ಎಂದೂ-ಬತ್ತದ-ಹೊನ್ನಮ್ಮನ-ಕೆರೆಗೆ-ಸಾಂಪ್ರದಾಯಿಕ-ಬಾಗಿನ-ಅರ್ಪಣೆಸೋಮವಾರಪೇಟೆ,ಆ.21: ಜಲದೇವತೆಯಾಗಿ ಬೃಹತ್ ಕೆರೆಗೆ ಹಾರವಾದ ದೈವಿಕ ಇತಿಹಾಸ ಹೊಂದಿರುವ ತಾಲೂಕಿನ ಹೊನ್ನಮ್ಮನ ಕೆರೆಗೆ ಗೌರಿ ಹಬ್ಬದ ದಿನವಾದ ಇಂದು ಸಾಂಪ್ರದಾಯಿಕ ವಿಧಿ ವಿಧಾನಗ ಳೊಂದಿಗೆ ಬಾಗಿನ ಅರ್ಪಿಸಲಾಯಿತು. ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಇತಿಹಾಸ ಪ್ರಸಿದ್ಧ, ಎಂದೂ ಬತ್ತದ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ, ಈ ಬಾರಿ ದೇವಾಲಯ ಸಮಿತಿ ಪದಾಧಿಕಾರಿಗಳು, ಹೊನ್ನಮ್ಮ ತಾಯಿಯ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.ಪ್ರತಿ ವರ್ಷ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಜಾತ್ರೋತ್ಸವ ದಂತೆ ನಡೆಯುತ್ತಿದ್ದ ಉತ್ಸವಕ್ಕೆ ಈ ಬಾರಿ ಕೊರೊನಾ ಆತಂಕದ ಕರಿನೆರಳು ಬಿದ್ದ ಹಿನ್ನೆಲೆ ಸರಳ ಹಾಗೂ ಸಾಂಪ್ರದಾಯಿಕವಾಗಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.ವರ್ಷಂಪ್ರತಿ ಗೌರಿ ಹಬ್ಬದ ದಿನದಂದು ಸಾವಿರಾರು ಮಂದಿ ಸ್ವರ್ಣಗೌರಿ ಹೊನ್ನಮ್ಮನ ಸನ್ನಿದಿಗೆ ಆಗಮಿಸಿ, ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದರು.
(ಮೊದಲ ಪುಟದಿಂದ) ಇದರೊಂದಿಗೆ ನೂತನವಾಗಿ ವಿವಾಹವಾದ ದಂಪತಿಗಳು ಆಗಮಿಸಿ ಕೆರೆಗೆ ಬಾಗಿನ ಅರ್ಪಿಸುತ್ತಿದ್ದರು. ಗೌರಿ ಹಬ್ಬದ ದಿನದಂದು ಹೊನ್ನಮ್ಮನ ಕ್ಷೇತ್ರದಲ್ಲಿ ಜಾತ್ರೆಯಂತೆ ಜನಸಾಗರ ಸೇರುತ್ತಿತ್ತು.
ಆದರೆ ಈ ಬಾರಿ ಕೊರೊನಾ ವೈರಸ್ ಆತಂಕದ ಹಿನ್ನೆಲೆ ಹೊರಭಾಗ ದಿಂದ ಆಗಮಿಸುವ ಭಕ್ತರ ಸಂಖ್ಯೆ ತೀರಾ ಕಡಿಮೆಯಾಗಿತ್ತು. ಶ್ರೀಬಸವೇಶ್ವರ ಮತ್ತು ಸ್ವರ್ಣಗೌರಿ ಹೊನ್ನಮ್ಮ ತಾಯಿ ಸೇವಾ ಸಮಿತಿಯ ವತಿಯಿಂದ ನಡೆಯುತ್ತಿದ್ದ ಜಾತ್ರೋತ್ಸವವನ್ನು ರದ್ದುಗೊಳಿಸಿ ದ್ದರಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ಇಳಿಕೆಯಾಗಿತ್ತು. ಇದರೊಂದಿಗೆ ಗವಿ ಬೆಟ್ಟಕ್ಕೆ ತೆರಳಲು ಪ್ರವೇಶ ನಿರ್ಬಂಧಿಸಲಾಗಿತ್ತು.
