ಸೋಮವಾರಪೇಟೆ,ನ.2: ವಿವಾದಕ್ಕೆ ಕಾರಣವಾಗಿರುವ ರಾಜ್ಯ ಸರ್ಕಾರದ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಸೋಮವಾರಪೇಟೆ ತಾಲೂಕು ಪಂಚಾಯಿತಿಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ಟಿಪ್ಪು ಬಗ್ಗೆ ಬಿಸಿ ಬಿಸಿ ಚರ್ಚೆ ನಡೆದು ಅಧ್ಯಕ್ಷೆ ಹಾಗೂ ಜೆಡಿಎಸ್‍ನ ಓರ್ವ ಸದಸ್ಯೆ ತಟಸ್ಥರಾಗುಳಿದರೆ, ತಾ.ಪಂ. ನಿರ್ಣಯಕ್ಕೆ ಕಾಂಗ್ರೆಸ್‍ನ ಮೂವರು ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸದಸ್ಯರ ವಿರೋಧದ ನಡುವೆಯೂ ತಾ.ಪಂ.ನಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿ ಸದಸ್ಯರು ಒಕ್ಕೊರಲಿನಿಂದ ಟಿಪ್ಪು ಜಯಂತಿ ಆಚರಣೆಯ ವಿರುದ್ಧ ಅಭಿಪ್ರಾಯ ಮಂಡಿಸಿ, ಅಂತಿಮವಾಗಿ ವಿರೋಧಿ ನಿರ್ಣಯ ಕೈಗೊಳ್ಳಲಾಯಿತು. 19 ಸದಸ್ಯ ಬಲದಲ್ಲಿ 13 ಮಂದಿ ಸದಸ್ಯರು ಟಿಪ್ಪು ಜಯಂತಿ ವಿರುದ್ಧವಾಗಿ ಕೈ ಎತ್ತಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪ ರಾಜೇಶ್ ಅಧ್ಯಕ್ಷತೆಯಲ್ಲಿ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿಶೇಷ ಸಭೆ ನಡೆಯಿತು. ಕಳೆದ ಬಾರಿ ಟಿಪ್ಪು ಜಯಂತಿ ಸಂದರ್ಭ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಗಲಭೆಗಳು ನಡೆದಿದ್ದು ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ಕೊಡಗಿನ ಐನ್‍ಮನೆಗಳು, ದೇವಾಲಯಗಳು ಟಿಪ್ಪುವಿನ ಕ್ರೌರ್ಯಕ್ಕೆ ಸಾಕ್ಷಿಯಾಗಿ ನಿಂತಿವೆ. ಕೊಡಗಿನ ಜನತೆಗೆ ಸಾಕಷ್ಟು ಅನ್ಯಾಯವೆಸಗಿರುವ ಟಿಪ್ಪು ಜಯಂತಿ ಆಚರಣೆಯನ್ನು ಕೊಡಗಿನಲ್ಲಿ ನಡೆಸುವದು ಬೇಡ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಸಭೆಯ ಗಮನಕ್ಕೆ ತಂದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸದಸ್ಯೆ ತಂಗಮ್ಮ ಅವರು ತಮ್ಮ ವಿರೋಧವೂ ಇದೆ ಎಂದರು.
ಈ ಸಂದರ್ಭ ಎದ್ದುನಿಂತ ಕಾಂಗ್ರೆಸ್ ಸದಸ್ಯ ಸತೀಶ್, ನೀವು ಸ್ವತಃ ಶಿಕ್ಷಕಿಯಾಗಿ ಶಾಲಾ ದಿನಗಳಲ್ಲಿ ಟಿಪ್ಪುವಿನ ಬಗ್ಗೆ ವಿದ್ಯಾರ್ಥಿಗಳಿಗೆ ಬೋಧಿಸಿದ್ದೀರಿ. ಈಗ ವಿರೋಧಿ ಸುತ್ತಿದ್ದೀರಿ ಎಂದು ಕಾಲೆಳೆದರು. ಸಾಮ್ರಾಜ್ಯ ಕಟ್ಟಿಕೊಂಡು ರಾಜರಾಗಿದ್ದ ವರ ಆಚರಣೆ ಸರ್ಕಾರದಿಂದ ಬೇಡ. ಕಳೆದ ಬಾರಿ ಸಾವುನೋವು ಸಂಭವಿಸಿದೆ. ಮುಂದೆ ಇಂತಹ ಅಹಿತಕರ ಘಟನೆ ನಡೆಯಬಾರದು ಎಂದು ತಂಗಮ್ಮ ಹೇಳಿದರು. ಟಿಪ್ಪು ಓರ್ವ ಸ್ವಾತಂತ್ರ್ಯ ಹೋರಾಟಗಾರ ಎಂದು ಮತ್ತೋರ್ವ ಸದಸ್ಯ ಅನಂತ್‍ಕುಮಾರ್ ಹೇಳಿದರು.
ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಉಪಾಧ್ಯಕ್ಷ ಅಭಿಮನ್ಯುಕುಮಾರ್, 1799ರಲ್ಲಿ ಟಿಪ್ಪು ಮರಣವನ್ನಪ್ಪಿದ. ಭಾರತದ ಇತಿಹಾಸದಲ್ಲಿ 1857ರಲ್ಲಿ ನಡೆದಿರುವದೇ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಉಲ್ಲೇಖಿಸಲಾಗಿದೆ. ಹಾಗಾದರೆ ಭೂತ ಬಂದು ಸ್ವಾತಂತ್ರ್ಯ ಹೋರಾಟ ಮಾಡಿತಾ? ಎಂದು ಮರುಪ್ರಶ್ನಿಸಿದರು.
ಟಿಪ್ಪು ಜಯಂತಿ ಆಚರಣೆಗೆ ಕೇವಲ ಒಂದು ವರ್ಗ ಮಾತ್ರ ವಿರೋಧ ವ್ಯಕ್ತಪಡಿಸುತ್ತಿದೆ. ಗೌಡರು, ಅರೆಭಾಷೆ ಗೌಡರು, ಇತರ ಸಮುದಾಯದವರು ವಿರೋಧಿಸುತ್ತಿಲ್ಲ ಎಂದರು. ಆ ಒಂದು ವರ್ಗ ಟಿಪ್ಪುವಿನಿಂದ ಹೆಚ್ಚಿನ ಕ್ರೌರ್ಯಕ್ಕೆ ತುತ್ತಾಗಿದೆ. ಟಿಪ್ಪುವಿನ ಕರಾಳ ಇತಿಹಾಸ ತಿಳಿದು ಇದೀಗ ಎಲ್ಲಾ ಸಮುದಾಯಗಳೂ ವಿರೋಧಿಸುತ್ತಿವೆ ಎಂದು ಅಭಿಮನ್ಯು ಹೇಳಿದರು.
ಪವಿತ್ರ ಖುರಾನ್‍ನಲ್ಲೂ ಜಯಂತಿ ಆಚರಣೆಗೆ ಅವಕಾಶವಿಲ್ಲ. ಮುಸ್ಲಿಂ ಸಮಾಜದ ಹಲವರು ಈ ಬಗ್ಗೆ ವಿರೋಧಿಸಿದ್ದಾರೆ ಎಂದು ಅಭಿಮನ್ಯು ಸಭೆಯಲ್ಲಿ ಹೇಳಿದರು. ಹಾಗಾದರೆ ಮುಸ್ಲಿಂರ ತಲಾಕ್‍ನ್ನು ಯಾಕೆ ವಿರೋಧಿಸುತ್ತಿದ್ದೀರಿ ಎಂದು ಅನಂತ್‍ಕುಮಾರ್ ಪ್ರಶ್ನಿಸಿದರು. ನೀವು ವಿಷಯಾಂತರ ಮಾಡುವದು ಬೇಡ; ತಲಾಕ್ ಬಗ್ಗೆ ಮುಸ್ಲಿಂ ಹೆಣ್ಣು ಮಕ್ಕಳನ್ನು ಕೇಳಿ. ಅವರೇ ನಿಮಗೆ ಉತ್ತರಿಸುತ್ತಾರೆ ಎಂದು ಅಭಿಮನ್ಯುಕುಮಾರ್ ಹೇಳಿದರು.
