ಗೋಣಿಕೊಪ್ಪಲು, ಜ.25 : ಹಾಕಿ ಕೂರ್ಗ್ ಆಶ್ರಯದಲ್ಲಿ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಪಾಲಂದೀರ ಅಪ್ಪಯ್ಯ ಸ್ಮಾರಕ ಮಹಿಳಾ ಹಾಕಿ ಲೀಗ್‍ನಲ್ಲಿ ಅದಿತಿ ಟ್ಯಾಂಜಿರಿನೆಸ್ ಹಾಗೂ ನಾಲ್ನಾಡ್ ಇಲೆವೆನ್ ತಂಡಗಳು ಫೈನಲ್‍ಗೆ ಪ್ರವೇಶ ಪಡೆದಿವೆ.ಅದಿತಿ ಟ್ಯಾಂಜಿರಿನೆಸ್ ಹಾಗೂ ಭಗವತಿ ಸ್ಪೋಟ್ರ್ಸ್ ಕ್ಲಬ್ ನಡುವೆ ನಡೆದ ಮೊದಲ ಸೆಮಿ ಫೈನಲ್‍ನಲ್ಲಿ ಅದಿತಿ ಟ್ಯಾಂಜರಿನೆಸ್ ಗೋಲ್ಡನ್ ಗೋಲ್ ಮೂಲಕ 4-3 ಗೋಲುಗಳ ಜಯ ಸಾಧಿಸಿತು.ಡ್ರಾ ಫಲಿತಾಂಶದಿಂದಾಗಿ ಟೈಬ್ರೇಕರ್‍ನಲ್ಲಿ 3-3 ಗೋಲುಗಳ ಫಲಿತಾಂಶ ನೀಡಿತು. ಟೈಬ್ರೇಕರ್‍ನಲ್ಲಿ ಅದಿತಿ ಪರ ಎಸ್.ಪಿ. ಭವ್ಯ, ರಶ್ಮಿ ಹಾಗೂ ಹೀಮಾ ಜಾರ್ಜ್ ಗೋಲು ಹೊಡೆದರು. ಭಗವತಿ ಪರ ಬಿ. ಬಿ. ಕೃತಿಕಾ, ರೇಷ್ಮಾ, ಶ್ರೀ ರಕ್ಷ ಗೋಲು ಬಾರಿಸಿದರು.

ಸಡನ್ ಡೆತ್‍ನಲ್ಲಿ ಅದಿತಿ ಪರ ರಶ್ಮಿ ಭಾರಿಸಿದ ಗೋಲ್ಡನ್ ಗೋಲ್‍ನಿಂದಾಗಿ 4-3 ಗೋಲುಗಳ ಅಂತರದಿಂದ ಜಯಿಸಿ ಫೈನಲ್‍ಗೆ ಪ್ರವೇಶ ಪಡೆದರು. ಅದಿತಿಗೆ 3, ಭಗವತಿ ತಂಡಕ್ಕೆ 4 ಪೆನಾಲ್ಟಿ ಕಾರ್ನರ್ ದೊರೆಕಿತು.

ಎರಡನೇ ಸೆಮಿಫೈನಲ್‍ನಲ್ಲಿ ನಾಲ್ನಾಡ್ ಇಲೆವೆನ್ ತಂಡ ಕೋರಲ್ ವಾಟರ್ಸ್ ತಂಡವನ್ನು 3-1 ಗೋಲುಗಳಿಂದ ಸೋಲಿಸಿ ಫೈನಲ್‍ಗೆ ಲಗ್ಗೆ ಇಟ್ಟಿತು. ನಾಲ್ನಾಡ್ ಪರ 9 ನೇ ನಿಮಿಷದಲ್ಲಿ ಕಾವೇರಮ್ಮ, 34 ನೇ ನಿಮಿಷದಲ್ಲಿ ಚರಿಷ್ಮಾ, 56 ನೇ ನಿಮಿಷದಲ್ಲಿ ನಿತ್ಯಾ ಗೋಲು ಹೊಡೆದರು.

ಕೋರಲ್‍ಗೆ 5 ಪೆನಾಲ್ಟಿ ಕಾರ್ನರ್, ನಾಲ್ನಾಡ್‍ಗೆ ದೊರೆತ 3 ಪೆನಾಲ್ಟಿ ಕಾರ್ನರ್‍ನಲ್ಲಿ 1 ಗೋಲಾಗಿ ಪರಿವರ್ತಿತವಾಯಿತು.

ತಾಂತ್ರಿಕ ನಿರ್ದೇಶಕರಾಗಿ ನೆಲ್ಲಮ್ಕಕಡ ಪವನ್, ತೀರ್ಪುಗಾರ ರಾಗಿ ಬೊಳ್ಳಚಂಡ ನಾಣಯ್ಯ, ಮೂಕಚಂಡ ನಾಚಪ್ಪ, ಕೊಂಡೀರ ಕೀರ್ತಿ, ಮೊಣ್ಣಪ್ಪ, ತಾಂತ್ರಿಕ ನಿರ್ವಹಣೆಯನ್ನು ದರ್ಶನ್ ದೇವಯ್ಯ, ವಿನೋದ್ ಹಾಗೂ ಅರುಣ್ ನಿರ್ವಹಿಸಿದರು.