ದೇವಾಲಯ ಸಮಿತಿಯ ಪ್ರಮುಖರು, ಗ್ರಾಮಸ್ಥರು ಇಂದು ಬೆಳಿಗ್ಗೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸಿ ಸಾಂಪ್ರದಾಯಿಕ ವಿಧಿಗಳನ್ನು ನೆರವೇರಿಸಿದರು. ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿದ್ದರು.
ಶ್ರೀಬಸವೇಶ್ವರ ಹಾಗೂ ಸ್ವರ್ಣಗೌರಿ ಹೊನ್ನಮ್ಮತಾಯಿ ಸೇವಾ ಸಮಿತಿಯ ಅಧ್ಯಕ್ಷ ಡಿ.ಬಿ. ಯೋಗೇಶ್ಕುಮಾರ್, ಕಾರ್ಯದರ್ಶಿ ಚಂದ್ರಶೇಖರ್ ಸೇರಿದಂತೆ ಸಮಿತಿ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
ಗೌರಿ ಹಬ್ಬದ ಸಂಭ್ರಮ
ಜಿಲ್ಲೆಯಾದ್ಯಂತ ಗೌರಿ ಹಬ್ಬವನ್ನು ಸರಳವಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗಿದೆ. ಮನೆಮನೆಗಳಲ್ಲಿ ಮುತ್ತೈದೆಯರು ಗೌರಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ದೇವಾಲಯಗಳಲ್ಲೂ ವಿಶೇಷ ಪೂಜೆ, ಪುನಸ್ಕಾರಗಳು ನೆರವೇರಿದವು.
ಕೊರೊನಾ ವೈರಸ್ನ ಆತಂಕದ ನಡುವೆಯೂ ಗೌರಿ ಹಬ್ಬವನ್ನು ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮ ವ್ಯಾಪ್ತಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಹಬ್ಬದ ಹಿನ್ನೆಲೆ ನಿನ್ನೆ ಸಂಜೆ ಹಾಗೂ ಇಂದು ಬೆಳಗ್ಗೆ ಪಟ್ಟಣದಲ್ಲಿ ಸಾರ್ವಜನಿಕರ ಓಡಾಟ ಅಧಿಕವಿತ್ತು. ಹಬ್ಬಕ್ಕೆ ಹೊಸ ಬಟ್ಟೆ ಖರೀದಿ, ಪೂಜಾ ಕಾರ್ಯಗಳಿಗೆ ಹೂವು, ಹಣ್ಣು ಖರೀದಿಯ ಭರಾಟೆ ಜೋರಾಗಿ ನಡೆಯಿತು.
ಪಟ್ಟಣದ ಸಾರ್ವಜನಿಕ ಶ್ರೀ ಗಣಪತಿ ಸೇವಾ ಸಮಿತಿಯ ವತಿಯಿಂದ ಖಾಸಗಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಶ್ರೀಗೌರಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಇದರೊಂದಿಗೆ ಆಲೇಕಟ್ಟೆಯ ಭಾರತೀಯ ಯುವಕ ಸಂಘ, ಪಟ್ಟಣದ ರಾಮಮಂದಿರ, ಬಸವೇಶ್ವರ ದೇವಾಲಯ, ಸೋಮೇಶ್ವರ ದೇವಾಲಯ, ದೇವಾಂಗ ಸಂಘ ಸೇರಿದಂತೆ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಒಟ್ಟು 20 ಕಡೆಗಳಲ್ಲಿ ಗೌರಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಪ್ರತಿ ವರ್ಷ 50ಕ್ಕೂ ಅಧಿಕ ಸ್ಥಳಗಳಲ್ಲಿ ಗೌರಿಗಣೇಶ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ದಿನಂಪ್ರತಿ ವಿಶೇಷ ಪೂಜೆಗಳನ್ನು ನೆರವೇರಿಸಿ, 11 ನೇ ದಿನಕ್ಕೆ ಅದ್ಧೂರಿಯಾಗಿ ಉತ್ಸವ ಮೂರ್ತಿಗಳ ವಿಸರ್ಜನೆ ನಡೆಯುತ್ತಿತ್ತು.
