ಬಿಜೆಪಿಯಲ್ಲಿ-ಮಾತ್ರ-ಹೊಸ-ತಲೆಮಾರಿನ-ನಾಯಕತ್ವಕ್ಕೆ-ಅವಕಾಶ-:-ಪ್ರತಾಪ್‍ಸಿಂಹ

ಸೋಮವಾರಪೇಟೆ, ಆ. 1: ಭಾರತೀಯ ಜನತಾ ಪಾರ್ಟಿಯಲ್ಲಿ ಮಾತ್ರ ಹೊಸ ತಲೆಮಾರಿನ ನಾಯಕತ್ವಕ್ಕೆ ಅವಕಾಶ ವಿದ್ದು, ಪಕ್ಷ ನೀಡಿರುವ ಜವಾಬ್ದಾರಿಯನ್ನು ಪರಿಣಾ ಮಕಾರಿಯಾಗಿ ನಿರ್ವಹಿಸುತ್ತೇನೆ ಎಂದು ಕರ್ನಾಟಕ ರಾಜ್ಯ ಭಾರತೀಯ ಜನತಾ ಪಾರ್ಟಿಯ ಉಪಾಧ್ಯಕ್ಷ ರಾಗಿ ನಿಯುಕ್ತಿ ಗೊಂಡಿರುವ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಿಸಿದ್ದಾರೆ.  ಈವರೆಗೆ ಪಕ್ಷದಲ್ಲಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಸ್ಥಾನವನ್ನು ನಿಭಾಯಿಸುತ್ತಿದ್ದ ಪ್ರತಾಪ್ ಸಿಂಹ ಅವರು ಇದೀಗ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದು, ಈ ಸಂದರ್ಭದಲ್ಲಿ ‘ಶಕ್ತಿ’ಯೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ‘ಶಕಿ’್ತ-ಯುವ ಮೋರ್ಚಾದಿಂದ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಬಡ್ತಿ ಹೊಂದಿದ ಬಗ್ಗೆ ಪ್ರತಾಪ್ ಸಿಂಹ: ಯುವ ಮೋರ್ಚಾದಲ್ಲಿ ಅಧ್ಯಕ್ಷರಾಗಿದ್ದವರಿಗೆ ರಾಜ್ಯ ಬಿಜೆಪಿ ಕಾರ್ಯದರ್ಶಿ ಸ್ಥಾನ ನೀಡುತ್ತಿದ್ದರು. ಆದರೆ ಒಂದು ಹೆಜ್ಜೆ ಮುಂದೆ ಹೋಗಿ ನಮಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿದ್ದಾರೆ. ಪಕ್ಷ ಹೆಚ್ಚಿನ ಜವಾಬ್ದಾರಿ ನೀಡಿದೆ. ಪಕ್ಷ ನನ್ನ ಮೇಲೆ ಹೆಚ್ಚಿನ ವಿಶ್ವಾಸವಿಟ್ಟಿರುವದು ಇದರಿಂದ ತಿಳಿಯುತ್ತದೆ.

‘ಶಕ್ತಿ’-ಕೊಡಗು ಹೊರತುಪಡಿಸಿ ದಂತೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗಿಂತ ಇತರ ಪಕ್ಷಗಳು ಬಲಿಷ್ಠವಾಗಿದೆ. ಇಂತಹ ಪ್ರದೇಶದಲ್ಲಿ ಪಕ್ಷ ಸಂಘಟನೆ ಹೇಗೆ?
ಪ್ರತಾಪ್ ಸಿಂಹ: ಹಳೆ ಮೈಸೂರು ಭಾಗವಾದ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಭಾಗದಲ್ಲಿ 33 ಶಾಸಕ ಸ್ಥಾನಗಳಿದ್ದು, 2013-14ರಲ್ಲಿ ಬಿಜೆಪಿಯಿಂದ ಯಾವದೇ ಎಂಎಲ್‍ಎ ಇರಲಿಲ್ಲ. ಇದೀಗ 6 ಮಂದಿ ಶಾಸಕರು ಬಿಜೆಪಿಯವರಿದ್ದಾರೆ. 2023ರ ಚುನಾವಣೆಯಲ್ಲಿ ಇದೇ ಹಳೆ ಮೈಸೂರು ಭಾಗದಿಂದ ಬಿಜೆಪಿ ಶಾಸಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಜಾಸ್ತಿಯಾಗುವ ಅವಕಾಶ ಇದೆ. ಹಾಗಾಗಿ ತನ್ನ ಜವಾಬ್ದಾರಿಯೂ ಜಾಸ್ತಿ ಇದೆ. ಪಕ್ಷ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ.
