ಸುಂಟಿಕೊಪ್ಪ, ಡಿ. 14: ಕೊಡಗು ಜಿಲ್ಲಾ ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಜಿಲ್ಲಾ ಮಟ್ಟದ ಕೋಟಿ ಚೆನ್ನಯ್ಯ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಿತು.
ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ಕ್ರೀಡಾಕೂಟ ಸಮಾರೋಪ ಸಮಾರಂಭವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿ ಮಾತನಾಡಿ, ಬಿಲ್ಲವ ಸಮಾಜದ ಕ್ರೀಡಾಕೂಟ ಆಯೋಜಿಸುವದರಿಂದ ಒಂದೆಡೆ ಒಟ್ಟಾಗಿ ಸೇರಿ ಬಾಂಧÀವ್ಯ ಬೆಸೆಯಲು, ಆಚಾರ-ವಿಚಾರ, ಸಂಸ್ಕøತಿಯನ್ನು ಪರಿಚಯಿಸಲು ಸಹಕಾರಿಯಾಗಲಿದೆ. ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಆರ್ಥಿಕ ಸಬಲೀಕರಣ ಕಂಡುಕೊಳ್ಳಬೇಕೆಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಕಠಿಣ ಪರಿಶ್ರಮದಿಂದ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ಗುರುತಿಸಿ ಕೊಂಡಿರುವ ಬಿಲ್ಲವ ಜನಾಂಗದವರು ಸ್ವಾಭಿಮಾನದಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ. ಯಾವದೇ ಸಮಾಜ ಅಭಿವೃದ್ಧಿಯಾಗಬೇಕಾದರೆ ಅವರ ಆಚಾರ-ವಿಚಾರ, ಪದ್ಧತಿಗಳನ್ನು ಚಾಚು ತಪ್ಪದೆ ಪಾಲಿಸಿ-ಪೋಷಿಸಿ, ಬೆಳೆಸಿದರೆ ದೇಶಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸಿದಂತಾಗುತ್ತದೆ ಎಂದರು.
ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಶೋಷಿತ ವರ್ಗದವರು ಸಂಘಟಿತರಾದರೆ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಸಹಕಾರಿಯಾಗಲಿದೆ. ಸಮಾಜದಲ್ಲಿ ಒಗ್ಗಟ್ಟಿನಿಂದ ಸಮಾಜಮುಖಿ ಕೆಲಸ ಮಾಡುವ ಮೂಲಕ ಶ್ರೀ ನಾರಾಯಣ ಗುರುಗಳ ಆದರ್ಶ ಮೂಲಕ ತತ್ವಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದರು.
ಮಂಗಳೂರಿನ ಕುದ್ರೋಳಿ ಶ್ರೀ ನಾರಾಯಣ ಗುರು ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಬಿ. ಕೇಶವ ಬಂಗೇರ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿ, ಬಿಲ್ಲವರು ಸಶಕ್ತ ಸಮಾಜದತ್ತ ದಾಪುಗಾಲು ಹಾಕುತ್ತಿರುವದು ಆಶಾದಾಯಕ ಬೆಳವಣಿಗೆಯಾಗಿದೆ. ಸಮಾಜದಲ್ಲಿ ಓರ್ವ ಉತ್ತಮ ವ್ಯಕ್ತಿಯಾಗಿ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ತಾಯಿಗಿದೆ. ಬ್ರಹ್ಮಶ್ರೀ ನಾರಾಯಣಗುರುಗಳು ಶೋಷಿತ ವರ್ಗದವರನ್ನು ಮೇಲೆತ್ತಲು ದೇವಾಲಯ ವಿದ್ಯಾ ಮಂದಿರವನ್ನು ತೆರೆದು ಒಂದೇ ಮತ, ಒಂದೇ ಜಾತಿ, ಒಂದೇ ಧರ್ಮ ಎಂದು ಸಾರಿದ ಮಹಾನ್ ಚೇತನರಾಗಿದ್ದಾರೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಬಿ.ವೈ. ಆನಂದ ರಘು ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕಲಾವತಿ, ಜಿಲ್ಲಾ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಎಸ್. ಸದಾನಂದ, ಮಡಿಕೇರಿ ಬಿಲ್ಲವ ಸಮಾಜದ ಅಧ್ಯಕ್ಷ ರಾಜಶೇಖರ, ವೀರಾಜಪೇಟೆ ಬಿಲ್ಲವ ಸಮಾಜದ ಅಧ್ಯಕ್ಷ ಚಂದ್ರಶೇಖರ, ಪೆರಾಜೆ ನಿವಾಸಿ ನಿವೃತ್ತ ಎಸ್.ಪಿ. ಪಿತಾಂಬರ, ಪುತ್ತೂರಿನ ಚಿತ್ತರಂಜನ್, ಸೋಮವಾರಪೇಟೆ ಬಿಲ್ಲವ ಸಮಾಜದ ಉಪಾಧ್ಯಕ್ಷ ಬಿ.ಎ. ಬಾಸ್ಕರ್, ಸುಂಟಿಕೊಪ್ಪ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಣಿ ಮುಖೇಶ್, ಗೌರವಧ್ಯಕ್ಷ ಬಿ.ಕೆ. ಮೋಹನ್, ಕುಶಾಲನಗರ ಬಿಲ್ಲವ ಸಮಾಜದ ಅಧ್ಯಕ್ಷ ಸತೀಶ್ ಕುಂದರ್, ಪಡುಬಿಲ್ಲೆ ಉಲ್ಲಾಸ್ ಕೋಟ್ಯಾನ್, ಸಂಪ್ಯದ ಕೇಶವ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಪುಟಾಣಿಗಳಾದ ಆಸ್ಮಿತಾ ಹಾಗೂ ಯಕ್ಷಿತ್ ಶ್ರೀ ಕೋಟಿ ಚೆನ್ನಯ್ಯ ಕುರಿತಾದ ಆಕರ್ಷಕ ನೃತ್ಯ, ಮಕ್ಕಳಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮ ನೆರೆದಿದ್ದ ಬಾಂಧÀವರ ಮನಸೂರೆಗೊಳಿಸಿತ್ತು.
ದೈಯಿಬೈದೆದಿ ಜಯಂತಿ ಕೃಷ್ಣಪ್ಪ ತಂಡದವರು ಪ್ರಾರ್ಥಿಸಿ, ಜಿಲ್ಲಾ ಬಿಲ್ಲವ ಸೇವಾ ಸಮಾಜದ ಪ್ರಧಾನ ಕಾರ್ಯದರ್ಶಿ ಗಂಗಾಧರ ಬಂಗೇರ ಸ್ವಾಗತಿಸಿದರು.