ವೀರಾಜಪೇಟೆ, ಜು. 18: ವಿಜಯನಗರದ ಒಂದನೇ ಹಂತದಲ್ಲಿ ಜಾನ್ ಎಂಬವರ ಮನೆಯಲ್ಲಿ ಸುಣ್ಣ ಬಳಿಯುತ್ತಿದ್ದಾಗ ಕಾರ್ಮಿಕ ಬಸವನ ಗೌಡ (48) ಎಂಬಾತನಿಗೆ ವಿದ್ಯುತ್ ಸ್ಪರ್ಶಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ ಕುರಿತು ಇಲ್ಲಿನ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಘಟನೆ ಬೆಳಿಗ್ಗೆ 10-30ರ ಸಮಯದಲ್ಲಿ ಸಂಭವಿಸಿದ್ದು, ಬಸವನ ಗೌಡ ಮನೆಯ ಹೊರಗಡೆ ಗೋಡೆಗೆ ಏಣಿ ಹತ್ತಿ ಸುಣ್ಣ ಬಳಿಯುತ್ತಿದ್ದಾಗ ಆಕಸ್ಮಿಕವಾಗಿ ಏಣಿ ಜಾರಿದೆ. ಈ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಹೊದಿಕೆ ಕಳಚಿಕೊಂಡಿದ್ದ ಸಿಲ್ವರ್‍ನ ಸರ್ವಿಸ್ ವಯರ್‍ನ್ನು ಹಿಡಿದ ಪರಿಣಾಮ ವಿದ್ಯುತ್ ಸ್ಪರ್ಶಗೊಂಡು ಆತ ಸಾವನ್ನಪ್ಪಿದನೆಂದು ಹೇಳಲಾಗಿದೆ.

ಮೃತ ಬಸವನ ಗೌಡ ಮೂಲತಃ ಕೆ.ಆರ್. ನಗರ ಬಳಿಯ ಕೀರನ ಹಳ್ಳಿಯ ನಿವಾಸಿಯಾಗಿದ್ದು, ಕೂಲಿ ಕೆಲಸದ ನಿಮಿತ್ತ ವೀರಾಜಪೇಟೆಗೆ ಬಂದಿದ್ದನು ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ವಿಜಯನಗರದ ಜಾನ್ ಎಂಬವರ ಮನೆಯಲ್ಲಿ ಕಳೆದ ಎಂಟು ವರ್ಷಗಳಿಂದ ಬಾಡಿಗೆಗೆ ಒಪ್ಪಂದದ ಆಧಾರದಲ್ಲಿ ವಾಸಿಸುತ್ತಿದ್ದು ಬೆಳಿಗ್ಗೆ 9.30 ರ ಸಮಯದಲ್ಲಿ ಬಸವನಗೌಡ ಸಾವನ್ನಪ್ಪಿದ್ದರೂ ಜಾನ್ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ತನಗೆ ಅಪರಾಹ್ನ 1 ಗಂಟೆಗೆ ತಿಳಿಸಿದರು. ಮೃತ ದೇಹವನ್ನು ಬೆಳಿಗ್ಗೆ 10 ಗಂಟೆಗೆ ಯಾರಿಗೂ ತಿಳಿಯದಂತೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ನಂತರ ತಡವಾಗಿ ಶವಾಗಾರಕ್ಕೆ ಸಾಗಿಸಲಾಯಿತು. ಮನೆಯ ಮಾಲೀಕರು ಗಂಡನ ಸಾವಿನ ಬಗ್ಗೆ ಸರಿಯಾದ ಮಾಹಿತಿ ನೀಡದ್ದರಿಂದ ಇದು ಸಂಶಯಾಸ್ಪದ ಸಾವು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಹದೇವಮ್ಮ ನಗರ ಪೊಲೀಸರಿಗೆ ದೂರು ನೀಡಿದ ನಂತರ ಸರ್ಕಲ್ ಇನ್ಸ್‍ಪೆಕ್ಟರ್ ಶಾಂತಮಲ್ಲಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತ ದೇಹದ ಮಹಜರು ನಡೆಸಿದರು. ನಂತರ ಅಲ್ಲಿಯೇ ಇದ್ದ ಮಹದೇವಮ್ಮ ಹಾಗೂ ಸಂಬಂಧಿಕರ ವಿಚಾರಣೆ ನಡೆಸಿದರು.