‘ಶಕ್ತಿ’-ಜೆಡಿಎಸ್ ಪ್ರಾಬಲ್ಯದ ಎದುರು ಬಿಜೆಪಿ ಸಂಘಟನೆ ಹೇಗೆ? 
(ಮೊದಲ ಪುಟದಿಂದ)
ಪ್ರತಾಪ್ ಸಿಂಹ: ತಾನು ಕೊಡಗನ್ನು ಹೊಂದಿಕೊಂಡಂತೆ ಇದೇ ಭಾಗದಿಂದ 2ನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ಬಿಜೆಪಿ ಬೆಳೆಯಲು ಈ ಭಾಗದಲ್ಲಿ ವಿಫುಲ ಅವಕಾಶಗಳಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳು ಹೆಚ್ಚಿದ್ದಾರೆ. ಅವರುಗಳನ್ನು ಬಿಜೆಪಿಗೆ ಮತಗಳನ್ನಾಗಿ ಪರಿವರ್ತಿಸುವ ಕೆಲಸ ಆಗಬೇಕಿದೆ.
‘ಶಕ್ತಿ’-ಲೋಕಸಭೆಗಿಂತ ವಿಧಾನ ಸಭೆಯಲ್ಲಿ ಮತಗಳ ಗಳಿಕೆ ಕಡಿಮೆಯಾಗಿದೆ-ಏಕೆ? 
ಪ್ರತಾಪ್ ಸಿಂಹ: ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಮತಗಳು ಬರುತ್ತಿದ್ದರೂ ವಿಧಾನ ಸಭಾ ಚುನಾವಣೆಯಲ್ಲಿ ಅಷ್ಟಾಗಿ ಮತಗಳು ಲಭಿಸುತ್ತಿಲ್ಲ. ಹಾಗಾಗಿ ಪಕ್ಷವನ್ನು ಕಟ್ಟಬೇಕೆಂಬ ದೃಷ್ಟಿಯಿಂದ ಹಳೆ ಮೈಸೂರು ಭಾಗಕ್ಕೆ ಒಂದು ಪ್ರಧಾನ ಕಾರ್ಯದರ್ಶಿ, ಈರ್ವರು ಉಪಾಧ್ಯಕ್ಷರನ್ನು ಪಕ್ಷ ನೀಡಿದೆ. ಉತ್ತರ ಕರ್ನಾಟಕದಲ್ಲಿ ಉಮೇಶ್ ಕತ್ತಿ, ಪ್ರಭಾಕರ್ ಕೋರೆ, ಕಾರಜೋಳ, ಉದಾಸಿ, ಗದ್ದಿಗೌಡರ್, ಸಂಗಣ್ಣ ಸೇರಿದಂತೆ ಇತರರು ಬೇರೆ ಬೇರೆ ಪಕ್ಷದಿಂದ ಬಿಜೆಪಿಗೆ ಬಂದು ಪಕ್ಷದ ಶಕ್ತಿಯನ್ನು ಜಾಸ್ತಿ ಮಾಡಿದ್ದಾರೆ. ಅದೇ ರೀತಿ ಹಳೆ ಮೈಸೂರು ಭಾಗದಲ್ಲೂ ಕೂಡ ಬೇರೆ ಬೇರೆ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಗೊಳ್ಳಲು ವಿಫುಲ ಅವಕಾಶ ಇದೆ. ಕೇಂದ್ರ ಹಾಗೂ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇರುವದರಿಂದ ಪಕ್ಷ ಸಂಘಟನೆಗೆ ಹೆಚ್ಚಿನ ಬಲ ಬರಲಿದೆ. ಇವರುಗಳ ಬಲದಿಂದ ಪಕ್ಷವನ್ನು ಕಟ್ಟುತ್ತೇವೆ. 
‘ಶಕ್ತಿ’-ಮೋದಿ, ಯಡಿಯೂರಪ್ಪ ಹೆಸರಿನಲ್ಲೇ ಪಕ್ಷ ಸಂಘಟನೆ ಮಾಡ್ತೀರಾ? 
ಪ್ರತಾಪ್ ಸಿಂಹ: ಪ್ರಧಾನಿ ನರೇಂದ್ರ ಮೋದಿ ಅವರು ಎಂದಿಗೂ ಯೂತ್ ಐಕಾನ್ ಇದ್ದ ಹಾಗೆ. ಮೋದಿ ಹೆಸರಿನಲ್ಲಿಯೇ ಪಕ್ಷ ಬೆಳೆಯುತ್ತಿದೆ. ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಇರುವದರಿಂದ ನಮ್ಮ ಶಕ್ತಿ ಜಾಸ್ತಿ ಆಗುತ್ತದೆ. ಇಡೀ ರಾಜ್ಯದಲ್ಲಿ ಬಿಜೆಪಿ ಬೃಹತ್ ಶಕ್ತಿಯಾಗಿ ಬೆಳೆಯುತ್ತದೆ.
