ಗದ್ದುಗೆ-ಜಾಗ-ಅತಿಕ್ರಮಣ-ತೆರವಿಗೆ-ಆಗ್ರಹ

ಮಡಿಕೇರಿ, ಆ. 1: ಮಡಿಕೇರಿಯ ಐತಿಹಾಸಿಕ ರಾಜರ ಗದ್ದುಗೆ ಹಾಗೂ ರಾಜಗುರುಗಳ ಸನ್ನಿಧಿಗೆ ಸಂಬಂಧಿಸಿದಂತೆ ಇರುವ ಹತ್ತಾರು ಎಕರೆ ಜಾಗ ಅತಿಕ್ರಮಣವನ್ನು ತೆರವುಗೊಳಿಸಲು ದಶಕದ ಹಿಂದೆಯೇ ರಾಜ್ಯ ಉಚ್ಚನ್ಯಾಯಾಲಯ ಆದೇಶಿಸಿದ್ದರೂ, ಕಂದಾಯ ಇಲಾಖೆ ನಿರ್ಲಕ್ಷ್ಯ ತಳೆದಿದ್ದು, ಈ ಕೂಡಲೇ ತೆರವುಗೊಳಿಸುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಲಾಗಿದೆ. ಈ ಸಂಬಂಧ ಇಂದು ಕೊಡಗು ಜಿಲ್ಲಾ ವೀರಶೈವ ಸಮಾಜದ ಪ್ರಮುಖರಾದ ವೀರೇಶ್,  ಡಿ.ಬಿ. ಧರ್ಮಪ್ಪ ಹಾಗೂ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.ಹಿಂದಿನ ಗದ್ದುಗೆ ವ್ಯವಸ್ಥಾಪನಾ ಸಮಿತಿ ಮತ್ತು ಕೊಡಗು ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಬಿ. ರವಿಕುಶಾಲಪ್ಪ ಮತ್ತಿತರರು ಹಾಜರಿದ್ದು, ಉಚ್ಚ ನ್ಯಾಯಾಲಯದ ಆದೇಶದಂತೆ ಈ ಅತಿಕ್ರಮಣ ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಗಮನ ಸೆಳೆದರು. ಈ ಬಗ್ಗೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಉಪ ವಿಭಾಗಾಧಿಕಾರಿ ಟಿ. ಜವರೇಗೌಡ ಅವರನ್ನು ಕರೆದು ಚರ್ಚಿಸುವ ಮೂಲಕ ಒಂದು ವಾರದೊಳಗೆ ತಮಗೆ ಸೂಕ್ತ ಕ್ರಮದ ಮಾಹಿತಿ ಒದಗಿಸುವಂತೆ ಸಲಹೆ ನೀಡಿದರು.

ಅಲ್ಲದೆ ಉಚ್ಚ ನ್ಯಾಯಾಲಯ ಅತಿಕ್ರಮಣ ಜಾಗದ ತೆರವಿಗೆ ನಿರ್ದೇಶಿಸಿ ಸುಮಾರು ಹತ್ತು ವರ್ಷಗಳೇ ಕಳೆದಿದ್ದರೂ ಈ ತನಕ ಯಾವ ಕ್ರಮವೂ ಜರುಗಿಸದಿರುವ ಕುರಿತು ಬೇಸರ ವ್ಯಕ್ತಪಡಿಸಿದರು. 
(ಮೊದಲ ಪುಟದಿಂದ)
ಅಧ್ಯಕ್ಷರಿಗೆ ಮನವಿ : ಸ್ವಾಮೀಜಿ ಹಾಗೂ ಇತರ ಮುಖಂಡರ ನಿಯೋಗ, ಕರ್ನಾಟಕ ಸರಕಾರಿ ಭೂ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿರುವ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರಿಗೂ ಮನವಿ ಸಲ್ಲಿಸಿ, ಗದ್ದುಗೆ ಸೇರಿದಂತೆ ಕೊಡಗಿನಲ್ಲಿ ಇತರ ದೇವಾಲಯಗಳ ಸಹಿತ ಸರಕಾರಿ ಜಮೀನು ಅತಿಕ್ರಮಣ ತೆರವಿಗೆ ಬೇಡಿಕೆ ಸಲ್ಲಿಸಿತು.
ಈ ಸಂಬಂಧ ಸ್ವಾಮೀಜಿ ಮತ್ತು ಪ್ರಮುಖರೊಂದಿಗೆ ಸಮಾಲೋಚಿಸಿದ ಶಾಸಕರು, ಸಂಬಂಧಿಸಿದ ಅಧಿಕಾರಿಗಳಿಗೆ ಸರಕಾರದಿಂದ ಸೂಕ್ತ ನಿರ್ದೇಶನ ದೊಂದಿಗೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವದು ಎಂದು ಆಶ್ವಾಸನೆ ನೀಡಿದರು.
 

Home    About us    Contact