ಆದರೆ ಈ ಬಾರಿ ಕೊರೊನಾ ವೈರಸ್ ಹಿನ್ನೆಲೆ ಸರ್ಕಾರದಿಂದ, ಸಾರ್ವಜನಿಕವಾಗಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಹಲವಷ್ಟು ನಿಯಮಾವಳಿಗಳನ್ನು ಅಳವಡಿಸಿದ್ದರಿಂದ ಸಂಘ ಸಂಸ್ಥೆಗಳು ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಹೆಚ್ಚಿನ ಉತ್ಸಾಹ ತೋರಿಲ್ಲ. ಆದರೂ ದೇವಾಲಯ ಸಮಿತಿಗಳು, ಕೆಲವೊಂದು ಸಂಘ ಸಂಸ್ಥೆಗಳ ಮೂಲಕ ಕೆಲವೆಡೆ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸ ಲಾಗುತ್ತಿದೆ. ಈ ಬಾರಿ ಮೂರನೇ ದಿನಕ್ಕೆ ಬಹುತೇಕ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲು ಸಂಘ ಸಂಸ್ಥೆಗಳು ತೀರ್ಮಾನಿಸಿವೆ.
ವೀರಾಜಪೇಟೆಯಲ್ಲಿ ಮುತ್ತೈದೆಯರಿಂದ ಬಾಗಿನ
ವೀರಾಜಪೇಟೆ : ಐತಿಹಾಸಿಕ ಹಿನ್ನೆಲೆಯುಳ್ಳ ಗೌರಿ ವ್ರತದ ಅಂಗವಾಗಿ ಇಂದು ಇಲ್ಲಿನ ಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಸ್ಥಾನದ ಗೌರಿಗಣೇಶ ಉತ್ಸವ ಸಮಿತಿಯಿಂದ ಬಸವೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಗೌರಿ ಪಲ್ಲಕ್ಕಿ ಉತ್ಸವದಲ್ಲಿ ಇಂದು ಬೆಳಗಿನಿಂದ ಸಂಜೆಯವರೆಗೆ ನೂರಾರು ಮಂದಿ ಮುತ್ತೈದೆಯರು ಸಾಂಪ್ರದಾಯಿಕ ಬದ್ಧವಾಗಿ ಬಾಗಿನ ಅರ್ಪಿಸಿದರು.
ಬೆಳಿಗ್ಗೆ 7ರಿಂದ 9ಗಂಟೆಯ ಅವಧಿಯಲ್ಲಿ ಮೆರವಣಿಗೆ ಯಾವುದೇ ಸದ್ದುಗದ್ದಲವಿಲ್ಲದೆ ವಿಧಿವಿಧಾನ ಗಳಿಗನುಸಾರವಾಗಿ ಗಂಗಾ ಪೂಜೆ ಸಲ್ಲಿಸಿ ಬಸವೇಶ್ವರ ದೇವಾಲಯಕ್ಕೆ ಗೌರಿಯನ್ನು ತಂದು ಮುತ್ತೈದೆಯರು ಬಾಗಿನ ಅರ್ಪಿಸಲು ದೇವಾಲಯದ ಪಲ್ಲಕ್ಕಿಯಲ್ಲಿ ಇರಿಸಲಾಯಿತು.
