ಶನಿವಾರಸಂತೆಯಲ್ಲಿ-ಮಳೆ-ಕ್ಷೀಣ

 ಶನಿವಾರಸಂತೆ, ಜೂ. 17: ಶನಿವಾರಸಂತೆ ಪಟ್ಟಣ ಹಾಗೂ ಹೋಬಳಿಯಾದ್ಯಂತ ಮಳೆ ಪ್ರಮಾಣ ಕಡಿಮೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ. 4 ದಿನಗಳಿಂದಲೂ ಬಿಸಿಲಿನ ವಾತಾವರಣವಿದ್ದು, ಆಗಾಗ್ಗೆ ತುಂತುರು ಮಳೆಯಾಗುತ್ತಿದೆ.

ಮಂಗಳವಾರ ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣವಿದ್ದು, ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣದೊಂದಿಗೆ ತುಂತುರು ಮಳೆಯಾಯಿತು. ಸಂಜೆ ಬಿಸಿಲು-ಮಳೆಯ ಆಟ ನಡೆದಿತ್ತು.
ಆರಂಭದಿಂದ ಇಲ್ಲಿಯವರೆಗೆ ಶನಿವಾರಸಂತೆ ಗ್ರಾ.ಪಂ. ವ್ಯಾಪ್ತಿಯಲ್ಲಿ 4.5 ಇಂಚು ಮಳೆಯಾಗಿದೆ. ಸಮೀಪದ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ 4 ಇಂಚು ಮಳೆಯಾಗಿದೆ. ಇಲ್ಲಿನ ತೋಯಳ್ಳಿ, ಗಂಗನಹಳ್ಳಿ ಇತರ ಗ್ರಾಮಗಳ ಕಾಫಿ ತೋಟಗಳಲ್ಲಿ ಗಿಡಗಳಿಗೆ ಗೊಬ್ಬರ ಹಾಕುವ ಕೆಲಸ ಶೇ. 40 ರಷ್ಟು ಆಗಿದೆ. ಗದ್ದೆಗಳಲ್ಲಿ ಉಳುಮೆ ಕೆಲಸ ನಡೆದಿದ್ದು, ಶೇ. 30 ರಷ್ಟು ಭತ್ತದ ಅಗೆ ಹಾಕಲಾಗಿದೆ.
ಈಗ ಮಳೆ ಅಗತ್ಯ ಬೇಕಾಗಿದೆ. ತಾ. 15 ರಿಂದ ದೀರ್ಘಾವಧಿ ಬೆಳೆಯಾದ ರಾಜಮುಡಿ, ತುಂಗಾ ಇತ್ಯಾದಿ ಭತ್ತದ ಬೀಜಗಳ ಅಗೆ ಹಾಕುವ ಕೆಲಸ ಆರಂಭವಾಗಲೇಬೇಕು. ಮಳೆ ಕೈಕೊಡುವ ಹಾಗೆ ಕಾಣಿಸುತ್ತಿದೆ ಎಂದು ತೋಯಳ್ಳಿ ಗ್ರಾಮದ ರೈತ ಟಿ.ಆರ್. ಸುರೇಶ್ ಆತಂಕ ವ್ಯಕ್ತಪಡಿಸಿದರು.
ರಾಜ್ಯದ ಇತರೆಡೆ ಉತ್ತಮ ಮಳೆಯಾಗುತ್ತಿದ್ದು, ಶನಿವಾರಸಂತೆ ಹೋಬಳಿಯಲ್ಲಿ ಮಳೆ ಕಡಿಮೆಯಾಗಿರುವ ಬಗ್ಗೆ ರೈತರು ಆತಂಕಗೊಂಡಿದ್ದಾರೆ.
 

Home    About us    Contact