ಶ್ರೀಮಂಗಲ, ಡಿ. 7 : ಹಿಂದಿನಂತೆ ಭತ್ತ ಕೃಷಿಯಲ್ಲಿ ಕೊಡಗಿನ ಬಹುತೇಕ ರೈತರಿಗೆ ಉತ್ಸಾಹ ಇಲ್ಲದಾಗಿದೆ. ರೈತರು ಬೆಳೆದ ಬೆಳೆಯನ್ನು ವನ್ಯ ಪ್ರಾಣಿಗಳು ನಿರಂತರವಾಗಿ ನಷ್ಟ ಮಾಡುತ್ತಿರು ವದರಿಂದ ಕೃಷಿಯತ್ತ ಉತ್ಸಾಹ ಕುಂಠಿತಗೊಳ್ಳುವಂತೆ ಮಾಡಿದೆ. ಆದ್ದರಿಂದ ವನ್ಯ ಪ್ರಾಣಿಗಳಿಂದ ಬೆಳೆನಷ್ಟ ಉಂಟಾಗುವದನ್ನು ತಡೆಗಟ್ಟಲು ಶಾಶ್ವತ ಪರಿಹಾರ ಕಂಡುಕೊಳ್ಳುವ ಮೂಲಕ ರೈತರಲ್ಲಿ ಕೃಷಿಯತ್ತ ಉತ್ಸಾಹ ತುಂಬುವ ಯೋಜನೆ ರೂಪಿಸಬೇಕಾಗಿದೆ ಎಂದು ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ಜಿ.ಪಂ. ಕೃಷಿ ಇಲಾಖೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಶ್ರೀಮಂಗಲ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭತ್ತ ಬೆಳೆಯುವದು ಆಹಾರಕ್ಕಾಗಿ ಮಾತ್ರವಲ್ಲ. ಭೂಮಿಯಲ್ಲಿ ನೀರನ್ನು ಇಂಗಿಸಿ ಅಂತರ್ಜಲ ಮಟ್ಟ ವೃದ್ದಿಸಲು ಸಹಕಾರಿಯಾಗುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಎದುರಾಗಿರುವ ಬರಗಾಲದ ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.

ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಿ ತಾ.ಪಂ. ಸದಸ್ಯ ಪೊಯಿಲೇಂಗಡ ಪಲ್ವೀನ್ ಪೂಣಚ್ಚ ಮಾತನಾಡಿ, ಸಾಂಪ್ರದಾಯಿಕ ಕೃಷಿ ಪದ್ಧತಿ ಯೊಂದಿಗೆ ವಿಜ್ಞಾನಿಗಳು ನೀಡುವ ಸಲಹೆಗಳನ್ನು ಪಡೆದು ಕೊಂಡು ವೈಜ್ಞಾನಿಕ ಕೃಷಿಯಿಂದ ಆರ್ಥಿಕ ಅಭಿವೃದ್ಧಿ ಸಾಧಿಸಲು ರೈತರು ಕ್ರಮ ವಹಿಸಬೇಕೆಂದರು.

ಜಿಲ್ಲಾ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಮಾತನಾಡಿ, ಸರಕಾರವು ಕೃಷಿ ಇಲಾಖೆಯ ಮುಖಾಂತರ ಕೃಷಿಕರಿಗೆ ಸಹಾಯಧನ ನೀಡುವದರೊಂದಿಗೆ ಕೃಷಿ ಪರಿಕರಗಳನ್ನು ಹಾಗೂ ಗೊಬ್ಬರ ಇತ್ಯಾದಿ ಕೃಷಿ ಸಂಬಂಧಿತ ವಸ್ತುಗಳನ್ನು ರೈತರಿಗೆ ಕೈಗೆಟುಕುವ ದರದಲ್ಲಿ ನೀಡಿ ಜನರು ಕೃಷಿಯತ್ತ ವಾಲುವಂತೆ ಮಾಡಲು ಯೋಜನೆ ರೂಪಿಸಬೇಕೆಂದರು.