ಕೋವಿಡ್ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಯನ್ನು ಅನುಸರಿಸಿ ಉತ್ಸವ ಸಮಿತಿಯು ಇಂದು ಮುಖ್ಯಬೀದಿಗಳಲ್ಲಿ ಗೌರಿ ಪಲ್ಲಕ್ಕಿ ಉತ್ಸವ ರದ್ದು ಪಡಿಸಿ ಗೌರಿಯನ್ನು ದೇವಾಲಯದಲ್ಲಿಯೇ ಬಾಗಿನ ಅರ್ಪಿಸಿ ಪೂಜಿಸುವಂತೆ ವ್ಯವಸ್ಥೆ ಮಾಡಲಾಗಿತ್ತು.
ಮುತ್ತೈದೆಯರಿಗೆ ಬಾಗಿನ ಅರ್ಪಿಸಲು ಬೆಳಗಿನ 9.30 ರಿಂದ ಸಂಜೆ 6.30 ರವರೆಗೆ ಅವಕಾಶ ಮಾಡಿಕೊಡಲಾಗಿತ್ತು. ನಂತರ ರಾತ್ರಿ 7 ಗಂಟೆಗೆ ಪಲ್ಲಕ್ಕಿಯಲ್ಲಿದ್ದ ಗೌರಿ ಮೂರ್ತಿಯನ್ನು ದೇವಾಲಯದ ಗರ್ಭಗುಡಿಯಲ್ಲಿ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿ ಮಹಾಪೂಜಾ ಸೇವೆಯೂ ನಡೆಯಿತು. ಕೋವಿಡ್ ನಿಯಮದಂತೆ ಥರ್ಮಲ್ ಸ್ಕ್ರೀನ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಕೆ ಕಡ್ಡಾಯವಾಗಿತ್ತು.
ಪೊನ್ನಂಪೇಟೆಯಲ್ಲಿ ಗೌರಿ ಪ್ರತಿಷ್ಠಾಪನೆ
ಪೆÇನ್ನಂಪೇಟೆ: ಶ್ರೀ ಬಸವೇಶ್ವರ ದೇವಸ್ಥಾನ ಸೇರಿದಂತೆ ಪೆÇನ್ನಂಪೇಟೆ ವ್ಯಾಪ್ತಿಯ 8 ಕಡೆಗಳಲ್ಲಿ ಇಂದು ಗೌರಿ ಪ್ರತಿಷ್ಠಾಪನೆ ಮಾಡಲಾಯಿತು. ಬೆಳಿಗ್ಗೆ 6 ಗಂಟೆಗೆ ಇಲ್ಲಿನ ಗೌರಿ ಕೆರೆಗೆ ತೆರಳಿ ಪೂಜೆ ಸಲ್ಲಿಸಿ ಗೌರಿ ಕರೆತಂದು , ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಪ್ರತಿಷ್ಠಾಪನೆ ಮಾಡಲಾಯಿತು.
ಕೃಷ್ಣ ನಗರದ ಕೃಷ್ಣ ಯುವಕ ಸಂಘ, ಶಿವ ಕಾಲೋನಿಯ ಶಿವ ಯುವಕ ಸಂಘ, ಕಾಟ್ರಕೊಲ್ಲಿಯ ಗೆಳೆಯರ ಬಳಗ, ಮುಖ್ಯ ರಸ್ತೆಯಲ್ಲಿರುವ ವಿಘ್ನೇಶ್ವರ ವಾಹನ ಚಾಲಕ ಮಾಲೀಕರ ಸಂಘ, ಜೋಡುಬೀಟಿಯ ವಿನಾಯಕ ಯುವಕ ಸಂಘ, ಮಹಾತ್ಮ ಗಾಂಧಿ ನಗರದ ಯುವ ಶಕ್ತಿ ಯುವಕರ ಸಂಘ ಹಾಗೂ ಇದೇ ಮೊದಲ ಬಾರಿಗೆ ಕಾವೇರಿ ನಗರದ ಚಿಕ್ಕ ಮಕ್ಕಳು ಗೌರಿ ಪ್ರತಿಷ್ಠಾಪನೆ ಮಾಡಿದರು.
