ಮಡಿಕೇರಿ, ಜ. 26: ಪ್ರಜಾಪ್ರಭುತ್ವ ಬಲಪಡಿಸಲು 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನ ಮಾಡುವಂತಾಗಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಸ್ಟರ್ ಆರ್.ಕೆ.ಜಿ. ಎಂ.ಎಂ. ಮಹಾಸ್ವಾಮೀಜಿ ಕರೆ ನೀಡಿದ್ದಾರೆ. ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಮತದಾನದ ಮೂಲಕ ಸಾರ್ವಭೌಮತ್ವವನ್ನು ನೀಡಲಾಗಿದ್ದು, ಚುನಾವಣಾ ಸಂದರ್ಭದಲ್ಲಿ ತಮ್ಮ ಹಕ್ಕು ಚಲಾಯಿಸುವಂತಾಗಬೇಕು. ಮತದಾನ ಕಾನೂನು ಬದ್ಧ ಹಕ್ಕಾಗಿದ್ದು, ಇದನ್ನು 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಗುರುತಿನ ಚೀಟಿ ಪಡೆದು ಮತವನ್ನು ನಿಷ್ಪಕ್ಷಪಾತವಾಗಿ ಚಲಾಯಿಸುವಂತಾಗಬೇಕು ಎಂದು ಹೇಳಿದರು.

ಜಿಲ್ಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುವಂತಾಗಬೇಕು ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ಅವರು ಮಾತನಾಡಿ, ಯುವ ಜನತೆ ಯಾವದೇ ಆಮಿಷಕ್ಕೆ ಒಳಗಾಗದೆ ಮುಕ್ತ ಮತ್ತು ನಿರ್ಭೀತವಾಗಿ ಮತ ಚಲಾವಣೆ ಮಾಡಬೇಕು ಎಂದು ಕರೆ ನೀಡಿದರು. ಭಾಗಮಂಡಲ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ಚುನಾವಣಾ ಮಾಸ್ಟರ್ ತರಬೇತಿದಾರ ಕೆ.ಜೆ. ದಿವಾಕರ ಪ್ರಾಸ್ತಾವಿಕವಾಗಿ ಮಾತನಾಡಿ, “ಯುವ ಮತ್ತು ಭಾವಿ ಮತದಾರರ ಸಬಲೀಕರಣ 7ನೇ ರಾಷ್ಟ್ರೀಯ ಮತದಾರರ ದಿನಾಚರಣೆ” ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಮೊದಲ ಬಾರಿಗೆ ಮತದಾರರಾಗಿ ನೋಂದಾವಣೆಯಾಗಿರುವವರಿಗೆ ಗುರುತಿನ ಕಾರ್ಡ್(ಎಪಿಕ್)ನ್ನು ಸಭೆಯಲ್ಲಿ ವಿತರಿಸಲಾಯಿತು. ಸಭೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು. ಮಡಿಕೇರಿ ತಾಲ್ಲೂಕಿಗೆ ಲೀಲಾವತಿ, ಸೋಮವಾರಪೇಟೆ ಬಿಎಲ್‍ಒ ಹೆಚ್.ಪಿ. ಬಸವರಾಜು ಹಾಗೂ ವೀರಾಜಪೇಟೆ ಬಿಎಲ್‍ಒ ಎಂ.ಕೆ. ಹರೀಶ ಇವರಿಗೆ ನೀಡಿ ಗೌರವಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ತಹಶೀಲ್ದಾರರಾದ ಕುಸುಮ, ಚುನಾವಣಾ ಶಿರಸ್ತೆದಾರರಾದ ಪ್ರಕಾಶ್, ಅನಿಲ್ ಕುಮಾರ್, ಸಿನೋಜ್, ಮತ್ತಿತರರು ಇದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಸ್ವಾಗತಿಸಿದರು. ಸಂತ ಜೋಸೆಫರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಡಿದರು. ಉಪನ್ಯಾಸಕ ಕೆ.ಜೆ. ದಿವಾಕರ ನಿರೂಪಿಸಿ, ವಂದಿಸಿದರು.