ಮಡಿಕೇರಿ, ಜೂ.8 : ಸುದರ್ಶನ ಬಡಾವಣೆಯ ನಿವಾಸಿ ರಂಗಯ್ಯ ಎಂಬವರ ಪುತ್ರ ಸಂದೀಪ್ ಕುಮಾರ್ ಮೇಲೆ ಮಡಿಕೇರಿ ನಗರ ಠಾಣೆಯ ಪೊಲೀಸರು ವಿನಾಕಾರಣ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧ ಸಂಸ್ಥೆಯ ರಾಜ್ಯ ಕಾರ್ಯದರ್ಶಿಗಳಾದ ಬಬ್ಬಿರ ಸರಸ್ವತಿ ನಗರ ಠಾಣಾಧಿಕಾರಿಗಳಿಗೆ ದೂರು ನೀಡಿ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.

ಮೇ 31 ರಂದು ಬಿಳಿಗೇರಿಯ ಕೆಲವು ಯುವಕರು ನಗರದ ಚೈನ್‍ಗೇಟ್ ಬಳಿ ಸಂದೀಪ್ ಕುಮಾರ್ ಜೊತೆ ಕಲಹ ನಡೆಸಿದ್ದು, ಈ ಬಗ್ಗೆ ದೂರು ನೀಡಲು ಬಂದಾತನ ಮೇಲೆಯೇ ಕೆಲವು ಪೊಲೀಸರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಗಾಯಗಳಿಂದ ಒಳ ರೋಗಿಯಾಗಿ ಸಂದೀಪ್ ಕುಮಾರ್ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ಬಬ್ಬಿರ ಸರಸ್ವತಿ ಆರೋಪಿಸಿದ್ದಾರೆ. ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಸಂಸ್ಥೆಗೆ ಬಂದ ದೂರಿನ ಹಿನ್ನೆಲೆ ನಗರ ಠಾಣಾಧಿಕಾರಿಗಳಿಗೆ ಲಿಖಿತ ದೂರನ್ನು ನೀಡಿ ತಪ್ಪಿತಸ್ಥ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ಮುಂದಿನ ಎರಡು ದಿನಗಳೊಳಗೆ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಒಂದು ವೇಳೆ ಹಲ್ಲೆಗೊಳಗಾದ ಸಂದೀಪ್ ಕುಮಾರ್‍ಗೆ ನ್ಯಾಯ ಸಿಗದಿದ್ದಲ್ಲಿ ಸಂಸ್ಥೆಯ ಮೂಲಕ ಕಾನೂನು ಹೋರಾಟ ನಡೆಸುವದಾಗಿ ಸರಸ್ವತಿ ಎಚ್ಚರಿಕೆ ನೀಡಿದ್ದಾರೆ.