ಅರ್ಚಕರಾದ ನಾಗರಾಜ್ ಭಟ್ ಹಾಗೂ ರಮೇಶ್ ಪೂಜಾ ಕಾರ್ಯ ನೆರವೇರಿಸಿದರು. ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಕಾಂತರಾಜು, ಕಾರ್ಯದರ್ಶಿ ಮಂಜುನಾಥ್, ವಿವಿಧ ಸಂಘಗಳ ಅಧ್ಯಕ್ಷರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಸಲುವಾಗಿ ಕಡಿಮೆ ಸದಸ್ಯರು ಹಾಜರಿದ್ದರು.
ಕೂಡಿಗೆ: ಕೂಡಿಗೆ ತೊರೆನೂರು ಹೆಬ್ಬಾಲೆ ಶಿರಂಗಾಲ ಗ್ರಾಮಗಳ ವ್ಯಾಪ್ತಿಯಲ್ಲಿ ಗೌರಿ ಗಣೇಶ ಹಬ್ಬದ ಮೊದಲ ದಿನ ಗೌರಿ ಪೂಜೆಯು ಮಹಿಳೆಯರಿಂದ ಶ್ರದ್ಧಾಭಕ್ತಿಯಿಂದ ನಡೆಯಿತು.
ಗೌರಿ ಪೂಜೆ ಅಂಗವಾಗಿ ಮಂಗಳ ಗೌರಿ ವಿಗ್ರಹಕ್ಕೆ ಗಂಗೆ ಪೂಜೆ ಸಲ್ಲಿಸಿ ನಂತರ ಸುಮಂಗಲಿಯರು ಒಂದೆಡೆ ಸೇರಿ ಅರಿಶಿಣ ಕುಂಕುಮ ನೀಡುವ ಮೂಲಕ ಗೌರಿ ರಕ್ಷೆ ಕಟ್ಟಿ ಸಂಪ್ರದಾಯದಂತೆ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಶನಿವಾರಸಂತೆ : ಪಟ್ಟಣದ ಜನತೆ ಶುಕ್ರವಾರ ಶ್ರೀಗೌರಿ ಹಬ್ಬವನ್ನು ಸರ್ಕಾರದ ಮಾರ್ಗಸೂಚಿ ನಿಯಮಾ ನುಸಾರ ಸರಳವಾಗಿ ಸಂಪ್ರದಾಯ ಬದ್ಧವಾಗಿ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಎಂದಿನ ಸಂಭ್ರಮ - ಸಡಗರ ಇಲ್ಲವಾದರೂ ಮನೆ ಮನೆಯಲ್ಲೂ ಸರಳ ಆಚರಣೆಯ ಸಂತೃಪ್ತಿಯ ಭಾವವಿತ್ತು.
ಪಟ್ಟಣದ ತ್ಯಾಗರಾಜ ಕಾಲೋನಿಯ ವಿಜಯ ವಿನಾಯಕ ದೇವಾಲಯದಲ್ಲಿ ಅರ್ಚಕ ಮಂಜುನಾಥ್ ಶರ್ಮ ಅವರ ನೇತೃತ್ವದಲ್ಲಿ ಕಲಶ ಹೊತ್ತ ಮೂವರು ಮುತ್ತೈದೆಯರೊಂದಿಗೆ ಬೆಳರಣಿಕೆಗೆ ಭಕ್ತರು ಗಂಗೆ ಪೂಜೆ ಮಾಡಿ, ಗೌರಿಯನು ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದರು. ಮಡಿಲಕ್ಕಿ ತುಂಬಿಸಿ, ನೈವೇದ್ಯ ಸಮರ್ಪಿಸಿದರು. ಆದರ್ಶ ವಿಜಯ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಎಸ್.ಆರ್. ಮಧು, ಉಪಾಧ್ಯಕ್ಷ ಶೇಷಗಿರಿ, ಕಾರ್ಯದರ್ಶಿ ಕುಮಾರ್, ಖಜಾಂಚಿ ಯಶವಂತ್, ಸಂದೀಪ್ ಮತ್ತಿತರ ಸದಸ್ಯರು ಹಾಜರಿದ್ದರು.
