ಕುಶಾಲನಗರ, ಜೂ. 8: ಯುವಕರನ್ನು ಸಂಘಟಿಸುವ ಮೂಲಕ ಸಮಾಜದಲ್ಲಿ ಅನ್ಯಾಯ ಕ್ಕೊಳಗಾದವರಿಗೆ ನ್ಯಾಯ ಒದಗಿಸಿ ಕೊಡುವ ನಿಟ್ಟಿನಲ್ಲಿ ದಿಟ್ಟ ಹೋರಾಟ ಕೈಗೊಳ್ಳಲಾಗುವದೆಂದು ಜಯ ಕರ್ನಾಟಕ ಸಂಘಟನೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಕರೆ ನೀಡಿದರು.

ಕುಶಾಲನಗರದಲ್ಲಿ ನಡೆದ ಸಂಘಟನೆಯ ನಗರ ಘಟಕ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಉತ್ತಮ ಸಮಾಜ ನಿರ್ಮಾಣದಲ್ಲಿ ಯುವ ಸಮೂಹದ ಪಾತ್ರ ಅತಿ ಮುಖ್ಯವಾಗಿದೆ. ರಾಜಕೀಯೇತರ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸಮಾಜದಲ್ಲಿನ ಅನಾಚಾರ, ಭ್ರಷ್ಟಾಚಾರಗಳ ವಿರುದ್ಧ ಹೋರಾಡಬೇಕಿದೆ ಎಂದರು.

ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ನಾರಾಯಣ ಮಾತನಾಡಿ, ರಾಜ್ಯದಲ್ಲಿ ಏಕರೂಪ ಸಮಾನ ಶಿಕ್ಷಣ ನೀತಿ ಜಾರಿಯಾಗ ಬೇಕೆಂಬದು ಸಂಘಟನೆಯ ಪ್ರಮುಖ ಆಶಯವಾಗಿದೆ. ಇದಕ್ಕಾಗಿ ಹಲವಾರು ರೀತಿಯ ಹೋರಾಟಗಳನ್ನು ಕೂಡ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಸುಮಾರು 2950 ಸರಕಾರಿ ಶಾಲೆಗಳು ಮುಚ್ಚುವ ಹಂತ ತಲಪಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸುವ ಕುರಿತು ಜಾಗೃತಿ ಕಾಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜೊತೆಗೆ ಪರಿಸರ ಸಂರಕ್ಷಣೆ ಕುರಿತಾಗಿಯೂ ನಾಗರಿಕರು ಚಿಂತನೆ ಹರಿಸಬೇಕಾಗಿದೆ ಎಂದರು.

ಸಂಘಟನೆಯ ಜಿಲ್ಲಾಧ್ಯಕ್ಷ ರಾಬಿನ್ ಕುಟ್ಟಪ್ಪ ಪ್ರಾಸ್ತಾವಿಕ ನುಡಿಗಳಾಡಿದರು.

ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್‍ಗೌಡ, ಕೊಡಗು ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹೆಚ್.ಎನ್. ಮುರಳೀಧರ್ ಮತ್ತು ಸೋಮವಾರ ಪೇಟೆ ತಾಲೂಕು ಅಧ್ಯಕ್ಷ ಸತೀಶ್ ಶೆಟ್ಟಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕುಶಾಲನಗರ ನಗರ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ಮೋಹನ್ ಹಾಗೂ ಸೋಮವಾರಪೇಟೆ ತಾಲೂಕು ಮಾಧ್ಯಮ ವಕ್ತಾರರಾಗಿ ನೇಮಕಗೊಂಡ ಜಯಪ್ರಕಾಶ್ ಅವರಿಗೆ ಸಂಘಟನೆಯ ಬಾವುಟ ನೀಡುವ ಮೂಲಕ ಸ್ವಾಗತಿಸಲಾಯಿತು.

ವೇದಿಕೆಯಲ್ಲಿ ವೀರಾಜಪೇಟೆ ಘಟಕದ ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ, ಕುಶಾಲನಗರ ಯುವ ಘಟಕದ ಅಧ್ಯಕ್ಷ ಡೀಜೇಶ್ ಇದ್ದರು.