ಟಿಪ್ಪು ಜಯಂತಿ ಆಚರಣೆಗೆ ಸರ್ಕಾರ ಮುಂದಾದರೆ ಉಗ್ರ ಹೋರಾಟ ನಡೆಸಲಾಗುವದು ಎಂದು ಸದಸ್ಯ ಕುಶಾಲಪ್ಪ ಹೇಳಿದರು. ತಾವು ಪ್ರತಿನಿಧಿಸುವ ತಾ.ಪಂ. ಕ್ಷೇತ್ರದಲ್ಲಿ 4 ಸಾವಿರಕ್ಕೂ ಅಧಿಕ ಮುಸ್ಲಿಂ ಮತದಾರರಿದ್ದು, ಅವರುಗಳೇ ಟಿಪ್ಪುವಿನ ಆಚರಣೆ ಬೇಡ, ಸುಖಾಸುಮ್ಮನೆ ಸಂಘರ್ಷಕ್ಕೆ ಎಡೆಮಾಡಿದಂತಾಗುತ್ತದೆ ಎಂದು ಹೇಳುತ್ತಿದ್ದಾರೆ ಎಂದು ಸುಂಟಿಕೊಪ್ಪ ಕ್ಷೇತ್ರದ ಸದಸ್ಯೆ ವಿಮಲಾವತಿ ಹೇಳಿದರು.
ಟಿಪ್ಪು ವಿಚಾರದ ಪರ ಹಾಗೂ ವಿರೋಧದ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಭಾರೀ ಚರ್ಚೆ ನಡೆಯಿತು. ಸರಕಾರದ ಕಾರ್ಯಕ್ರಮವನ್ನು ವಿರೋಧಿಸುವ ಹಕ್ಕು ಆಡಳಿತ ಮಂಡಳಿಗೆ ಇಲ್ಲ. ಚುನಾಯಿತ ಜನಪ್ರತಿನಿಧಿಗಳು ಸರಕಾರದ ಆದೇಶವನ್ನು ವಿರೋಧಿಸ ಬಾರದು. ಮುಂದೆ ಅನುದಾನಕ್ಕೆ ತೊಡಕಾಗುತ್ತದೆ. ಸದಸ್ಯತ್ವವೂ ರದ್ದಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ತಾ.ಪಂ.ನಿಂದ ಟಿಪ್ಪು ಜಯಂತಿ ವಿರೋಧಿ ನಿರ್ಣಯ ಕೈಗೊಳ್ಳಲು ನಮ್ಮ ಸಹಮತ ಇಲ್ಲ ಎಂದು ಕಾಂಗ್ರೆಸ್ ಸದಸ್ಯರಾದ ಬಿ.ಬಿ. ಸತೀಶ್ ಸಭೆಗೆ ಹೇಳಿದರು.
ಇವರ ಹೇಳಿಕೆಗೆ ಕಾಂಗ್ರೆಸ್ ಸದಸ್ಯ ಅನಂತಕುಮಾರ್, ಸುಹಾದ ಅಶ್ರಫ್ ಸಹಮತ ವ್ಯಕ್ತಪಡಿಸಿದರು. ಪಂಚಾಯಿತಿ ಅಧ್ಯಕ್ಷರಾದ ಪುಷ್ಪ ರಾಜೇಶ್ ಮತ್ತು ಜೆಡಿಎಸ್ ಸದಸ್ಯರಾದ ಕುಸುಮ ಅವರುಗಳು ಈ ಸಂದರ್ಭ ಮೌನಕ್ಕೆ ಶರಣಾಗಿದ್ದರು. ಈ ಬಗ್ಗೆ ಉಪಾಧ್ಯಕ್ಷರು ಪ್ರಶ್ನಿಸಿದ ಸಂದರ್ಭ, ನಾವು ಪರವೂ ಇಲ್ಲ;ವಿರೋಧವೂ ಇಲ್ಲ ಎಂದರು.
ಬಿಜೆಪಿ ಸದಸ್ಯರಾದ ತಂಗಮ್ಮ, ಧರ್ಮಪ್ಪ, ಸಬಿತಾ ಚನ್ನಕೇಶವ, ಸವಿತ ಈರಪ್ಪ, ಜಯಣ್ಣ, ಕುಶಾಲಪ್ಪ, ಲೀಲಾವತಿ, ವಿಜು ಚಂಗಪ್ಪ, ವಿಮಲಾವತಿ, ಆರ್. ಪುಷ್ಪ, ಮಣಿ, ಗಣೇಶ್ ಅವರುಗಳು ಟಿಪ್ಪು ಜಯಂತಿ ವಿರೋಧಿ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದರು.