ಗ್ರಾಮದೇವತೆ ಬೀರಲಿಂಗೇಶ್ವರ ಪ್ರಬಲೆ ಬೈರವಿ ಗುಡಿ ಹಾಗೂ ಗಣಪತಿ ಚಂದ್ರಮೌಳೇಶ್ವರ ಪಾರ್ವತಿ ದೇವಾಲಯದಲ್ಲೂ ಅರ್ಚಕ ಮಹಾಂತೇಶ್ ಭಟ್ಟರು ಗೌರಿಯನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯ ನೆರವೇರಿಸಿದರು. ಸಮಿತಿ ಪದಾಧಿಕಾರಿಗಳು, ಬೆರಳೆಣಿಕೆ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.
ಸುಂಟಿಕೊಪ್ಪ: ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ 56ನೇ ವರ್ಷದ ಸ್ವರ್ಣ ಗೌರಿ ಮೆರವಣಿಗೆ ಮತ್ತು ಪ್ರತಿಷ್ಠಾಪನಾ ಕಾರ್ಯಕ್ರಮ ಸಂಪ್ರಾದಾಯದಂತೆ ಸರಳ ರೀತಿಯಲ್ಲಿ ಶ್ರೀರಾಮ ಮಂದಿರದಲ್ಲಿ ನೆರವೇರಿಸಲಾಯಿತು.
ಬೆಳಿಗ್ಗೆ ಇಲ್ಲಿನ ರಾಮ ಮಂದಿರದಿಂದ ಬೆಳಿಗ್ಗೆ 8.30 ಗಂಟೆಗೆ ಹೊರಟು ಪಟ್ಟೆಮನೆ ಗೌರಮ್ಮ ಅವರ ಬಾವಿಯಿಂದ ಗಂಗಾಜಲವನ್ನು ತರುವುದರೊಂದಿಗೆ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಂತರ ಪುಷ್ಪ ಅಲಂಕೃತವಾದ ಮಂಟಪದಲ್ಲಿ ಗೌರಮ್ಮನನ್ನು ಕುಳ್ಳಿರಿಸಿ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮೂಲಕ ಸಾಗಿ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಯಿತು. ಮಧ್ಯಾಹ್ನ 12 ಗಂಟೆಗೆ ವಿಶೇಷ ಪೂಜೆ, ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಪೂಜಾ ವಿಧಿವಿಧಾನಗಳನ್ನು ಹಿರಿಯ ಅರ್ಚಕ ಗಣೇಶ ಶರ್ಮಾ, ಮಂಜುನಾಥ್ ಭಟ್, ದರ್ಶನ್ ಭಟ್, ಮನೋಜ್ ಭಟ್ ನೆರವೇರಿಸಿದರು.
ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್, ಪಿ.ಲೋಕೇಶ್ ಎಂ.ಆರ್.ಶಶಿ, ಎಸ್.ರವಿ, ಕಾರ್ಯದರ್ಶಿ ಸುರೇಶ್ ಗೋಪಿ, ಟಿ.ಕೆ.ರಾಕೇಶ್, ಶಾಂತರಾಮ ಕಾಮತ್, ಧನುಕಾವೇರಪ್ಪ, ಪಿ.ಆರ್.ಸುನಿಲ್ ಕುಮಾರ್, ವಿಶ್ವಹಿಂದೂ ಪರಿಷತ್ಅಧ್ಯಕ್ಷ ಎ.ಶ್ರೀಧರ್ಕುಮಾರ್, ಕೆ.ಪ್ರಕಾಶ್, ಸೂರ್ಯ, ಅರುಣ್ಕುಮಾರ್, ಕೆ.ಮಧು, ಬಿ.ವಿ.ತೇಜಸ್, ಎಸ್.ಪೃಥ್ವಿರಾಜ್, ಎಸ್.ರವಿ, ಎಂ.ಆರ್.ಶಶಿಕುಮಾರ್, ಎಂ.ಎಸ್.ಸುನಿಲ್, ಪಿ.ಆರ್. ಸುನಿಲ್ಕುಮಾರ್, ಪಿ.ಆರ್. ಸುಕುಮಾರ್, ಪಟ್ಟೆಮನೆ ಉದಯ ಕುಮಾರ್ ಹಾಗೂ ಬಿ.ಕೆ.ಪ್ರಶಾಂತ್ ಇತರರು ಇದ್ದರು.
