ಪ್ರವಾಸಿಗರ-ಸೊಂಟದಲ್ಲಿ-‘ಪಿಸ್ತೂಲ್’...!?

 ಮಡಿಕೇರಿ, ಜೂ. 17: ಸಂಜೆ 6.30ರ ಸಮಯ.., ಮಡಿಕೇರಿಯ ಹೃದಯಭಾಗ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಜನ ಜಂಗುಳಿ.., ಪ್ರವಾಸಿಗರನ್ನು ಸುತ್ತುವರೆದ ಜನ.., ಪೊಲೀಸರು.., ಎಲ್ಲರಲ್ಲೂ ಆತಂಕ, ಭಯ? ಪ್ರವಾಸಿಗರ ಅಂಗಿಯೊಳಗಿನ ಪ್ಯಾಂಟ್‍ನಲ್ಲಿ ಸಿಕ್ಕಿಸಿದ್ದ ‘ಪಿಸ್ತೂಲ್’ ಈ ಎಲ್ಲಾ ಆತಂಕ, ಭಯಕ್ಕೆ ಕಾರಣ. ಪೊಲೀಸರು ಪ್ರವಾಸಿಗರನ್ನು ಠಾಣೆಗೆ ಕರೆದೊಯ್ದು ಬಳಿಕ ಕೆಲಕಾಲ ಗುಸು-ಗುಸು.., ‘ ಯಾರಪ್ಪಾ ಇವರು, ಎಲ್ಲಿಯವರು..? ಎಂಬಿತ್ಯಾದಿ ಪ್ರಶ್ನೆಗಳು..? ನೈಜಾಂಶ ತಿಳಿದ ಬಳಿಕ ಎಲ್ಲರಲ್ಲೂ ಹೊಟ್ಟೆ ಹುಣ್ಣಾಗುವಂತೆ ನಗು..!

ಈ ರೀತಿಯ ವಿಚಿತ್ರ ಪ್ರಸಂಗ ಸಂಜೆ  ಎದುರಾಯಿತಲ್ಲದೆ ಸುರಿವ ಮಳೆಯ ನಡುವೆ ಎಲ್ಲರನ್ನೂ ನಗಿಸುವಂತೆ ಮಾಡಿತು. ಬೆಂಗಳೂರಿನಿಂದ ಆಗಮಿಸಿದ್ದ ಪ್ರವಾಸಿಗರ ಗುಂಪೊಂದು ಸಾರಿಗೆ ಬಸ್ ನಿಲ್ದಾಣದ ಬಳಿ ಸುಳಿದಾಡುತ್ತಿತ್ತು. ಈ ಪೈಕಿ ಓರ್ವನ ಶರ್ಟ್ ಒಳಗಡೆ ಪ್ಯಾಂಟ್‍ನಲ್ಲಿ ಸಿಕ್ಕಿಸಿದ್ದ ‘ಪಿಸ್ತೂಲ್’ ಎದ್ದು ಕಾಣುತ್ತಿತ್ತು.
ಇದನ್ನು ಗಮನಿಸಿದ ಸಾರ್ವಜನಿಕರು ನಗರ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿಯೇ ಬಿಟ್ಟರು. ಕ್ಷಣಮಾತ್ರದಲ್ಲಿ ನಗರ ಅಪರಾಧ ಪತ್ತೆ ದಳದ ಪೊಲೀಸರು ದೌಡಾಯಿಸಿ, ಪ್ರವಾಸಿಗರನ್ನು ಠಾಣೆಗೆ ಕರೆದೊಯ್ದರು. ಜೊತೆಯಲ್ಲಿ ಕೆಲವು ಸಾರ್ವಜನಿಕರೂ ತೆರಳಿದರು. ಎಲ್ಲರಲ್ಲೂ ಕುತೂಹಲ..!
ಠಾಣೆಯಲ್ಲಿ ಹೋಗಿ ಪರಿಶೀಲಿಸುವಾಗ ಅಲ್ಲಿ ಅಚ್ಚರಿ ಕಾದಿತ್ತು. ಪ್ರವಾಸಿಗರ ಬಳಿ ಇದ್ದುದು ಸಿಗರೇಟ್ ಹಚ್ಚುವ ‘ಸಿಗರ್‍ಲೈಟ್’ ‘ ಪಿಸ್ತೂಲ್’ ಮಾದರಿಯಲ್ಲಿ ಸ್ವಲ್ಪ ದೊಡ್ಡದಾಗಿ ಇದ್ದುದರಿಂದ ಸಾರ್ವಜನಿಕರು ಇದನ್ನು ನಿಜವಾದ ಪಿಸ್ತೂಲ್ ಎಂದೇ ತಿಳಿದು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಪರಿಶೀಲಿಸಿದ ಬಳಿಕ ಪ್ರವಾಸಿಗರನ್ನು ಕಳುಹಿಸಿಕೊಡಲಾಯಿತು. ನೈಜಾಂಶ ತಿಳಿದ ಮೇಲೆ ಪೊಲೀಸರು ಸೇರಿದಂತೆ ಸಾರ್ವಜನಿಕರಲ್ಲೂ ನಗುವಿನ ಅಲೆ ತೇಲಾಡಿತು. ಏನೇ ಇರಲ್ಲಿ, ಆ ಕ್ಷಣದಲ್ಲಿ ಜಾಗೃತರಾಗಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಸಾರ್ವಜನಿಕರ ಪ್ರಜ್ಞೆಯನ್ನು ಮೆಚ್ಚಲೇಬೇಕು.
- ಸಂತೋಷ್
 

Home    About us    Contact