ಮಡಿಕೇರಿ, ಜ. 26: ದಿಡ್ಡಳ್ಳಿಯಲ್ಲಿ ನೆಲೆ ನಿಂತಿರುವ ನಿರಾಶ್ರಿತರಿಗೆ ಮುಂದಿನ 10 ದಿನಗಳ ಒಳಗೆ ನಿವೇಶನ ಹಂಚಲು ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಹಾಗೂ ಎ.ಕೆ.ಸುಬ್ಬಯ್ಯ ಅವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಹೋರಾಟವನ್ನು ಮತ್ತೊಮ್ಮೆ ದಿಡ್ಡಳ್ಳಿಯಿಂದ ಆರಂಭಿಸುವದಾಗಿ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಡಿ.ಎಸ್. ನಿರ್ವಾಣಪ್ಪ, ಡಿ.23 ರಂದು ಪಾಲಿಬೆಟ್ಟದಲ್ಲಿ ಜೆ.ಎ. ಕರುಂಬಯ್ಯ ಅವರ ನೆÉೀತೃತ್ವದಲ್ಲಿ ನಡೆದ ಸಭೆಗೆ ಆಕ್ಷೇಪ ವ್ಯಕ್ತಪಡಿಸಿದರು. ವಿಚಾರ ಸಂಕಿರಣ ನಡೆಸುವ ಮೂಲಕ ತೆಗೆದುಕೊಂಡಿರುವ 6 ನಿರ್ಣಯಗಳಿಗೆ ವಿರೋಧ ವ್ಯಕ್ತಪಡಿಸಿದ ನಿರ್ವಾಣಪ್ಪ ದಿಡ್ಡಳ್ಳಿಯಲ್ಲಿ ನಿವೇಶನ ನೀಡಬೇಡಿ ಎಂದು ಒತ್ತಾಯಿಸಲು ಇವರು ಯಾರೆಂದು ಪ್ರಶ್ನಿಸಿದರು. ಕೊಡಗಿನಲ್ಲಿರುವ ನಿವೇಶನ ರಹಿತರಿಗೆ ನಿವೇಶನವನ್ನು ಒದಗಿಸಲು ಸರ್ಕಾರ ಇವರ ಅನುಮತಿ ಪಡೆಯಬೇಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಯ್ ಡೇವಿಡ್, ಜೆ.ಪಿ. ರಾಜು ಹಾಗೂ ಜೆ.ಕೆ. ರಾಮು ಅವರುಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನಿರ್ವಾಣಪ್ಪ, ಕಳೆದ 30 ವರ್ಷಗಳಿಂದ ಆದಿವಾಸಿಗಳ ಹೆಸರಿನಲ್ಲಿ ವಿದೇಶಿ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು. ರಾಯ್ ಡೇವಿಡ್ ಅವರು ಆದಿವಾಸಿಗಳಿಗಾಗಿ ಖರ್ಚು ಮಾಡಿರುವ ಹಣದ ಬಗ್ಗೆ ಮಾಹಿತಿ ನೀಡಲಿ ಎಂದು ಒತ್ತಾಯಿಸಿದರು. ದಿಡ್ಡಳ್ಳಿಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆಯೆಂದು ಆರೋಪಿ ಸುತ್ತಿರುವವರು ಇದನ್ನು ಸಾಬೀತು ಪಡಿಸಲಿ ಎಂದು ನಿರ್ವಾಣಪ್ಪ ಸವಾಲೆಸೆದರು.

