ಮಡಿಕೇರಿ ಆ.30 : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಾಲೆಗಳಲ್ಲಿ ಅಡುಗೆ ಕಾರ್ಯವನ್ನು ಸ್ಥಗಿತಗೊಳಿಸಿ ಸೆ.2 ರಂದು ಪ್ರತಿಭಟನೆ ನಡೆಸಲು ಅಕ್ಷರ ದಾಸೋಹದ ನೌಕರರು ನಿರ್ಧರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು)ದ ಜಿಲ್ಲಾ ಕಾರ್ಯದರ್ಶಿ ಕುಸುಮ ಮಾತನಾಡಿ, ಅಕ್ಷರ ದಾಸೋಹದ ನೌಕರರು ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದು, ನೌಕರರ ಬೇಡಿಕೆಗಳ ಬಗ್ಗೆ ಸರಕಾರದ ಗಮನ ಸೆಳೆÉಯುವದಕ್ಕಾಗಿ ಸೆ.2 ರಂದು ನಡೆಯುತ್ತಿರುವ ದೇಶ ವ್ಯಾಪಿ ಸಾರ್ವತ್ರಿಕ ಮುಷ್ಕರದ ಸಂದರ್ಭ ಅಕ್ಷರ ದಾಸೋಹದ ನೌಕರರು ಕೂಡ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎಂದರು.ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಿರಂತರವಾಗಿ ಕಾರ್ಯ ನಿರ್ವಹಿಸುವ ನೌಕರರಿಗೆ ಕೇವಲ 2 ಸಾವಿರ ರೂ. ವೇತನ ನೀಡಲಾಗುತ್ತಿದೆ. ಇದೀಗ ಕ್ಷೀರ ಭಾಗ್ಯ ಯೋಜನೆಯ ಹೊರೆಯೂ ನೌಕರರ ಮೇಲಿರುವದಲ್ಲದೆ, ಎಸ್‍ಡಿಎಂಸಿ ಪ್ರಮುಖರಿಂದ, ಶಿಕ್ಷಕರಿಂದ ಹಾಗೂ ಸಿಆರ್‍ಪಿಗಳಿಂದಲೂ ಒತ್ತಡವನ್ನು ಎದುರಿಸಬೇಕಾಗಿದೆ. ಪಡಿತರ ಸಾಮಗ್ರಿಗಳ ಕಳ್ಳತನದ ಆರೋಪ ಇತ್ಯಾದಿ ಕಿರುಕುಳಗಳು ನಡೆಯುತ್ತಿದೆ. 26 ವಿದ್ಯಾರ್ಥಿಗಳಿಗೆ ಒಬ್ಬ ಅಡುಗೆಯವರೆಂದು ನಿಯಮ ಜಾರಿ ಮಾಡಿ, ಕಳೆÀದ 14 ವರ್ಷಗಳಿಂದ ದುಡಿಯುತ್ತಿದ್ದ ನೌಕರರನ್ನು ಕೈಬಿಡುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ. ಅಡುಗೆ ಮಾಡುವ ಸಂದರ್ಭ ಅನಾಹುತಗಳು ಸಂಭವಿಸಿದರೆ ಸೂಕ್ತ ಚಿಕಿತ್ಸೆಯನ್ನು ನೀಡದೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಹೆಚ್ಚುವರಿ ಕೆಲಸ ನಿರ್ವಹಿಸಿದರೆ, ಅದಕ್ಕೆ ಸರಿ ಸಮಾನವಾದ ಹೆಚ್ಚುವರಿ ವೇತನವನ್ನು ನೀಡುತ್ತಿಲ್ಲ. ಅಡುಗೆಯ ಸಂಪೂರ್ಣ ಜವಾಬ್ದಾರಿಯನ್ನು ಅಕ್ಷರ ದಾಸೋಹದ ನೌಕರರಿಗೆ ನೀಡದೆ ಶಾಲೆಯ ಮುಖ್ಯೋಪಾಧ್ಯಾಯರು ಹಸ್ತಕ್ಷೇಪ ಮಾಡುವ ಪ್ರಸಂಗ ಎದುರಾಗಿದೆಯೆಂದು ಕುಸುಮ ಆರೋಪಿಸಿದರು.

ಕನಿಷ್ಟ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜಿಲ್ಲೆಯ 510 ಶಾಲೆಗಳ 1,044 ನೌಕರರು ಅಂದು ಕಾರ್ಯವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿರುವದಾಗಿ ತಿಳಿಸಿದರು.

ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆದು ಹಾಕುವ ಕ್ರಮ ನಿಲ್ಲಬೇಕು, ರೂ. 18,000 ವೇತನ ನೀಡಬೇಕು, ಬಿಸಿಯೂಟ ನೌಕರರಿಗೆ ಭವಿಷ್ಯ ನಿಧಿ ನೀಡಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ಕ್ರಮ ಕೈಗೊಳ್ಳಬೇಕು, ಅಡುಗೆ ಸಿಬ್ಬಂದಿಯವರನ್ನು ಆರೋಪಗಳ ಆಧಾರದಲ್ಲಿ ಕೆಲಸದಿಂದ ತೆಗೆದು ಹಾಕುವ ಕ್ರಮ ನಿಲ್ಲಬೇಕು, ದಸರಾ, ವಿವಿಧ ಜಯಂತಿ ಹಾಗೂ ಬೇಸಿಗೆ ರಜೆ ದಿನಗಳಲ್ಲಿ ಸಂಪೂರ್ಣ ವೇತನ ನೀಡಬೇಕು, ಹೆರಿಗೆ ರಜೆ, ಹೆರಿಗೆ ಭತ್ಯೆ ನೀಡಬೇಕು, ರಾಷ್ಟ್ರೀಯ ಸ್ವಸ್ತ ಭೀಮಾ ಯೋಜನೆ (ಆರ್.ಎಸ್.ಬಿ.ವೈ) ಜಾರಿ ಮಾಡಬೇಕು, ಯಾವದೇ ಶಾಲೆಗಳನ್ನು ಖಾಸಗೀಕರಣ ಮಾಡಬಾರದು, ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಸಾರ್ವತ್ರಿಕ ಪಡಿತರ ವಿತರಣಾ ವ್ಯವಸ್ಥೆ ಜಾರಿ ಮಾಡಬೇಕು ಎಂದು ಸಂಘ ಒತ್ತಾಯಿಸಿದೆ.

ಗೋಷ್ಠಿಯಲ್ಲಿ ಉಪ ಕಾರ್ಯದರ್ಶಿ ನಾಗಮ್ಮ, ಸೋಮವಾರಪೇಟೆ ಅಧ್ಯಕ್ಷೆ ಕಾವೇರಿ, ಮಡಿಕೆÉೀರಿ ಅಧ್ಯಕ್ಷೆ ಪಿ.ಡಿ. ತುಳಸಿ ಹಾಗೂ ಕಾರ್ಯದರ್ಶಿ ಬಿ.ಪಿ. ತುಳಸಿ ಉಪಸ್ಥಿತರಿದ್ದರು.