ಕುಶಾಲನಗರ, ಜೂ 14: ಅಖಿಲ ಭಾರತ ಸನ್ಯಾಸಿ ಸಂಘ, ಅಣ್ಣೈ ಕಾವೇರಿ ರಿವರ್ ಪ್ರೊಟೆಕ್ಷನ್ ಟ್ರಸ್ಟ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ‘ಕಾವೇರಿ ಬಚಾವೋ’ ಆಂದೋಲನ ಅಂಗವಾಗಿ ಹಮ್ಮಿಕೊಳ್ಳಲಾದ ಪಾದಯಾತ್ರೆಗೆ ತಾ. 15 ರಂದು (ಇಂದು) ಬೆಳಿಗ್ಗೆ 8.30 ಕ್ಕೆ ತಲಕಾವೇರಿಯಲ್ಲಿ ಚಾಲನೆ ದೊರೆಯಲಿದೆ.

ತಲಕಾವೇರಿಯಿಂದ ಪೂಂಪ್‍ಹಾರ್ ತನಕ ನಡೆಯಲಿರುವ ಪಾದಯಾತ್ರೆಯಲ್ಲಿ ಅಖಿಲ ಭಾರತ ಸನ್ಯಾಸಿ ಸಂಘದ ಪ್ರಮುಖರಾದ ಶ್ರೀ ರಮಾನಂದ ಸ್ವಾಮೀಜಿ ನೇತೃತ್ವದಲ್ಲಿ 5 ಸಾಧು ಸಂತರು ಸೇರಿದಂತೆ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಎರಡು ತಿಂಗಳ ಕಾಲ ಅಂದಾಜು 1300 ಕಿ.ಮೀ. ದೂರದ ಅಂತರವನ್ನು ಪಾದಯಾತ್ರೆ ಮೂಲಕ ಕ್ರಮಿಸಲಿದ್ದು, ಈ ಸಂದರ್ಭ ಕಾವೇರಿ ನದಿಯ ವಾಸ್ತವ ಸ್ಥಿತಿಗತಿ, ನದಿ ತಟದ ಗ್ರಾಮಗಳ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆಹಾಕುವದರೊಂದಿಗೆ ನದಿ ಕಲುಷಿಕೆ ತಪ್ಪಿಸಲು ಜನಜಾಗೃತಿ ಮೂಡಿಸುವದು ಈ ಮೂಲಕ ಸಂಗ್ರಹಿಸಿದ ದಾಖಲೆಗಳನ್ನು ಕರ್ನಾಟಕ-ತಮಿಳುನಾಡು ಸರಕಾರಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸರಕಾರದ ಪ್ರಧಾನ ಮಂತ್ರಿಗಳಿಗೆ ನಿಯೋಗ ತೆರಳಿ ನದಿ ರಕ್ಷಣೆ ಹಾಗೂ ನದಿ ತಟಗಳ ಅಭಿವೃದ್ಧಿ ಬಗ್ಗೆ ಮನವಿ ಸಲ್ಲಿಸಲಾಗುವದು ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ.

ಪಾದಯಾತ್ರೆ ತಲಕಾವೇರಿಯಿಂದ ಭಾಗಮಂಡಲ ಮೂಲಕ ಅಯ್ಯಂಗೇರಿ, ನಾಪೋಕ್ಲು, ಬಲಮುರಿ, ನೆಲ್ಲಿಹುದಿಕೇರಿ, ನಂಜರಾಯಪಟ್ಟಣ, ಕುಶಾಲನಗರ ಮೂಲಕ ಕಣಿವೆ, ಕೊಣನೂರು ಮಾರ್ಗವಾಗಿ ಸಾಗಲಿದೆ. ಜಿಲ್ಲೆಯಲ್ಲಿ 5 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ಇಂದು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ನಂತರ ಗಿಡ ನೆಡುವ ಮೂಲಕ ಯಾತ್ರೆಗೆ ಚಾಲನೆ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಪಾದಯಾತ್ರೆ ವಿವರ

ತಾ. 15 ರಂದು ತಲಕಾವೇರಿಯಿಂದ ಭಾಗಮಂಡಲ, ಅಯ್ಯಂಗೇರಿಯಲ್ಲಿ ವಾಸ್ತವ್ಯ, ತಾ. 16 ರಂದು ನಾಪೋಕ್ಲುವಿನಲ್ಲಿ ವಾಸ್ತವ್ಯ, ತಾ. 17 ರಂದು ಬಲಮುರಿಯಲ್ಲಿ ವಾಸ್ತವ್ಯ, ತಾ. 18 ರಂದು ನೆಲ್ಲಿಹುದಿಕೇರಿ, ತಾ. 19 ರಂದು ನಂಜರಾಯಪಟ್ಟಣ, ತಾ. 20 ರಂದು ಕುಶಾಲನಗರದಲ್ಲಿ ಕಾವೇರಿ ನದಿಗೆ 54ನೇ ಮಹಾ ಆರತಿ ಬೆಳಗುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಣಿವೆಯಲ್ಲಿ ವಾಸ್ತವ್ಯ ನಂತರ ಹಾಸನ ಜಿಲ್ಲೆಯತ್ತ ಪಾದಯಾತ್ರೆ ಮುಂದುವರೆಯಲಿದೆ.