ಪ್ರತಿಯೊಬ್ಬರಿಗೂ-ಕಾನೂನಿನ-ಅರಿವು-ಅಗತ್ಯ:-ಮೋಹನ್-ಪ್ರಭು

 ಸಿದ್ದಾಪುರ, ಜೂ. 17: ಕಾನೂನಿನ ಚೌಕಟ್ಟಿನಲ್ಲಿ ಪ್ರತಿಯೊಬ್ಬರು ಜೀವಿಸುತ್ತಿದ್ದು, ಕಾನೂನಿನ ಅರಿವನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ಕರೆ ನೀಡಿದರು.

ಇಲ್ಲಿನ ಗುಹ್ಯ ಅಗಸ್ತ್ಯೇಶ್ವರ ಸಹಕಾರ ಕೃಷಿ ಪತ್ತಿನ ಸಂಘದ ಸಭಾಂಗಣದಲ್ಲಿ ವೀರಾಜಪೇಟೆ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದಲ್ಲಿ ವ್ಯಕ್ತಿಯೊಬ್ಬ ಪಾಲಿಸಬೇಕಾದ ಮತ್ತು ಆತನಿಗೆ ಉಪಯೋಗವಾಗುವ ಕಾನೂನುಗಳು ಜಾರಿಯಲ್ಲಿದ್ದರೂ, ಬಹುತೇಕ ಮಂದಿಗೆ ಅದರ ಬಗ್ಗೆ ಗೊತ್ತಿಲ್ಲ. ಮಹಿಳೆಯರ ಮೇಲೆ ನಡೆಯುವ ಕಿರುಕುಳ, ದೌರ್ಜನ್ಯ ಮುಂತಾದವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾನೂನುಗಳಿದ್ದರೂ, ಮಾಹಿತಿಯ ಕೊರತೆಯಿಂದ ಹಲವಾರು ಪ್ರಕರಣಗಳು ಎಡವುತ್ತದೆ. ಕಾನೂನು ಅರಿವು ಕಾರ್ಯಕ್ರಮದ ಮೂಲಕ ಜನರಿಗೆ ಕಾನೂನಿನ ಬಗ್ಗೆ ತಿಳುವಳಿಕೆ ಮೂಡಿಸಲು ಸಾಧ್ಯ ಎಂದರು.
ವಕೀಲ ಕೆ.ವಿ. ಸುನಿಲ್ ಕಾರ್ಮಿಕ ಕಾನೂನಿನ ಬಗ್ಗೆ ಉಪಾನ್ಯಾಸ ನೀಡಿ, ರಾಜ್ಯದ ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ಸುಮಾರು 4 ಸಾವಿರ ಕೋಟಿ ರೂಪಾಯಿ ಇದ್ದು, ಇದರ ಸೌಲಭ್ಯಗಳನ್ನು ಪಡೆಯಲು ಕಟ್ಟಡ ಕಾರ್ಮಿಕರು ನೋಂದಣಿ ಮಾಡಿ, ವಿವಿಧ ಸೌಲಭ್ಯವನ್ನು ಪಡೆಯಬಹುದು ಎಂದರು.
ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಎಂ.ಜಿ. ಕಾಮತ್ ಮಾತನಾಡಿ, ದೇಶದಲ್ಲಿ ಎಲ್ಲಾ ಚಟುವಟಿಕೆಗಳಿಗೂ ಕಾನೂನು ಜಾರಿಯಲ್ಲಿದ್ದು, ಅದನ್ನು ಅನುಷ್ಠಾನಕ್ಕೆ ತರಲು ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ವೇದಿಕೆಯಲ್ಲಿ ವಕೀಲರು ಹಾಗೂ ಮಾಜಿ ಜಿ.ಪಂ. ಸದಸ್ಯ ಎಂ.ಎಸ್. ವೆಂಕಟೇಶ್, ಕಾರ್ಮಿಕ ಮುಖಂಡ ಎನ್.ಡಿ. ಕುಟ್ಟಪ್ಪ, ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಬಿ.ಜಿ. ಕುಮಾರ್, ಎ.ಎಸ್.ಐ. ವಸಂತ್ ಇದ್ದರು. ಕಾರ್ಯಕ್ರಮದಲ್ಲಿ ವಿ.ಎಸ್. ಎಸ್.ಎನ್. ಉಪಾಧ್ಯಕ್ಷ ಬಿಜೋಯ್, ವ್ಯವಸ್ಥಾಪಕ ಪ್ರಸನ್ನ, ನಿರ್ದೇಶಕರು, ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. 

Home    About us    Contact