ರೈತ ಸಂಘದ ಸಂಚಾಲಕ ಚಿಮ್ಮಂಗಡ ಗಣೇಶ್‍ರವರು, ದೇಶದ ಪ್ರಧಾನಿ ಕೃಷಿ ಪ್ರದಾನ ದೇಶವಾದ ಭಾರತದಲ್ಲಿ ಜನರು ಆದಷ್ಟು ಕೃಷಿಗೆ ಒತ್ತು ನೀಡಬೇಕೆಂದು ಸಲಹೆ ನೀಡಿದ್ದಾರೆ. ಆದರೆ ಇಲಾಖಾಧಿಕಾರಿ ಗಳು ಕೃಷಿಗೆ ನೀರಾವರಿ ವ್ಯವಸ್ಥೆಗೆ ಪಂಪ್‍ಸೆಟ್ ಇಡಲು ಅಡ್ಡಿಪಡಿ ಸುತ್ತಿದ್ದಾರೆ. ಸರಕಾರ ಈ ವ್ಯವಸ್ಥೆಯನ್ನು ಸರಿಪಡಿಸ ಬೇಕೆಂದರು.

ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಮಾತನಾಡಿ, ಕೃಷಿ ಇಲಾಖೆ ಹಾಗೂ ವಿಜ್ಞಾನಿಗಳಿಂದ ಮಾಹಿತಿ ಪಡೆದು ಕಡಿಮೆ ಪ್ರದೇಶದಲ್ಲಿ ಹೆಚ್ಚಿನ ಆದಾಯ ಬರುವಂತ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ರೈತರು ತಮ್ಮ ಆರ್ಥಿಕ ಅಭಿವೃದ್ಧಿ ಯೊಂದಿಗೆ ದೇಶದ ಆರ್ಥಿಕ ಸುಧಾರಣೆಗೆ ಕೈ ಜೋಡಿಸಬೇಕೆಂದರು.

ಪೊನ್ನಂಪೇಟೆ ಕೃಷಿ ಸಂಶೋಧನಾ ಕೇಂದ್ರದ ಡಾ. ಜಿ.ಎನ್. ಹೊಸಗೌಡರ್ ಭತ್ತದ ಕೃಷಿಯ ಬಗ್ಗೆ, ಚೆಟ್ಟಳ್ಳಿ ತೋಟಗಾರಿಕಾ ಸಂಶೋಧನಾ ಕೇಂದ್ರದ ಡಾ. ಸೆಂಥಿಲ್ ಕುಮಾರ್ ತೋಟಗಾರಿಕೆಯ ಬಗ್ಗೆ, ವಿಟ್ಲದ ಕೇಂದ್ರೀಯ ತೋಟದ ಬೆಳೆ ಸಂಶೋಧನಾ ಸಂಸ್ಥೆಯ ಡಾ. ಕೆ.ಎಸ್. ಆನಂದ್ ಅಡಿಕೆ ಬೆಳೆಯ ಬಗ್ಗೆ, ಚೆಟ್ಟಳ್ಳಿ ಕೇಂದ್ರೀಯಾ ಸಂಶೋದನಾ ಸಂಸ್ಥೆಯ ಡಾ. ಕೆ. ಚಂದ್ರಪ್ಪ ಮಣ್ಣು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.

ಶ್ರೀಮಂಗಲ ಗ್ರಾ.ಪಂ. ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ. ಸದಸ್ಯೆ ಪಿ.ಟಿ. ಸರೋಜ, ಡಾ. ಬಾಲಕೃಷ್ಣ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಕೆ.ಎಸ್. ಸದಾಶಿವ ಗೌಡ, ಪ್ರಗತಿಪರ ರೈತ ಸೋಮೆಯಂಡ ಸಿ. ತಿಮ್ಮಯ್ಯ, ಶ್ರೀಮಂಗಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಜ್ಜಮಾಡ ಕರುಂಬಯ್ಯ, ಕೃಷಿ ಇಲಾಖೆಯ ಪ್ರಬಾರ ಉಪನಿರ್ದೇಶಕಿ ಎ.ಜೆ.ರೀನಾ, ಕೃಷಿ ಅಧಿಕಾರಿ ಶಿವೇಗೌಡ ಸೇರಿದಂತೆ ಪ್ರಮುಖರು ಹಾಜರಿದ್ದರು.