ಕುಶಾಲನಗರ, ಸೆ, 14 : ತಮಿಳುನಾಡಿನಲ್ಲಿ ಕನ್ನಡಿಗರ ಮೇಲಿನ ಹಲ್ಲೆ ಮತ್ತು ತಮಿಳುನಾಡಿಗೆ ರಾಜ್ಯದಿಂದ ಕಾವೇರಿ ನೀರು ಹರಿಸುತ್ತಿರುವದನ್ನು ಖಂಡಿಸಿ ಸ್ಥಳೀಯ ಗೆಳೆಯರ ಬಳಗದ ವತಿಯಿಂದ ಬುಧವಾರ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಿದರು. ಕೊಪ್ಪ ಗೇಟ್ ಕಾವೇರಿ ಪ್ರತಿಮೆ ಬಳಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಬಳಗದ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಯಲಲಿತಾ ಹಾಗೂ ವಕೀಲ ನಾರಿಮನ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಕೂಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾವಣೆಗೊಂಡ ಬಳಗದ ಸದಸ್ಯರು ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿ ಘೋಷಣೆ ಕೂಗಿ ದರು. ಈ ಸಂದರ್ಭ ಮಾತನಾಡಿದ ಗೆಳೆಯರ ಬಳಗದ ಅಧ್ಯಕ್ಷ ವಿ.ಎಸ್. ಆನಂದಕುಮಾರ್, ತಮಿಳುನಾಡು ಸಿಎಂ ಜಯಲಲಿತಾ ರಾಜಕೀಯ ಕಾರಣಗಳಿಗೋಸ್ಕರ ಜಲವಿವಾದ ಕೆದಕುತ್ತಿದ್ದಾರೆ. ಅವಶ್ಯಕತೆ ಇಲ್ಲದಿದ್ದರೂ ಕೋರ್ಟ್ ಮೂಲಕ ತಮ್ಮ ರಾಜ್ಯಕ್ಕೆ ನೀರು ಬಿಡಿಸಿಕೊಳ್ಳುತ್ತಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಟಿ.ಎ. ಶರವಣ ಮಾತನಾಡಿ, ಕಾವೇರಿ ವಿಷಯದಲ್ಲಿ ಕಿಡಿಗೇಡಿಗಳು ಎರಡೂ ರಾಜ್ಯದಲ್ಲೂ ಗಲಭೆ ಸೃಷ್ಟಿಸಿದ್ದಾರೆ. ಇಂತಹ ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದು ಕೊಳ್ಳಬೇಕು ಎಂದರು. ಮೆರವಣೆಗೆ ಯಲ್ಲಿ ತೆರಳಿದ ಕಾರ್ಯಕರ್ತರು ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರ ಕಛೇರಿಗೆ ತೆರಳಿ ಮನವಿ ಸಲ್ಲಿಸಿದರು.

ಈ ಸಂದರ್ಭ ಕುಶಾಲನಗರ ಪ.ಪಂ. ಸದಸ್ಯ ಹೆಚ್.ಡಿ. ಚಂದ್ರು, ಗೆಳೆಯರ ಬಳಗದ ಪ್ರಮುಖರಾದ ಚಂದ್ರು, ವಸಂತಕುಮಾರ್, ರಾಕಿ, ರವಿ, ವೆಂಕಟೇಶ್, ಅಶೋಕ್‍ಕುಮಾರ್ ಎಂ.ಕೆ. ಶರ್ಮ, ನಿಂಗರಾಜು, ಅಶ್ವಿನ್, ಸುರೇಶ್, ಕಾವೇರಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.