ಗೋಣಿಕೊಪ್ಪಲು, ಸೆ. 12: ವೀರಾಜಪೇಟೆ ತಾಲೂಕು ಛಾಯಾಚಿತ್ರ ಗ್ರಾಹಕರ ಸಂಘದ ವತಿಯಿಂದ ಇಲ್ಲಿನ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಛಾಯಾಚಿತ್ರ ಪ್ರದರ್ಶನದಲ್ಲಿ ಸಾವಿರಾರು ಬಗೆಯ ಛಾಯಾಚಿತ್ರ ಗಳು ಪ್ರದರ್ಶನಗೊಂಡವು. ಛಾಯಾ ಗ್ರಾಹಕರು ತಮ್ಮದೇ ಚಿಂತನೆಯಲ್ಲಿ ತೆಗೆದ ಚಿತ್ರಗಳು ಗಮನ ಸೆಳೆದವು. ಮದುವೆ ಹಾಗೂ ಮಳೆಗಾಲ ಎಂಬ ವಿಷಯದಲ್ಲಿ ಛಾಯಾಚಿತ್ರ ಪ್ರದರ್ಶನ ಮತ್ತು ಪೈಪೋಟಿ ನಡೆದವು. ಹಿಂದಿನಿಂದಲೂ ಬಳಕೆ ಮಾಡಿಕೊಂಡು ಬರುತ್ತಿದ್ದ ಕ್ಯಾಮೆರಾ, ಆಲ್ಬಮ್‍ಗಳು ಪ್ರದರ್ಶನ ಗೊಂಡವು.

ಛಾಯಾಗ್ರಾಹಕ ಗೋಣಿಕೊಪ್ಪದ ಜುಬೇರ್ ಅವರ ಚಿತ್ರಕ್ಕೆ ಪ್ರಥಮ ಬಹುಮಾನ, ಮೂರ್ನಾಡುವಿನ ನಾಗರಾಜು ಅವರ ಚಿತ್ರಕ್ಕೆ ದ್ವಿತೀಯ ಬಹುಮಾನ ಲಭಿಸಿತು. ಪ್ರದರ್ಶನ ವನ್ನು ವೃತ್ತ ನಿರೀಕ್ಷಕ ಪಿ.ಕೆ. ರಾಜು ಉದ್ಘಾಟಿಸಿದರು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಹಿರಿಯ ಛಾಯಾಚಿತ್ರ ಗ್ರಾಹಕರು ಗಳಾದ ಎಸ್.ಎಲ್. ಶಿವಣ್ಣ, ಮೂಕಳೇರ ಲಕ್ಷ್ಮಣ್, ಕೆ.ಪಿ. ರಾಮ್‍ಶಂಕರ್ ಹಾಗೂ ಆನಂದ್ ಅವರುಗಳನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾರ್ವಜನಿಕರನ್ನು ಸನ್ಮಾನಿಸಿ, ಪ್ರೋತ್ಸಾಹಿಸಲಾಯಿತು. ಶಿಕ್ಷಕ ಜಾಜಿ, ವೃತ್ತ ನಿರೀಕ್ಷಕ ಪಿ.ಕೆ. ರಾಜು, ವ್ಯಾಪಾರಿ ಉಂಬಾಯಿ, ವೈದ್ಯಕೀಯ ವಿಭಾಗದಲ್ಲಿ ಡಾ. ಎ.ಸಿ. ಗಣಪತಿ, ಕ್ರೀಡೆಯಲ್ಲಿ ರಂಶಾದ್ ಅವರು ಸನ್ಮಾನ ಸ್ವೀಕರಿಸಿದರು. ಛಾಯಾಚಿತ್ರ ಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ಡಾಡು, ತಾಲೂಕು ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ರಾಜ ಉಪಸ್ಥಿತರಿದ್ದರು.