ಕಳೆದ ಬಾರಿ ತಾ.ಪಂ. ಸಭಾಂಗಣದಲ್ಲಿ ಟಿಪ್ಪು ಜಯಂತಿ ಆಚರಿಸಿದ ಸಂದರ್ಭ ಉಂಟಾದ ಘರ್ಷಣೆಯಲ್ಲಿ ಕಟ್ಟಡಕ್ಕೆ ಹಾನಿಯಾಗಿತ್ತು. ಇರದ ದುರಸ್ತಿಗೆ ಸರ್ಕಾರ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ ಎಂದು ಅಭಿಮನ್ಯುಕುಮಾರ್ ಹೇಳಿದರು. ಈ ಬಾರಿ ಟಿಪ್ಪು ಜಯಂತಿಗೆ ಸಭಾಂಗಣ ಸೇರಿದಂತೆ ತಾ.ಪಂ.ನ ಯಾವ ಕಟ್ಟಡವನ್ನೂ ನೀಡದಂತೆ ಸರ್ವ ಸದಸ್ಯರು ನಿರ್ಣಯ ಕೈಗೊಂಡರು.
ಸಭೆಯ ಪ್ರಾರಂಭದಲ್ಲಿ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿರುವದಕ್ಕೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಅಪ್ಪಚ್ಚು ರಂಜನ್ ಮತ್ತು ಜನಪ್ರತಿನಿಧಿಗಳಿಗೆ ತಾಲೂಕು ಪಂಚಾಯಿತಿ ವತಿಯಿಂದ ಅಭಿ ನಂದನಾ ನಿರ್ಣಯ ಕೈಗೊಳ್ಳಲಾಯಿತು.
ಇದೇ ಸಂದರ್ಭ ಕೊಡ್ಲಿಪೇಟೆ, ಶನಿವಾರಸಂತೆ ವ್ಯಾಪ್ತಿಯಲ್ಲಿ ಬರಗಾಲ ಹೆಚ್ಚಾಗಿ ಆವರಿಸಿಕೊಂಡಿದ್ದು, ಕುಡಿಯುವ ನೀರಿನ ಅಭಾವ ಎದುರಾಗಿದೆ. ಈ ಭಾಗಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದ ಮೇರೆಗೆ ನಿರ್ಣಯವನ್ನು ಕೈಗೊಂಡು ಸರಕಾರಕ್ಕೆ ಕಳುಹಿಸುವಂತೆ ತೀರ್ಮಾನಿಸಲಾಯಿತು.
ಎಲ್ಲಾ ಸದಸ್ಯರ ಆಸ್ತಿ ಘೋಷಣೆ ಬಗ್ಗೆ ಚುನಾವಣಾ ಆಯೋಗ ನೋಟೀಸ್ ನೀಡಿದ್ದು, ಈ ಬಗ್ಗೆ ಮಾಹಿತಿ ನೀಡುವಲ್ಲಿ ತಾ.ಪಂ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕಾರ್ಯನಿರ್ವ ಹಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.
ದೂರವಾಣಿ ಮೂಲಕ ವಿರೋಧ: ವಿಶೇಷ ಸಾಮಾನ್ಯ ಸಭೆಗೆ ಗೈರಾಗಿದ್ದ ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರು ಸಭೆ ನಡೆಯುತ್ತಿದ್ದಂತೆ ಅಧ್ಯಕ್ಷೆ, ಉಪಾಧ್ಯಕ್ಷರಿಗೆ ಮೊಬೈಲ್ ಕರೆ ಮಾಡಿ ಟಿಪ್ಪು ಜಯಂತಿ ಆಚರಣೆಗೆ ತಮ್ಮ ವಿರೋಧವಿದೆ ಎಂದು ತಿಳಿಸಿದರು. ಇಷ್ಟಕ್ಕೆ ಸುಮ್ಮನಾಗದ ಅವರು ಪತ್ರಕರ್ತರಿಗೂ ಕರೆ ಮಾಡಿ ‘ತುರ್ತು ಕೆಲಸ ನಿಮಿತ್ತ ಸಭೆಗೆ ಬಂದಿಲ್ಲ;ಬಂದಿದ್ರೆ ಅಲ್ಲೇ ಮಾತಾಡ್ತ ಇದ್ದೆ. ಟಿಪ್ಪು ಜಯಂತಿಗೆ ನನ್ನ ತೀವ್ರ ವಿರೋಧ ಇದೆ’ ಎಂದರು.