ಕುಶಾಲನಗರ, ಜು. 20: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗುಂಡೂರಾವ್ ಬಡಾವಣೆ ಯಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಡಾವಣೆಯನ್ನು ಆಧುನೀಕರಣಗೊಳಿಸುವದರೊಂದಿಗೆ ಹರಾಜು ಪ್ರಕ್ರಿಯೆ ನಡೆಸುವ ಉದ್ದೇಶದಿಂದ ಪಂಚಾಯಿತಿ ವತಿಯಿಂದ ವೈಜ್ಞಾನಿಕ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ಹಾಗೂ ಸದಸ್ಯರ ಸಮ್ಮುಖದಲ್ಲಿ ಬಡಾವಣೆಯ 43.59 ಏಕರೆ ಜಾಗದ ಸರ್ವೆ ಕಾರ್ಯ ನಡೆಸುವದರೊಂದಿಗೆ ಗಡಿ ಗುರುತಿಸುವ ಕೆಲಸ ನಡೆಯಿತು.

ಈ ಸಂದರ್ಭ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ಮಾತನಾಡಿ, ಬಡಾವಣೆಯ 43.59 ಏಕರೆ ಜಾಗದ ಸರ್ವೆ ಕಾರ್ಯ ಕೈಗೊಂಡು ಕೆಲವು ಮಾರ್ಪಾಡುಗಳನ್ನು ಸರಿಪಡಿಸಿ ಆಧುನೀಕರಣಗೊಳಿಸುವ ಮೂಲಕ ಹರಾಜು ಪ್ರಕ್ರಿಯೆ ನಡೆಸಲಾಗುವದು. ಸರ್ವೆ ಕಾರ್ಯದ ಬಳಿಕ ಒತ್ತುವರಿ ಜಾಗಗಳನ್ನು ಗುರುತಿಸಿ ಪಂಚಾಯಿತಿ ವಶಕ್ಕೆ ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವದು. ಬಡಾವಣೆಯಲ್ಲಿ 10 ಏಕರೆ ಜಾಗವನ್ನು ಗುರುತಿಸಿ ಸಾರ್ವಜನಿಕ ಕ್ರೀಡಾ ಮೈದಾನ ನಿರ್ಮಿಸಲು ಚಿಂತಿಸಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಿದ್ದು ಈ ಹಿಂದೆ ಹರಾಜುಗೊಂಡಿರುವ 23 ನಿವೇಶನಗಳಿಗೆ ಖಾತೆ ಮಾಡಿಕೊಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ತಿಳಿಸಿದ್ದಾರೆ.

ಬಡಾವಣೆಯನ್ನು ಸಮತಟ್ಟು ಗೊಳಿಸುವದರೊಂದಿಗೆ ಮುಂದಿನ ದಿನಗಳಲ್ಲಿ ಬಹಿರಂಗ ಹರಾಜು ಮೂಲಕ ನಿವೇಶನಗಳನ್ನು ನೀಡಲು ಕ್ರಮಕ್ಕೆ ಜಿಲ್ಲಾಧಿಕಾರಿಗಳ ಅನುಮೋದ ನೆ ಪಡೆಯಲಾಗುವದೆಂದು ಶ್ರೀಧರ್ ಮಾಹಿತಿ ನೀಡಿದ್ದಾರೆ.

ಈ ಸಂದರ್ಭ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಎಂ. ಮಧುಸೂದನ್, ಸದಸ್ಯರುಗಳಾದ ಹೆಚ್.ಜೆ. ಕರಿಯಪ್ಪ, ರೇಣುಕಾ, ಪ್ರಮೋದ್ ಮುತ್ತಪ್ಪ ಮತ್ತು ಪಂಚಾಯಿತಿ ಸಿಬ್ಬಂದಿಗಳು ಇದ್ದರು.