‘ಶಕ್ತಿ’-ಪಕ್ಷದಲ್ಲಿ ಉಪಾಧ್ಯಕ್ಷರಾಗಿದ್ದೀರಿ, ಪಕ್ಷ ಹಾಗೂ ಸರ್ಕಾರದ ಮೇಲೂ ಪ್ರಭಾವ ಇರುತ್ತದೆ. ಇದರಿಂದಾಗಿ ಕೊಡಗು ಮೈಸೂರಿನಲ್ಲಿ ಹೆಚ್ಚಿನ ಅಭಿವೃದ್ಧಿ ನಿರೀಕ್ಷಿಸಬಹುದೇ?
ಪ್ರತಾಪ್ ಸಿಂಹ : ತಾನು ಸಂಸದನಾದ ನಂತರ ಎರಡೂ ಜಿಲ್ಲೆಗಳ ಅಭಿವೃದ್ಧಿಗೆ ಯಾವದೇ ತಾರತಮ್ಯ ಮಾಡಿಲ್ಲ. ಲಭ್ಯವಿರುವಷ್ಟು ಅನುದಾನಗಳನ್ನು ನೀಡಿದ್ದೇನೆ. ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ಯಾವದೇ ಕೊರತೆ ಮಾಡಿಲ್ಲ. ಯುವ ಮೋರ್ಚಾ ಅಧ್ಯಕ್ಷನಾಗಿದ್ದಾಗಲೂ ಅಭಿವೃದ್ಧಿ ಕಾರ್ಯಗಳಲ್ಲಿ ಕೊರತೆ ಮಾಡಿಲ್ಲ. ಇದೀಗ ಉಪಾಧ್ಯಕ್ಷ ಆಗಿದ್ದೇನೆ. ಸಂಸದನಾಗಿಯೂ ನನ್ನ ಕೆಲಸ ಮಾಡುತ್ತೇನೆ. ಪಕ್ಷದ ಪ್ರಭಾವವನ್ನು ವಿಸ್ತರಿಸುವ ಕೆಲಸ ಮಾಡಬೇಕಿದೆ. ಕಾರ್ಯಕರ್ತರು ಹಾಗೂ ಪಕ್ಷ ದೊಡ್ಡ ನಿರೀಕ್ಷೆ ಇಟ್ಟಿದ್ದು, ಅದನ್ನು ಉಳಿಸುವ ಕೆಲಸ ಮಾಡುತ್ತೇನೆ ಎಂದರು.
‘ಶಕ್ತಿ’-ಬಿಜೆಪಿಯಲ್ಲಿ ಘಟಾನುಘಟಿ ನಾಯಕರು ಪದವಿಗಳ ಮೇಲೆ ಕಣ್ಣಿಟ್ಟಿದ್ದರೂ ಸಹ ಯುವಕರಾಗಿರುವ ತಮಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ.
ಪ್ರತಾಪ್ ಸಿಂಹ:  ಯುವ ಮೋರ್ಚಾದಲ್ಲಿದ್ದ ವಿಜಯೇಂದ್ರ ಮತ್ತು ನನ್ನನ್ನು ನೇರವಾಗಿ ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ಏರಿಸಿದ್ದಾರೆ. ಪಕ್ಷ ಯುವ ಶಕ್ತಿಯಲ್ಲಿ ಹೆಚ್ಚಿನ  ವಿಶ್ವಾಸ ವಿಟ್ಟಿದೆ. 3ನೇ ಹಂತದ ನಾಯಕರೂ ಸಹ ಬೆಳೆಯಬೇಕು ಎಂಬ ಭಾವನೆ ಹೊಂದಿದೆ ಎಂಬದು ಇದರಿಂದ ವ್ಯಕ್ತವಾಗುತ್ತದೆ. ಯುವ ಮೋರ್ಚಾ ಅಧ್ಯಕ್ಷ ಆದ ಸಂದರ್ಭ ರಾಜ್ಯ ಪೂರ್ತಿ ಜವಾಬ್ದಾರಿ ಇತ್ತು. ಇದೀಗ ಪದವಿ ದೊಡ್ಡದಿದ್ದರೂ ಓಡಾಟ ಕೆಲವೇ ಕ್ಷೇತ್ರಗಳಿಗೆ ಸೀಮಿತ ವಾಗಿರುತ್ತದೆ. ಪರಿಣಾಮಕಾರಿಯಾಗಿ ಪಕ್ಷ ಸಂಘಟನೆಗೆ ಇದು ನೆರವಾಗಲಿದೆ.
-ವಿಜಯ್ ಹಾನಗಲ್

Home    About us    Contact