೊಂದಲದ ಗೂಡಾಯಿತು.

ಅರಣ್ಯ ಇಲಾಖೆ ನಿರ್ಲಕ್ಷ್ಯ: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಎಮ್ಮೆಗುಂಡಿ ಸೇರಿದಂತೆ ಇನ್ನಿತರ ವಾರ್ಡ್‍ಗಳಲ್ಲಿ ವಸತಿ ಪ್ರದೇಶ ರಸ್ತೆಗೆ ಹೊಂದಿಕೊಂಡಂತೆ ಅಪಾಯದ ಅಂಚಿನಲ್ಲಿ ಹಲವು ಮರಗಳಿದ್ದು, ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಯವರಿಗೆ ಮನವಿ ಮಾಡಲಾಗಿದ್ದರೂ ಮರಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಕ್ರಮ ಕೈಗೊಳ್ಳದಿದ್ದು ಮುಂದೇನಾದರು ಅನಾಹುತ ಸಂಭವಿಸಿದರೆ ಯಾರು ಹೊಣೆ? ಅಲ್ಲದೆ ಅಭಿವೃದ್ಧಿ ಕಾರ್ಯಗಳಿಗೂ ತೊಡಕಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ನೋಡಲ್ ಅಧಿಕಾರಿ ಕೃಷಿ ಇಲಾಖೆಯ ಬಿ.ಎಸ್.ಬೋಪಯ್ಯ ಮಾತನಾಡಿ ‘ನಮ್ಮ ಗ್ರಾಮ ನಮ್ಮ ಯೋಜನೆ' ಕ್ರಿಯಾ ಯೋಜನೆ ತಯಾರಿಸಿ ಸರಕಾರಕ್ಕೆ ಕಳುಹಿಸಿಕೊಡ ಬೇಕಾಗಿರುವದರಿಂದ ಗ್ರಾಮಸ್ಥರು ಆಸಕ್ತಿ ವಹಿಸಿ ಮೂಲಭೂತ ಸೌಕರ್ಯದ ಮಾಹಿತಿ ನೀಡುವಂತೆ ಹೇಳಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಕುಮುದಾ ಧರ್ಮಪ್ಪ ಮಾತನಾಡಿ, ಜಿಲ್ಲಾ ಪಂಚಾಯಿತಿ ಅನುದಾನ ಸರಕಾರದ ಅನುದಾನವನ್ನು ತರುವ ಮೂಲಕ ಗ್ರಾಮದ ಮೂಭೂತ ಸಮಸ್ಯೆಗಳನ್ನು ನಿವಾರಿಸುವದಾಗಿ ಅಲ್ಲದೆ ಕುಡಿಯುವ ನೀರಿನ ಸಮಸ್ಯೆಗೆ ಅಗತ್ಯ ಕ್ರಮ ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದರು.

ಅಧ್ಯಕೆÀ್ಷ ರಂಜನಿ ಮಾತನಾಡಿ, ನಮ್ಮ ಗ್ರಾಮದ ಅಭಿವೃದ್ಧಿಗೆ ಸಾಕಾಗುವಷ್ಟು ಅನುದಾನ ನಮ್ಮ ಗ್ರಾಮ -ನಮ್ಮ ಯೋಜನೆಯಡಿ 5 ವರ್ಷದಲ್ಲಿ ಸಿಗಲಿದೆ ಅದಕ್ಕಾಗಿ ಮೂಲಭೂತ ಸೌಕರ್ಯ ಸಕಲ ಪಟ್ಟಿ ಪಂಚಾಯಿತಿಗೆ ಒದಗಿಸಿಕೊಡಿ ಎಂದು ಹೇಳಿದರು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಯಶೋದÀ, ಪಿಡಿಓ ಬೈರಪ್ಪ, ಕಾರ್ಯದರ್ಶಿ ನಿಶಾ, ಗ್ರಾ.ಪಂ.ಸದಸ್ಯರುಗಳಾದ ಬಿಜು, ವಸಂತ, ಅಂಬೆಕಲ್ ಚಂದ್ರಶೇಖರ್, ಸತೀಶ, ಚೆನ್ನಮ್ಮ, ರಾಣಿ ಉಪಸ್ಥಿತರಿದ್ದರು.