ಗಣಪತಿ ಪ್ರತಿಷ್ಠಾಪನೆ: ತಾ 22 ರಂದು (ಇಂದು) 8.30 ಗಂಟೆಗೆ ಗಣಹೋಮ ಬೆಳಿಗ್ಗೆ 11.5ಕ್ಕೆ ಗಣಪತಿ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ರಂಗ ಪೂಜೆ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನೆರವೇರಲಿದೆ.
ಕಣಿವೆ : ಶ್ರಾವಣ ಮಾಸ ಮುಗಿದೊಡನೆ ಧಾವಿಸುವ ಗೌರಿ ಹಬ್ಬವನ್ನು ಕಣಿವೆ, ಹೆಬ್ಬಾಲೆ, ಶಿರಂಗಾಲ, ತೊರೆನೂರು ಮೊದಲಾದ ಕಡೆಗಳಲ್ಲಿ ಭಕ್ತ ಮಹಿಳೆಯರು ಶುಕ್ರವಾರ ಶ್ರದ್ಧೆಯಿಂದ ಆಚರಿಸಿದರು. ಬೆಳಗಾಗಿ ಬೇಗೆದ್ದು ಮನೆ - ಮನಗಳನ್ನು ಸ್ವಚ್ಛಗೊಳಿಸಿದ ಮಹಿಳೆಯರು ತವರಿಂದ ಕೊಟ್ಟ ಹೊಸ ಸೀರೆಗಳನ್ನು ತೊಟ್ಟು ಮನೆಯಲ್ಲಿ ಗೌರಿ ಪೂಜೆ ನೆರವೇರಿಸಿದರು. ಅಲ್ಲದೇ ಸ್ಥಳೀಯ ದೇವಾಲಯಗಳಿಗೆ ತೆರಳಿ ನೆರೆಹೊರೆ ಮನೆಗಳ ಸುಮಂಗಲಿಯರೊಂದಿಗೆ ಸೇರಿ ಗೌರಿ ಪೂಜಿಸಿದ್ದಲ್ಲದೇ, ಅರಿಶಿಣ -ಕುಂಕುಮ ಗಳ ಸೌಭಾಗ್ಯವನ್ನು ಪ್ರತಿಷ್ಠಾಪಿತ ಗೌರಮ್ಮ ತಾಯಿಯಲ್ಲಿ ಬೇಡಿದರು. ಹಾಗೆಯೇ ಪರಸ್ಪರ ಅರಿಶಿಣ ಕುಂಕುಮವನ್ನು ವಿನಿಮಯ ಮಾಡಿಕೊಂಡರು. ಕೂಡು ಮಂಗಳೂರಿನ ಬನದೊಳಗಿನ ದೊಡ್ಡಮ್ಮ ದೇವಾಲಯ, ಹೆಬ್ಬಾಲೆಯ ಕಾಳಿಕಾಂಭ ಹಾಗೂ ಬನಶಂಕರಿ ದೇವಾಲಯ, ಶಿರಂಗಾಲದ ಮಂಟಿಗಮ್ಮ ದೇವಾಲಯ, ಕಣಿವೆಯ ರಾಮಲಿಂಗೇಶ್ವರ ಸನ್ನಿಧಿಯ ಕಾವೇರಿ ನದಿಯಲ್ಲಿ ಗೌರಮ್ಮನನ್ನು ಮಹಿಳೆಯರು ಪೂಜಿಸಿ ಮನೆಗೆ ಕೊಂಡೊಯ್ದರು.