ಸೋಮವಾರಪೇಟೆ, ಆ. 26: ಶಾಲಾ ಕಾಲೇಜಿಗೆ ತೆರಳಲು ಸಕಾಲದಲ್ಲಿ ಬಸ್ ಸೇವೆ ಒದಗಿಸಬೇಕೆಂದು ಆಗ್ರಹಿಸಿ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳು ಇಂದು ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಕೆಲಕಾಲ ತಡೆದು ಪ್ರತಿಭಟಿಸಿದರಲ್ಲದೆ, ತಾ. 27ರಂದು (ಇಂದು) ರಸ್ತೆ ತಡೆ ನಡೆಸಲು ನಿರ್ಧರಿಸಿದ್ದಾರೆ.

ಮಡಿಕೇರಿಯಿಂದ ಬೆಳಿಗ್ಗೆ ಹೊರಟು ಸೋಮವಾರಪೇಟೆಗೆ ಆಗಮಿಸುವ ಬಸ್‍ಗಳು ಸಮಯಕ್ಕೆ ಸರಿಯಾಗಿ ಆಗಮಿಸುತ್ತಿಲ್ಲ. ಇದರೊಂದಿಗೆ ವಿದ್ಯಾರ್ಥಿಗಳು ಸೋಮವಾರಪೇಟೆ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ತೆರಳಲು ಬಸ್‍ನಲ್ಲಿ ಸ್ಥಳಾವಕಾಶವೂ ಇರುವದಿಲ್ಲ. ಪಾಸ್ ಪಡೆದಿರುವ ನಾವುಗಳು ಹೇಗೆ ಕಾಲೇಜಿಗೆ ತೆರಳುವದು ಎಂದು ವಿದ್ಯಾರ್ಥಿಗಳು ಅಳಲು ತೋಡಿ ಕೊಂಡರಲ್ಲದೆ, ಸರ್ಕಾರಿ ಬಸ್‍ನ್ನು ಕೆಲಸಮಯ ತಡೆದರು.

ಐಗೂರು ವ್ಯಾಪ್ತಿಯಲ್ಲಿ 50ಕ್ಕೂ ಅಧಿಕ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಪಡೆಯುತ್ತಿದ್ದು, ಪ್ರತಿನಿತ್ಯ ಸೋಮವಾರಪೇಟೆಗೆ ಆಗಮಿಸ ಬೇಕಿದೆ. ಎಲ್ಲಾ ವಿದ್ಯಾರ್ಥಿಗಳು ಬಸ್ ಪಾಸ್ ಪಡೆದಿದ್ದರೂ ಬಸ್‍ನಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಮಡಿಕೇರಿಯಿಂದ ಹೊರಡುವ ಬಸ್‍ನಲ್ಲಿ ಎಲ್ಲಾ ಆಸನಗಳು ಭರ್ತಿಯಾಗಿ ಬಸ್ ತುಂಬಿರುತ್ತದೆ. ಐಗೂರಿನಿಂದ ನಾವುಗಳು ಬಸ್ ಏರಲು ಸಾಧ್ಯವಾಗುವದಿಲ್ಲ. ಇದರಿಂದಾಗಿ ತರಗತಿಗಳಿಗೆ ಸರಿಯಾದ ಸಮಯಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಕೆಲವೊಮ್ಮೆ ಅರ್ಧದಷ್ಟು ವಿದ್ಯಾರ್ಥಿಗಳು ಹತ್ತುತ್ತಿರುವಾಗಲೇ ಬಸ್‍ಗಳು ಚಲಿಸುತ್ತವೆ. ಬಸ್ ಏರಲು ನೂಕುನುಕ್ಕಲು ಇರುತ್ತದೆ. ವಿದ್ಯಾರ್ಥಿನಿಯರಂತೂ ಬಸ್ ಏರಲು ಸಾಧ್ಯವಾಗುವದೇ ಇಲ್ಲ. ಈ ಹಿನ್ನೆಲೆ ಶಾಲಾ ಕಾಲೇಜು ಸಮಯಕ್ಕೆ ಸರಿಯಾಗಿ ಹೆಚ್ಚುವರಿ ಬಸ್‍ಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿ ತಾ. 27ರಂದು ರಸ್ತೆ ತಡೆ ನಡೆಸಲು ತೀರ್ಮಾನಿಸಲಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.