ಭೂ ಮಾಲೀಕರು ಮತ್ತು ಉಳ್ಳವರ ಪರ ಇರುವವರು ದಿಡ್ಡಳ್ಳಿಯಲ್ಲಿ ನಿರಾಶ್ರಿತರಿಗೆ ನಿವೇಶನ ನೀಡಬಾರ ದೆಂದು ಒತ್ತಡ ಹೇರುತ್ತಿದ್ದಾರೆ. ಇದೀಗ ಅರಣ್ಯ ಪೈಸಾರಿ ಎಂದು ಹೇಳಲಾಗುತ್ತಿರುವ ಪ್ರದೇಶದಲ್ಲೇ ಕೆಲವರು ನಿವೇಶನವನ್ನು ಹೊಂದಿದ್ದಾರೆ. ಅಲ್ಲದೆ ಆ ಭಾಗದಲ್ಲಿ ಸಾಕಷ್ಟು ಜಾಗ ಒತ್ತುವರಿಯಾಗಿದೆ. ಇದನ್ನು ಪ್ರಶ್ನಿಸುವ ಧೈರ್ಯವನ್ನು ತೋರದವರು ನಿವೇಶನ ರಹಿತರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ ನಿರ್ವಾಣಪ್ಪ, ದಿಡ್ಡÀಳ್ಳಿಯಲ್ಲೆ ನಿವೇಶನ ರಹಿತರಿಗೆ ಭೂಮಿ ನೀಡಬೇಕೆಂದು ಒತ್ತಾಯಿಸಿದರು.

ಸಮಿತಿ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ, ಸುಳ್ಳು ಆರೋಪಗಳನ್ನು ಮಾಡುವ ಮೂಲಕ ದಿಡ್ಡಳ್ಳಿ ಹೋರಾಟವನ್ನು ಮೊಟಕು ಗೊಳಿಸಲು ಷಡ್ಯಂತ್ರ ನಡೆಯುತ್ತಿದೆ ಯೆಂದು ಆರೋಪಿಸಿದರು. ಕಾನೂನಾತ್ಮಕ ಚೌಕಟ್ಟಿನಲ್ಲಿ ಹೋರಾಟ ನಡೆಸುತ್ತಿರುವದರಿಂದ ಸರಕಾರ 1 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಹಿಂದಿನ ಐಜಿ ಹಾಗೂ ಈಗ ಇರುವ ನೂತನ ಐಜಿ ಅವರು ದಿಡ್ಡಳ್ಳಿಯಲ್ಲಿ ನಕ್ಸಲ್ ಚಟುವಟಿಕೆ ಇಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನು ಮುಖ್ಯಮಂತ್ರಿಗಳು ಬಹಿರಂಗವಾಗಿ ಹೇಳಬೇಕೆಂದು ಅಮಿನ್ ಮೊಹಿಸಿನ್ ಒತ್ತಾಯಿಸಿದರು. ನೈಜ ಆದಿವಾಸಿಗಳಿಗೆ ನಿವೇಶನ ನೀಡಿ ಎಂದು ಒತ್ತಾಯಿಸುತ್ತಿರುವವರ ಬಳಿ ನೈಜ ಆದಿವಾಸಿಗಳ ಪಟ್ಟಿ ಇದೆಯೇ ಎಂದು ಪ್ರಶ್ನಿಸಿದರು. ಉಳ್ಳವರು ಒತ್ತುವರಿ ಮಾಡಿಕೊಂಡಿರುವ ಅರಣ್ಯ ಪ್ರದೇಶವನ್ನು ಮೊದಲು ತೆರವುಗೊಳಿಸಲಿ ಎಂದು ಅಮಿನ್ ಮೊಹಿಸಿನ್ ಆಗ್ರಹಿಸಿದರು.

ಜೆ.ಕೆ.ಅಪ್ಪಾಜಿ ಮಾತನಾಡಿ, ಆದಿವಾಸಿ ಅರಣ್ಯ ಹಕ್ಕು ಮಸೂದೆ ಜಾರಿ ಸಂದರ್ಭ ಅಧಿಕಾರಿಗಳು ಆದಿವಾಸಿಗಳನ್ನು ಅತಂತ್ರಗೊಳಿಸಲು ಕುತಂತ್ರ ನಡೆಸಿ ಇಕ್ಕಟ್ಟಿನಲ್ಲಿ ಸಿಲುಕಿ ಸಿದ್ದಾರೆ ಎಂದು ಆರೋಪಿಸಿದರು. ಆದಿವಾಸಿಗಳ ಬಗ್ಗೆ ಇದೀಗ ಕರುಣೆ ತೋರುತ್ತಿರುವ ನಂದಾ ಸುಬ್ಬಯ್ಯ ಅವರು ಇಷ್ಟು ದಿನ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ವಸಂತ, ಸ್ವಾಮಿ ಹಾಗೂ ಮುತ್ತಮ್ಮ ಉಪಸ್ಥಿತರಿದ್ದರು.